ಗ್ರಾಹಕರ ಅನುಕೂಲಕ್ಕಾಗಿ ಸಣ್ಣ ಪ್ಯಾಕ್‌ಗಳ ಬಿಡುಗಡೆ, ರೂ.10ಕ್ಕೆ ನಂದಿನಿ ಹಾಲು, ಮೊಸರು 

Spread the love

ಗ್ರಾಹಕರ ಅನುಕೂಲಕ್ಕಾಗಿ ಸಣ್ಣ ಪ್ಯಾಕ್‌ಗಳ ಬಿಡುಗಡೆ, ರೂ.10ಕ್ಕೆ ನಂದಿನಿ ಹಾಲು, ಮೊಸರು 

ಮಂಗಳೂರು: ನಂದಿನಿ ಹಾಲು ಮತ್ತು ಮೊಸರು ಇದೀಗ ರೂ. 10 ದರದಲ್ಲಿ ಸಣ್ಣ ಪ್ಯಾಕ್‌ಗಳಲ್ಲೂ ಲಭ್ಯವಾಗಲಿದೆ. ಕರ್ನಾಟಕ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ (ಕೆಎಂಎಫ್) ಗ್ರಾಹಕರ ದೈನಂದಿನ ಅಗತ್ಯಗಳನ್ನು ಗಮನದಲ್ಲಿಟ್ಟುಕೊಂಡು ಈ ಹೊಸ ಪ್ಯಾಕ್‌ಗಳನ್ನು ಪರಿಚಯಿಸಿದೆ.

ಶುಕ್ರವಾರ ವಿಧಾನಸೌಧದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಒಟ್ಟು ಹತ್ತು ಹೊಸ ನಂದಿನಿ ಉತ್ಪನ್ನಗಳನ್ನು ಅಧಿಕೃತವಾಗಿ ಬಿಡುಗಡೆ ಮಾಡಿದರು. ಈ ಪೈಕಿ ರೂ.10 ದರದ ಹಾಲು ಹಾಗೂ ಮೊಸರಿನ ಸಣ್ಣ ಪ್ಯಾಕ್‌ಗಳ ಜೊತೆಗೆ ಮಧ್ಯಮ ಕೊಬ್ಬಿನ ಪನೀರ್, ಹೆಚ್ಚಿನ ಪರಿಮಳಯುಕ್ತ ತುಪ್ಪ, ಪ್ರೋಬಯಾಟಿಕ್ ಮಾವಿನ ಲಸ್ಸಿ, ಡೈರಿ ವೈಟ್‌ನರ್ ಸೇರಿದಂತೆ ಹಲವು ಹೊಸ ಉತ್ಪನ್ನಗಳು ಸೇರಿವೆ. ಇವುಗಳು ನಂದಿನಿ ಮಳಿಗೆಗಳಲ್ಲಿ ಲಭ್ಯವಿರಲಿವೆ.

ಹೊಸ ಬೆಲೆ ನಿಗದಿ ಪ್ರಕಾರ, ನಂದಿನಿ ಹಾಲು 160 ಮಿಲಿಲೀಟರ್ ಪ್ಯಾಕ್‌ನಲ್ಲಿ ರೂ.10ಕ್ಕೆ ಮಾರಾಟವಾಗಲಿದೆ. ಮೊಸರು 140 ಮಿಲಿಲೀಟರ್ ಪ್ಯಾಕ್‌ನಲ್ಲಿ ಇದೇ ದರಕ್ಕೆ ಲಭ್ಯವಾಗುತ್ತದೆ. ಇದುವರೆಗೆ ಹಾಲು ಮತ್ತು ಮೊಸರು 200 ಮಿಲಿಲೀಟರ್ ಪ್ಯಾಕ್‌ಗಳಲ್ಲಿ ಮಾರಾಟವಾಗುತ್ತಿತ್ತು. ಒಬ್ಬರೇ ವಾಸಿಸುವ ಮನೆಗಳಲ್ಲಿ ಅಥವಾ ಕಡಿಮೆ ಬಳಕೆಯ ಕುಟುಂಬಗಳಲ್ಲಿ 200 ಮಿಲಿಲೀಟರ್ ಹಾಲು ಅಥವಾ ಮೊಸರು ಸಂಪೂರ್ಣವಾಗಿ ಬಳಸಲಾಗದೆ ವ್ಯರ್ಥವಾಗುವ ಸಾಧ್ಯತೆ ಹೆಚ್ಚಾಗಿತ್ತು. ಉಳಿದ ಹಾಲು ಅಥವಾ ಮೊಸರನ್ನು ಸಂಗ್ರಹಿಸುವುದು ಗ್ರಾಹಕರಿಗೆ ಕಷ್ಟಕರವಾಗುತ್ತಿತ್ತು. ಈ ಹಿನ್ನೆಲೆ, ಕಡಿಮೆ ಬೆಲೆಯಲ್ಲಿ ಸಣ್ಣ ಪ್ರಮಾಣದ ಪ್ಯಾಕ್‌ಗಳನ್ನು ಪರಿಚಯಿಸುವ ಮೂಲಕ ಗ್ರಾಹಕರು ದೈನಂದಿನ ಬಳಕೆಗೆ ತಕ್ಕಷ್ಟು ತಾಜಾ ಹಾಲು ಅಥವಾ ಮೊಸರನ್ನು ಖರೀದಿಸಬಹುದಾಗಿದೆ. ಇದರಿಂದ ವ್ಯರ್ಥ ಕಡಿಮೆಯಾಗುವುದರ ಜೊತೆಗೆ ಗ್ರಾಹಕರಿಗೆ ಹೆಚ್ಚಿನ ಅನುಕೂಲವೂ ದೊರೆಯಲಿದೆ.


Spread the love
Subscribe
Notify of

0 Comments
Inline Feedbacks
View all comments