‘ಕ್ರೀಡೆಯಲ್ಲಿ ಸೋಲು ಗೆಲುವಿಗಿಂತ ಪಾಲ್ಗೊಳ್ಳುವಿಕೆ ಮುಖ್ಯ’  – ಶಾಸಕ ವೇದವ್ಯಾಸ ಕಾಮತ್

Spread the love

‘ಕ್ರೀಡೆಯಲ್ಲಿ ಸೋಲು ಗೆಲುವಿಗಿಂತ ಪಾಲ್ಗೊಳ್ಳುವಿಕೆ ಮುಖ್ಯ’  – ಶಾಸಕ ವೇದವ್ಯಾಸ ಕಾಮತ್

ಮಂಗಳೂರು : ಕ್ರೀಡೆಗಳಲ್ಲಿ ಸೋಲುಗೆಲುವಿಗಿಂತ ಪಾಲ್ಗೊಳ್ಳುವಿಕೆ ಮುಖ್ಯ ಎಂದು ಶಾಸಕ ವೇದವ್ಯಾಸ ಕಾಮತ್ ಹೇಳಿದರು.

ಅವರಿಂದು ಕರಾವಳಿ ಉತ್ಸವ ಮೈದಾನದಲ್ಲಿ ಕ್ರೀಡೋತ್ಸವ ಸಮಿತಿ ಆಯೋಜಿಸಿದ ಕ್ರೀಡೋತ್ಸವ ಉದ್ಘಾಟನಾ ಸಮಾರಂಭ ನೆರವೇರಿಸಿ ಮಾತನಾಡಿ, ಪ್ರತಿಭೆಯ ಪ್ರದರ್ಶನಕ್ಕೆ ಅವಕಾಶ ಕಲ್ಪಿಸುವ ಇಂತಹ ಕ್ರೀಡಾಕೂಟಗಳು, ಉತ್ಸವಗಳು ನಿರಂತರ ನಡೆಯುತ್ತಿರಲಿ ಎಂದು ಶುಭ ಹಾರೈಸಿದರು. ಅದರಲ್ಲೂ ಇಂದು ಕ್ರೀಡೋತ್ಸವದಲ್ಲಿ ಪಾಲ್ಗೊಳ್ಳುತ್ತಿರುವ ದಿವ್ಯಾಂಗ ಚೇತನ ಮಕ್ಕಳ ಭಾವನೆಗಳು ಅತ್ಯಂತ ಸಕಾರಾತ್ಮಕವಾಗಿರುವುದನ್ನು ಪ್ರಸ್ತಾಪಿಸಿದ ಅವರು, ಉದ್ಘಾಟನೆ ವೇಳೆ ಬಲೂನು ಹಾರಿಬಿಡುವ ಸಂದರ್ಭದಲ್ಲಿ ಜೊತೆಗಿದ್ದ ದಿವ್ಯಾಂಗ ಚೇತನ ಮಗುವನ್ನು ‘ಬಲೂನು ಹಾರಿಬಿಟ್ಟದ್ದು ಯಾರು?’ ಎಂದು ಕೇಳಿದಾಗ ‘ಎಲ್ಲರೂ’ ಎಂಬ ಮಗುವಿನಿಂದ ಬಂದ ಉತ್ತರ, ಅವರ ಭಾವನೆಗಳು ನಮ್ಮೆಲ್ಲರಲ್ಲೂ ಮೂಡಿದರೆ ಚೇತೋಹಾರಿ ಸಮಾಜ ನಿರ್ಮಾಣ ಸಾಧ್ಯವಾಗಲಿದೆ ಎಂದರು.

ವಿಧಾನಪರಿಷತ್ತಿನ ಸದಸ್ಯರಾದ ಐವನ್ ಡಿ ಸೋಜಾ ಅವರು ಮಾತನಾಡಿ, ಕ್ರೀಡೆಗಳು ವೈಯಕ್ತಿಕ ಬೆಳವಣಿಗೆಗೆ ಪೂರಕ; ಕ್ರೀಡೆಗಳು ಸವಾಲು ಸ್ವೀಕರಿಸಲು ಸಾಧಿಸಲು ದಾರಿಯನ್ನು ತೋರುತ್ತದೆ. ಜಿಲ್ಲೆಯ ಪ್ರತಿಭೆಗಳು ಅನಾವರಣಗೊಳ್ಳಲಿ ಎಂದು ಶುಭಹಾರೈಸಿದರು.

ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಮೀನಾಕ್ಷಿ ಶಾಂತಿಗೋಡು ಶುಭಹಾರೈಸಿ ವಿಶೇಷ ಚೇತನ ಮಕ್ಕಳಿಗಾಗಿ ಆಯೋಜಿಸಿದ ‘ಬಾಚಿ’ ಕ್ರೀಡೆಯಲ್ಲಿ ಮಕ್ಕಳೊಂದಿಗೆ ಪಾಲ್ಗೊಂಡರು.

ಇಂದಿನ ಕ್ರೀಡಾಕೂಟದಲ್ಲಿ ಹ್ಯಾಂಡ್ ಬಾಲ್, ಲಗೋರಿ ಕ್ರೀಡಾ ಸ್ಪರ್ಧೆ ನಡೆಯಲಿದೆ. ನ್ಯೂಜಿಲ್ಯಾಂಡ್ ಮೂಲದ ಬಾಚಿ ಪಂದ್ಯಾವಳಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಮಟ್ಟದ ವಿಶೇಷ ಮಕ್ಕಳಿಗಾಗಿ ಆಯೊಜಿಸಲಾಯಿತು. 29ರಂದು ಡಾನ್ ಬಾಸ್ಕೊ ಹಾಲ್‍ನಲ್ಲಿ ಬೆಳಗ್ಗೆ 8 ಗಂಟೆಗೆ ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ಪುರುಷ ಹಾಗೂ ಮಹಿಳೆಯರಿಗೆ ಮುಕ್ತ ವೇಯ್ಟ್ ಲಿಫ್ಟಿಂಗ್ ಪಂದ್ಯಾಟ ಆಯೋಜಿಸಲಾಗಿದೆ.

ಸಮಾರಂಭದಲ್ಲಿ ಅಂತಾರಾಷ್ಟ್ರೀಯ ಜಾವಲಿನ್ ಕ್ರೀಡಾಪಟು ಪುರಂಧರ ಹೆಗಡೆಯವರನ್ನು ಸನ್ಮಾನಿಸಿ ಗೌರವಿಸಲಾಯಿತು. ಇಲಾಖೆಯಲ್ಲಿ ಸೇವೆ ನೀಡಿದ ಬಾಲಕೃಷ್ಣ ಅವರನ್ನು ಇದೇ ವೇಳೆ ಸನ್ಮಾನಿಸಲಾಯಿತು.

ಉದ್ಘಾಟನಾ ಸಮಾರಂಭದಲ್ಲಿ ಮಹಾನಗರಪಾಲಿಕೆ ಸದಸ್ಯರಾದ ಜಯಂತಿ ಆಚಾರ್, ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಮತ್ತು ಅಧ್ಯಕ್ಷರು ಕರಾವಳಿ ಉತ್ಸವ ಕ್ರೀಡಾ ಸಮಿತಿ ಎಂ. ವಿ. ನಾಯಕ್, ಕಾಲೇಜು ಶಿಕ್ಷಣ ಇಲಾಖೆಯ ಡಾ ಶ್ರೀಧರ ಮಣಿಯಾಣಿ, ದಯಾನಂದ ಮಾಡ, ದೊಡ್ಡಣ, ನಾರಾಯಣ ಎಸ್, ಡಾ ವಸಂತಕುಮಾರ್ ಶೆಟ್ಟಿ, ಎನ್ ವೈಕೆ ಜಿಲ್ಲಾ ಸಮನ್ವಯಕಾರರಾದ ರಘುವೀರ ಸೂಟರ್ ಪೇಟೆ ಉಪಸ್ಥಿತರಿದ್ದರು. ಕ್ರೀಡಾ ಇಲಾಖೆಯ ಉಪನಿರ್ದೇಶಕರಾದ ಪ್ರದೀಪ್ ಡಿ ಸೋಜಾ ಸ್ವಾಗತಿಸಿ ಪ್ರಾಸ್ತಾವಿಕ ನುಡಿಗಳನ್ನಾಡಿದರು.


Spread the love