ಖ್ಯಾತ ಇತಿಹಾಸ ಸಂಶೋಧಕ-ಸಾಹಿತಿ ಡಾ. ಕೆ.ಜಿ. ವಸಂತ ಮಾಧವ ನಿಧನ
ಬೆಂಗಳೂರು: ಪ್ರಸಿದ್ಧ ಸಂಶೋಧಕ, ಸಾಹಿತಿ ಹಾಗೂ ನಿವೃತ್ತ ಉಪನ್ಯಾಸಕ ಡಾ. ಕೆ.ಜಿ. ವಸಂತ ಮಾಧವ (ಗುಜ್ಜಾಡಿ ವಸಂತ ಮಾಧವ ಕೊಡಂಚ) ಅವರು ಸೆಪ್ಟೆಂಬರ್ 17ರ ರಾತ್ರಿ ಬೆಂಗಳೂರಿನ ಮಗಳ ಮನೆಯಲ್ಲಿ ನಿಧನರಾದರು. ಅವರಿಗೆ 87 ವರ್ಷ ವಯಸ್ಸಾಗಿತ್ತು. ಅವರು ಪತ್ನಿ, ಒಬ್ಬ ಪುತ್ರ ಮತ್ತು ಒಬ್ಬ ಪುತ್ರಿಯನ್ನು ಅಗಲಿದ್ದಾರೆ.
1937ರ ಏಪ್ರಿಲ್ 9ರಂದು ಜನಿಸಿದ ವಸಂತ ಮಾಧವ ಅವರು ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಇತಿಹಾಸದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದರು. ಕೆನರಾದ ರಾಜಕೀಯ ಇತಿಹಾಸ : 1565-1763 ಎಂಬ ವಿಷಯದ ಮೇಲೆ ಮಹಾಪ್ರಬಂಧ ರಚಿಸಿ ಪಿಎಚ್.ಡಿ. ಪದವಿಗೂ ಪಾತ್ರರಾದರು. ಮುಲ್ಕಿಯ ವಿಜಯಾ ಕಾಲೇಜಿನಲ್ಲಿ 32 ವರ್ಷಗಳ ಕಾಲ ಇತಿಹಾಸ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ ಅವರು ನಿವೃತ್ತಿಯ ನಂತರ ಕೇರಳದ ಕ್ಯಾಲಿಕಟ್ ವಿಶ್ವವಿದ್ಯಾಲಯದಲ್ಲಿ ಸಂಶೋಧನಾ ಪ್ರೊಫೆಸರ್ ಆಗಿ ಸೇವೆ ಸಲ್ಲಿಸಿದ್ದರು.
ವಸಂತ ಮಾಧವ ಅವರು ಕನ್ನಡ ಹಾಗೂ ಇಂಗ್ಲಿಷ್‌ನಲ್ಲಿ ಸುಮಾರು 20ಕ್ಕೂ ಹೆಚ್ಚು ಇತಿಹಾಸ ಗ್ರಂಥಗಳು ಮತ್ತು ಸಾವಿರಾರು ಲೇಖನಗಳನ್ನು ರಚಿಸಿದ್ದರು. ಅವರ ಕುರಿತ ಕೃತಿಯನ್ನು ಡಾ. ಎಸ್. ಪದ್ಮನಾಭ ಭಟ್ಟರು ರಚಿಸಿದ್ದು, ನಾಡಿಗೆ ನಮಸ್ಕಾರ ಗ್ರಂಥಮಾಲೆಯಡಿ ಕಾಂತಾವರ ಕನ್ನಡ ಸಂಘ ಪ್ರಕಟಿಸಿತ್ತು.
ಉಡುಪಿಯ ಗೋವಿಂದ ಪೈ ಸಂಶೋಧನಾ ಕೇಂದ್ರವು ಅವರ ವಿದ್ವತ್ತಿಗೆ ಗೌರವ ಸಲ್ಲಿಸಿತ್ತು. ದಕ್ಷಿಣ ಭಾರತ ಇತಿಹಾಸ ಕಾಂಗ್ರೆಸ್‌ನ ಮೂರನೇ ವಿಶ್ವ ಸಮ್ಮೇಳನದಲ್ಲಿ (ಗೋವಾ) ಅವರನ್ನು ಸನ್ಮಾನಿಸಲಾಗಿತ್ತು. ಅಲ್ಲದೇ ಯುಗಪುರುಷ ಪ್ರಶಸ್ತಿ ಮತ್ತು ಕೋ. ಮ. ಕಾರಂತ ಪ್ರಶಸ್ತಿ ಸೇರಿದಂತೆ ಅನೇಕ ಗೌರವಗಳು ಅವರಿಗೆ ಸಂದಿವೆ.
ಮಂಗಳೂರು, ಮೂಲ್ಕಿ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಘಟಕಗಳು, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಕೂಡ ಅವರನ್ನು ಸನ್ಮಾನಿಸಿವೆ. ಲಂಡನ್ನಿನ ರೋಯಲ್ ಏಷಿಯಾಸ್ಟಿಕ್ ಸೊಸೈಟಿ (1983) ಮತ್ತು ಕಲ್ಕತ್ತಾದ ಇತಿಹಾಸ ಅಧ್ಯಯನ ಸಂಸ್ಥೆ (2019)ಗಳಲ್ಲಿ ಅವರನ್ನು ಫೆಲೋ ಆಗಿ ಗೌರವಿಸಲಾಗಿದೆ.
ಡಾ. ವಸಂತ ಮಾಧವರ ನಿಧನವು ಕರ್ನಾಟಕದ ಇತಿಹಾಸ ಅಧ್ಯಯನ ಕ್ಷೇತ್ರಕ್ಕೆ ಅಪಾರ ನಷ್ಟವೆಂದು ಬೌದ್ಧಿಕ ವಲಯಗಳು ಶೋಕ ವ್ಯಕ್ತಪಡಿಸಿವೆ.