ಕ್ಷೇತ್ರದ ಮಳೆ ಹಾನಿ ಕಾಮಗಾರಿಗಳಿಗೆ ₹50 ಕೋಟಿ ವಿಶೇಷ ಅನುದಾನಕ್ಕೆ ಸಿಎಂ ಗೆ ಯಶ್ಪಾಲ್ ಸುವರ್ಣ ಮನವಿ

Spread the love

ಕ್ಷೇತ್ರದ ಮಳೆ ಹಾನಿ ಕಾಮಗಾರಿಗಳಿಗೆ ₹50 ಕೋಟಿ ವಿಶೇಷ ಅನುದಾನಕ್ಕೆ ಸಿಎಂ ಗೆ ಯಶ್ಪಾಲ್ ಸುವರ್ಣ ಮನವಿ

ಉಡುಪಿ: ಉಡುಪಿ ವಿಧಾನಸಭಾ ಕ್ಷೇತ್ರವೂ ಸೇರಿದಂತೆ ಉಡುಪಿ ಜಿಲ್ಲೆಯಲ್ಲಿ ವಾಡಿಕೆಗಿಂತ ಅಧಿಕ ಮಳೆಯಾಗುತ್ತಿದ್ದು, ಉಡುಪಿ ವಿಧಾನಸಭಾ ಕ್ಷೇತ್ರದ ಮಳೆ ಹಾನಿ ಸಂಬಂಧಿತ ಕಾಮಗಾರಿಗಳಿಗೆ ₹ 50 ಕೋಟಿ ವಿಶೇಷ ಅನುದಾನವನ್ನು ಮಂಜೂರು ಮಾಡುವಂತೆ ಉಡುಪಿ ಶಾಸಕ ಯಶ್ ಪಾಲ್ ಸುವರ್ಣ ಮುಖ್ಯಮಂತ್ರಿಗಳಿಗೆ ಪತ್ರ ಬರೆದು ಮನವಿ ಮಾಡಿದ್ದಾರೆ.

ಉಡುಪಿ ಜಿಲ್ಲೆಯಲ್ಲಿ ಮೇ ತಿಂಗಳಿನಲ್ಲಿ ವಾಡಿಕೆಯ ಸರಾಸರಿ 166 ಮಿ. ಮೀ. ಬದಲಾಗಿ 837 ಮಿ. ಮೀ. ನಷ್ಟು ಮಳೆಯಾಗಿದ್ದು, ಶೇಕಡಾ 409 ರಷ್ಟು ಹೆಚ್ಚುವರಿ ಮಳೆಯಾಗಿದೆ. ಜೂನ್ ತಿಂಗಳಿನಲ್ಲಿಯೂ ಅತ್ಯಧಿಕ ಮಳೆಯಾಗಿದ್ದು, ದೇಶದಲ್ಲಿಯೇ ಅತ್ಯಧಿಕವಾಗಿ ಉಡುಪಿ ಜಿಲ್ಲೆಯಲ್ಲಿ ದಾಖಲೆಯ ಮಳೆಯಾಗಿರುವುದರ ಬಗ್ಗೆ ಮಾಧ್ಯಮಗಳಲ್ಲಿ ವರದಿಯಾಗಿದೆ.

ನಿರಂತರ ಮಳೆಯಿಂದಾಗಿ ಕ್ಷೇತ್ರದಲ್ಲಿ ಹಲವು ಪ್ರದೇಶಗಳು ಜಲಾವೃತವಾಗಿದ್ದು, ರಕ್ಷಣಾ ಕಾರ್ಯ, ಪುನರ್ವಸತಿ ಕೆಲಸಗಳು ಚುರುಕಾಗಿ ನಡೆಯುತ್ತಿದೆ. ಸಮುದ್ರ ತೀರದಲ್ಲಿ ಕಡಲು ಕೊರೆತದ ಸಮಸ್ಯೆ ಹಲವೆಡೆ ಕಾಣಿಸಿಕೊಂಡಿದೆ. ಸುಂಟರಗಾಳಿ ಮತ್ತು ವಿಪರೀತ ಮಳೆಯಿಂದಾಗಿ ನೂರಾರು ಮರಗಳು ಬಿದ್ದು, ವಿದ್ಯುತ್ ಕಂಬಗಳಿಗೆ, ಮನೆಗಳಿಗೆ ಹಾನಿಯಾಗಿದ್ದು, ರಸ್ತೆ, ಮೋರಿ, ಶಾಲಾ ಕಟ್ಟಡಗಳು, ಕಾಲುಸಂಕಗಳು ಹಾಗೂ ಸೇತುವೆಗಳು ಅಪಾಯದಲ್ಲಿವೆ.

ಕಳೆದ ಎರಡು ವರ್ಷಗಳಿಂದ ಪ್ರಾಕೃತಿಕ ವಿಕೋಪದಡಿ ಅನುದಾನ ಬಿಡುಗಡೆಯಾಗದೆ, ಗ್ರಾಮೀಣ ರಸ್ತೆಗಳ ಸಮರ್ಪಕ ನಿರ್ವಹಣೆಯಿಲ್ಲದೆ ಸಂಚಾರ ದುಸ್ತರವಾಗಿದೆ. ಸಾರ್ವಜನಿಕ ಆಸ್ತಿಪಾಸ್ತಿಗಳ ರಕ್ಷಣೆಗೆ ಹಾಗೂ ದುರಸ್ತಿಗೆ ಸಾಕಷ್ಟು ಅನುದಾನದ ಅಗತ್ಯವಿದ್ದು, ಈ ಬಗ್ಗೆ ಉಡುಪಿ ವಿಧಾನಸಭಾ ಕ್ಷೇತ್ರಕ್ಕೆ ರೂ. 50 ಕೋಟಿ ವಿಶೇಷ ಅನುದಾನವನ್ನು ಪ್ರಾಕೃತಿಕ ವಿಕೋಪದಡಿ ಮಂಜೂರು ಮಾಡುವಂತೆ ಮನವಿ ಮಾಡಿದ್ದಾರೆ.


Spread the love
Subscribe
Notify of

0 Comments
Inline Feedbacks
View all comments