ಗೃಹಲಕ್ಷ್ಮಿ ಯೋಜನೆಯ ತಾಂತ್ರಿಕ ಸಮಸ್ಯೆಗೆ ಶೀಘ್ರವೇ ಪರಿಹಾರ –  ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್  

Spread the love

ಗೃಹಲಕ್ಷ್ಮಿ ಯೋಜನೆಯ ತಾಂತ್ರಿಕ ಸಮಸ್ಯೆಗೆ ಶೀಘ್ರವೇ ಪರಿಹಾರ –  ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್  

ಬೆಂಗಳೂರು: ಕರ್ನಾಟಕ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಗಳಲ್ಲಿ ಒಂದಾದ ಗೃಹಲಕ್ಷ್ಮಿ ಯೋಜನೆ ಶೇಕಡ 95ರಷ್ಟು ಮನೆಯ ಒಡತಿಯರಿಗೆ ತಲುಪಿದ್ದು, ತಾಂತ್ರಿಕ ಸಮಸ್ಯೆಗೆ ಶೀಘ್ರವೇ ಪರಿಹಾರ ಸಿಗಲಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ವಿಕಲಚೇತನರ ಹಾಗೂ ಹಿರಿಯ ನಾಗರೀಕರ ಸಬಲೀಕರಣ ಸಚಿವರಾದ ಲಕ್ಷ್ಮೀ ಆರ್ ಹೆಬ್ಬಾಳ್ಕರ್ ಹೇಳಿದ್ದಾರೆ.

ಬೆಂಗಳೂರಿನ ಬಿಡಬ್ಲ್ಯುಎಸ್ಎಸ್ ಬಿ ಕಚೇರಿಯಲ್ಲಿರುವ ಬೆಂಗಳೂರು ಒನ್ ಕೇಂದ್ರದಲ್ಲಿ ನಡೆಯುತ್ತಿರುವ ಗೃಹಲಕ್ಷ್ಮಿ ಯೋಜನೆಯಡಿ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ತರಬೇತಿ ಕುರಿತು ಸಚಿವರು ಮಾಹಿತಿ ಪಡೆದು ಕೊಂಡರು. ಗೃಹಲಕ್ಷ್ಮಿ ಯೋಜನೆ ಕುರಿತು ಆಗಿರುವ ತಾಂತ್ರಿಕ ದೋಷಗಳನ್ನು ಶೀಘ್ರವೇ ಬಗೆಹರಿಸಬೇಕೆಂದು ಸಿಡಿಪಿಒಗಳಿಗೆ ಸೂಚನೆ ನೀಡಿದರು. ತಾಂತ್ರಿಕ ‌ದೋಷ, ಸಿಬ್ಬಂದಿಗಳ ತೊಡಕಿನ ಕುರಿತು ಪರಿಶೀಲನೆ ನಡೆಸಿದರು.

ಶೇಕಡ 95 ರಷ್ಟು ಯಶಸ್ವಿ
ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವರು, ಗೃಹಲಕ್ಷ್ಮಿ ಯೋಜನೆ ಇದುವರೆಗೂ ಶೇಕಡ 95 ರಷ್ಟು ಯಶಸ್ವಿಯಾಗಿದ್ದು, ಸಮಸ್ಯೆಗಳನ್ನು ಬಗೆಹರಿಸುವ ಸಲುವಾಗಿ ಪ್ರತಿದಿನ ಮೂರು ಜಿಲ್ಲೆಗಳ ಸಿಡಿಪಿಒಗಳಿಗೆ ತರಬೇತಿ ನೀಡಲಾಗುತ್ತಿದೆ ಎಂದರು. ಗೃಹಲಕ್ಷ್ಮಿ ಯೋಜನೆಗೆ ಇದುವರೆಗೂ 1 ಕೋಟಿ 16 ಲಕ್ಷದ 65 ಸಾವಿರ ಮಹಿಳೆಯರು ನೋಂದಣಿ ಮಾಡಿಸಿದ್ದಾರೆ. ಈ ಪೈಕಿ ಆಗಸ್ಟ್ ನಲ್ಲಿ ಗೃಹಲಕ್ಷ್ಮಿ ಯರ ಆಕೌಂಟ್ ಗೆ – 2 ಸಾವಿರದ 119 ಕೋಟಿ ಹಣ ಹಾಕಲಾಗಿದ್ದು, ಈ ಮೂಲಕ ಶೇಕಡ 97ರಷ್ಟು ಡಿಬಿಟಿ ಮುಖಾಂತರ ಹಣ ಹಾಕಲಾಗಿದೆ ಎಂದು ಸಚಿವರು ವಿವರಿಸಿದರು. ಆಗಸ್ಟ್ ತಿಂಗಳಲ್ಲಿ ಐದು ಲಕ್ಷ ಕುಟುಂಬಗಳಿಗೆ ತಾಂತ್ರಿಕ ದೋಷದಿಂದ ಹಣ ಹೋಗಿಲ್ಲ. ಸೆಪ್ಟೆಂಬರ್ ನಲ್ಲಿ 82% ಕುಟುಂಬಗಳಿಗೆ ಹಣ ಹಾಕಲಾಗಿದ್ದು 12 ಲಕ್ಷ ಕುಟುಂಬಗಳಿಗೆ ತಾಂತ್ರಿಕ ದೋಷದಿಂದ ಅಥವಾ ಕೆವೈಸಿ ಸಮಸ್ಯೆಯಿಂದ ಹಣ ಬ್ಯಾಂಕ್ ಆಕೌಂಟ್ ನಲ್ಲಿ ಉಳಿದಿದೆ. ಇನ್ನು ಅಕ್ಟೋಬರ್ ನಲ್ಲಿ 2400 ಕೋಟಿ ರೂ ಬಿಡುಗಡೆಯಾಗಿದೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ತಿಳಿಸಿದರು.

ದೀಪಾವಳಿ ವೇಳೆ ಶೇಕಡ 100ರಷ್ಟು ಗುರಿ
ಆಗಸ್ಟ್ 15 ರೊಳಗೆ ನೋಂದಣಿ ಮಾಡಿಕೊಂಡವರಿಗೆ ಇದುವರೆಗೆ ದುಡ್ಡು ಬಾರದೇ ಇದ್ರೆ, ಒಟ್ಟಿಗೆ ಮೂರು ತಿಂಗಳ ಹಣ ಹಾಕಲಾಗುತ್ತದೆ. ಇದುವರೆಗೆ ಹಣ ಬಾರದೇ ಇದ್ರೂ ಪೂರ್ಣ ಬಾಕಿ ಹಣ ಹಾಕಲಾಗುವುದು ಎಂದರು. ದೀಪಾವಳಿ ಹಬ್ಬದ ವೇಳೆಗೆ ಎಲ್ಲಾ ಫಲಾನುಭವಿಗಳಿಗೆ ಹಣ ಹೋಗುವಂತೆ ನೋಡಿಕೊಳ್ಳಲಾಗುವುದು ಎಂದರು. ಹೀಗಾಗಿ ಅಧಿಕಾರಿಗಳಿಗೆ ಟ್ರೈನಿಂಗ್ ನೀಡಲಾಗುತ್ತಿದ್ದು, ಇನ್ನು ಹತ್ತು ದಿನದಲ್ಲಿ ಗೃಹಲಕ್ಷ್ಮಿ ಗೊಂದಲ ಕ್ಲಿಯರ್ ಆಗಲಿದೆ ಎಂದರು.

ಈ ವೇಳೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯು ನಿರ್ದೇಶಕರಾದ ಎಂ.ಎಸ್.ಅರ್ಚನಾ, ಇ-ಗವರ್ನೆನ್ಸ್ ಇಲಾಖೆಯ ನಿರ್ದೇಶಕ ದಿಲೀಶ್ ಉಪಸ್ಥಿತರಿದ್ದರು.


Spread the love