ಗುತ್ತಿಗೆದಾರನನ್ನು ಕಪ್ಪು ಪಟ್ಟಿಗೆ ಸೇರಿಸಿ- ಸಂತೋಷ್ ಬಜಾಲ್

Spread the love

ಗುತ್ತಿಗೆದಾರನನ್ನು ಕಪ್ಪು ಪಟ್ಟಿಗೆ ಸೇರಿಸಿ- ಸಂತೋಷ್ ಬಜಾಲ್

ಬಜಾಲ್: ಬಜಾಲ್ ಪಕ್ಕಲಡ್ಕದಿಂದ ಚರ್ಚ್ ವರೆಗಿನ ಮುಖ್ಯ ರಸ್ತೆ ಕಾಮಗಾರಿ ಕೆಲಸ ಕೈಗೊಂಡು ವರ್ಷ ಕಳೆದರೂ ಪೂರ್ಣಗೊಳಿಸಲು ಸಾದ್ಯವಾಗದ ಗುತ್ತಿಗೆದಾರನನ್ನು ಕಪ್ಪು ಪಟ್ಟಿಗೆ ಸೇರಿಸಿರಿ ಎಂದು ಡಿವೈಎಫ್ಐ ದ.ಕ ಜಿಲ್ಲಾ ಕಾರ್ಯದರ್ಶಿ ಸಂತೋಷ್ ಬಜಾಲ್ ಇಂದು ಬಜಾಲ್ ಪಕ್ಕಲಡ್ಕ ಮುಖ್ಯ ರಸ್ತೆಯ ಕಾಂಕ್ರೀಟೀಕರಣ ಕೆಲಸವನ್ನು ಕೂಡಲೇ ಪೂರ್ಣಗೊಳಿಸಲು ಒತ್ತಾಯಿಸಿ ಡಿವೈಎಫ್ಐ ಪಕ್ಕಲಡ್ಕ ಘಟಕದ ನೇತೃತ್ವದಲ್ಲಿ ನಡೆದ ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದರು.

ಸುಮಾರು ಮೂರುವರೆ ಕೋಟಿ ರೂಪಾಯಿ ವೆಚ್ವದ ಯೋಜನೆ ಪಡೆದ ಗುತ್ತಿಗೆದಾರ ಕಂಪೆನಿ ಸರಿಯಾಗಿ ಕೆಲಸ ನಿರ್ವಹಿಸುತ್ತಿಲ್ಲ. ಈ ಗುತ್ತಿಗೆದಾರನ ಜೊತೆ ಸರಿಯಾಗಿ ಸಿಬ್ಬಂದಿಗಳಿಲ್ಲ ಇರುವ ಬೆರಳೆಣಿಕೆಯ ನೌಕರರು ಸರಿಯಾಗಿ ಸಲಕರಣಿಗಳಿಲ್ಲದೆ ಸುತ್ತಮುತ್ತಲಿನ ಜನರಲ್ಲಿ ಕೇಳುವಂತಾಗಿದೆ. ಈ ಬಗ್ಗೆ ಗಮನಹರಿಸ ಬೇಕಾಗಿದ್ದ ಪಾಲಿಕೆ ಇಂಜನೀಯರ್ ಗಳಾಗಲಿ, ಸ್ಥಳೀಯ ಶಾಸಕನಾಗಲಿ ಕಾಮಗಾರಿ ಕೆಲಸಕ್ಕೆ ಸರಿಯಾಗಿ ಮತ್ತುವರ್ಜಿವಹಿಸುತ್ತಿಲ್ಲ ಕಾಮಗಾರಿ ಕೆಲಸ ಇದೇ ರೀತಿ ನಿಧಾನಗತಿಯಲ್ಲಿ ಮುಂದುವರಿದಲ್ಲಿ ಮನಪಾ ಕಮೀಷನರ್ ಕಚೇರಿಗೆ ಮುತ್ತಿಗೆ ಹಾಕಲಾಗುವುದು ಎಂದು ಎಚ್ಚರಿಸಿದರು.

ಡಿವೈಎಫ್ಐ ಮಂಗಳೂರು ನಗರಾದ್ಯಕ್ಷರಾದ ನವೀನ್ ಕೊಂಚಾಡಿ ಮಾತನಾಡಿ ಬಜಾಲ್ ಸುತ್ತಮುತ್ತಲಿನ ಗ್ರಾಮಗಳಲ್ಲಿ ವಾಸಿಸುವಂತ ಬಹುತೇಕರು ಬಡವರು, ಮದ್ಯಮವರ್ಗದವರಾಗಿರುತ್ತಾರೆ. ಈ ಭಾಗಕ್ಕೆ ಮೂಲಭೂತ ಸೌಕರ್ಯಗಳನ್ನು ಕಲ್ಪಿಸುವಲ್ಲಿ ಮಂಗಳೂರು ನಗರ ಪಾಲಿಕೆ ನಿರ್ಲಕ್ಷಿಸಿದೆ. ಈ ಭಾಗದ ಎಲ್ಲಾ ಸೌಕರ್ಯಗಳ ಈಡೇರಿಕೆಗೆ ಜನ ಪ್ರತಿ ಬಾರಿ ಬೀದಿಗೆ ಬರುವಂತಾಗಿದೆ. ಈ ರಸ್ತೆ ಹೋರಾಟವೂ ಯಶಸ್ವಿಯಾಗಲಿ ಮನಪಾ ಸ್ಥಳೀಯ ಸಮಸ್ಯೆ ಕೂಡಲೇ ಪರಿಹರಿಸಲು ಮದ್ಯಪ್ರವೇಶಿಸಬೇಕೆಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಡಿವೈಎಫ್ಐ ಸ್ಥಳೀಯ ಮುಖಂಡರಾದ ದೀಪಕ್ ಬೊಲ್ಲ, ಸ್ಥಳೀಯ ವೈದ್ಯರಾದ ಡಾ. ಪ್ಲಾಯಿಡ್ ಡಿಸೋಜ, ವಿಲ್ಪ್ರೇಡ್ ಡಿಸೋಜ, ಉದಯ ಕುಂಟಲ್ ಗುಡ್ಡೆ, ಅಶೋಕ್ ಸಾಲ್ಯಾನ್, ಶಾಂತಾ ಪಕ್ಕಲಡ್ಕ, ಜಗದೀಶ್ ಕುಲಾಲ್ ಮುಂತಾದವರು ಉಪಸ್ಥಿತರಿದ್ದರು.

ಪ್ರತಿಭಟನೆಯ ನೇತೃತ್ವವನ್ನು ಡಿವೈಎಫ್ಐ ಪಕ್ಕಲಡ್ಕ ಘಟಕದ ಮುಖಂಡರಾದ ಧೀರಾಜ್ ಪಕ್ಕಲಡ್ಕ, ವರಪ್ರಸಾದ್, ಅಶೋಕ್ ಎನೆಲ್ ಮಾರ್, ಪ್ರಕಾಶ್ ಶೆಟ್ಟಿ ಮುಂತಾದವರು ವಹಿಸಿದ್ದರು.

ಪ್ರತಿಭಟನಾ ಸ್ಥಳಕ್ಕಾಗಮಿಸಿದ ಎಕ್ಸಿಕ್ಯೂಟಿವ್ ಇಂಜನೀಯರ್ ನರೇಶ್ ಶೆಣೈ ಹಾಗೂ ಈ ಭಾಗದ ಇಂಜನೀಯರ್ ದರ್ಶನ್ ಪ್ರತಿಭಟನಾ ನಿರತರಿಂದ ಮನವಿ ಸ್ವೀಕರಿಸದರು. ರಸ್ತೆ ಕಾಮಗಾರಿ ಕೂಡಲೇ ಪೂರ್ಣಗೊಳಿಸಲು ಕ್ರಮಕೈಗೊಳ್ಳುತ್ತೇವೆ ತಪ್ಪಿದಲ್ಲಿ ಗುತ್ತಿಗೆದಾರನನ್ನು ಕಪ್ಪುಪಟ್ಟಿಗೆ ಸೇರಿಸುತ್ತೇವೆ ಎಂಬ ಭರವಸೆಯನ್ನು ಈ ವೇಳೆ ನೀಡಿದರು..


Spread the love