ಗಲಭೆಯಲ್ಲಿ ಆರ್‌.ಎಸ್‌.ಎಸ್ ಪಾತ್ರ ಸಾಬೀತು ಪಡಿಸಿ, ಇಲ್ಲವೇ ಬೇಷರತ್ ಕ್ಷಮೆ ಕೇಳಿ: ನಳಿನ್ ಕಟೀಲ್ ಒತ್ತಾಯ

Spread the love

ಗಲಭೆಯಲ್ಲಿ ಆರ್‌.ಎಸ್‌.ಎಸ್ ಪಾತ್ರ ಸಾಬೀತು ಪಡಿಸಿ, ಇಲ್ಲವೇ ಬೇಷರತ್ ಕ್ಷಮೆ ಕೇಳಿ: ನಳಿನ್ ಕಟೀಲ್ ಒತ್ತಾಯ

ಬೆಂಗಳೂರು: ಕೋಮು ಗಲಭೆಯಲ್ಲಿ ಆರ್‌ಎಸ್‌ಎಸ್ ಮತ್ತು ಅದರ ಸಹ ಸಂಘಟನೆಗಳ ಪಾತ್ರವನ್ನು ಸಾಬೀತು ಪಡಿಸಿ ಇಲ್ಲವೇ ಬೇಷರತ್ ಕ್ಷಮೆ ಕೇಳಿ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸವಾಲು ಹಾಕಿದ್ದಾರೆ.

ಆರ್‌ಎಸ್‌ಎಸ್ ಮತ್ತು ಅದರ ಸಹ ಸಂಘಟನೆಗಳೇ ಕೋಮು ಗಲಭೆಯ ಸಂದರ್ಭದಲ್ಲಿ ಆಗಿರುವ ಹಾನಿಯನ್ನು ತುಂಬಿಕೊಡುವಂತೆ ಮಾಡಬೇಕು ಎಂಬ ಸಿದ್ದರಾಮಯ್ಯ ಅವರ ಹೇಳಿಕೆ ಅತಿರೇಕದಿಂದ ಕೂಡಿದೆ. ಯಾವುದೇ ತನಿಖಾ ಸಂಸ್ಥೆ ಅಥವಾ ವಿಚಾರಣಾ ನ್ಯಾಯಾಲಯಗಳು ದೇಶದ ಯಾವುದೇ ಭಾಗದಲ್ಲಿ ನಡೆದ ಕೋಮು ಗಲಭೆಗಳಲ್ಲಿ ಯಾವತ್ತೂ ಆರ್‌ಎಸ್‌ಎಸ್‌ ಅಥವಾ ಅದರ ಸಹ ಸಂಘಟನೆಗಳು ಕಾರಣ ಎಂದು ಹೇಳಿಲ್ಲ, ಆದರೆ ಸಿದ್ದರಾಮಯ್ಯ ಈ ರೀತಿ ಆರೋಪ ಮಾಡುತ್ತಿದ್ದಾರೆ ಎಂದು ಕಟೀಲ್ ಟೀಕಿಸಿದ್ದಾರೆ.

ಡಿಜೆ ಹಳ್ಳಿ ಮತ್ತು ಕೆ.ಜಿ.ಹಳ್ಳಿ ಗಲಭೆಯಿಂದ ಆದ ಹಾನಿಯನ್ನು ಗಲಭೆಕೋರರಿಂದಲೇ ವಸೂಲಿ ಮಾಡುವ ಸರ್ಕಾರದ ಕ್ರಮಕ್ಕೆ ಪ್ರತಿಯಾಗಿ, ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಗಳಿಗೆ ಕೆಲವು ದಿನಗಳ ಹಿಂದೆ ಬರೆದಿರುವ ತಮ್ಮ 13 ಅಂಶಗಳನ್ನು ಒಳಗೊಂಡ ಎರಡು ಪುಟಗಳ ಪತ್ರದಲ್ಲಿ ಸಂಘ ಪರಿವಾರ ಈ ಹಿಂದೆ ನಡೆದಿರುವ ಕೋಮು ಗಲಭೆಗಳಲ್ಲಿ ಆದ ಹಾನಿಯನ್ನು ತುಂಬಿಕೊಡುವಂತೆ ಮಾಡಬೇಕು ಎಂದು ಉಲ್ಲೇಖಿಸಿರುವುದನ್ನು ಸ್ಮರಿಸಬಹುದಾಗಿದೆ.


Spread the love