ಚಿಕ್ಕಮಗಳೂರಿನಲ್ಲಿ ‘ಶೋಭಾ ಗೋ ಬ್ಯಾಕ್’: ಬೀದಿಗೆ ಬಂದ ಬಿಜೆಪಿ ಕಾರ್ಯಕರ್ತರು

Spread the love

ಚಿಕ್ಕಮಗಳೂರಿನಲ್ಲಿ ‘ಶೋಭಾ ಗೋ ಬ್ಯಾಕ್’: ಬೀದಿಗೆ ಬಂದ ಬಿಜೆಪಿ ಕಾರ್ಯಕರ್ತರು

ಚಿಕ್ಕಮಗಳೂರು: ಸಂಸದೆ ಶೋಭಾ ಕರಂದ್ಲಾಜೆ ವಿರುದ್ಧ ಗೋ ಬ್ಯಾಕ್ ಚಳವಳಿ ತೀವ್ರಗೊಂಡಿದ್ದು, ಕಾರ್ಯಕರ್ತರು ಪಕ್ಷದ ಕಚೇರಿ ಗದ್ಧಲ ಎಬ್ಬಿಸಿ ಆಕ್ರೋಶ ವ್ಯಕ್ತಪಡಿಸಿದರು.

ಜಿಲ್ಲೆಯ ಈವರೆಗೆ ಪತ್ರ ಚಳವಳಿ, ಸಾಮಾಜಿಕ ಜಾಲತಾಣಗಳಲ್ಲಿ ನಡೆಯುತ್ತಿದ್ದ ‘ಗೋ ಬ್ಯಾಕ್’ ಚಳವಳಿ ಈಗ ಬೀದಿಗೆ ಬಂದಿದೆ.

ಶಾಸಕ ಆರಗ ಜ್ಞಾನೇಂದ್ರ, ಮುಖಂಡ ಭಾನು ಪ್ರಕಾಶ್ ಸೇರಿ ಹಲವು ಮುಖಂಡರ ನೇತೃತ್ವದಲ್ಲಿ ಚುನಾವಣಾ ನಿರ್ವಹಣಾ ಸಮಿತಿ ಸಭೆ ಭಾನುವಾರ ನಡೆಯುತ್ತಿತ್ತು.

ಈ ವೇಳೆ ವೇದಿಕೆ ಬಳಿಗೆ ಬಂದ ಕಾರ್ಯಕರ್ತರು, ‘ಶೋಭಾ ಕರಂದ್ಲಾಜೆ ಅವರನ್ನು ಅಭ್ಯರ್ಥಿ ಮಾಡಬಾರದು. ಚಿಕ್ಕಮಗಳೂರು ಜಿಲ್ಲೆಯವರಿಗೇ ಟಿಕೆಟ್ ನೀಡಬೇಕು. ಹತ್ತು ವರ್ಷಗಳಿಂದ ಸಂಸದೆಯಾಗಿರುವ ಶೋಭಾ ಅವರಿಗೆ ಪಕ್ಷದ ಬ್ಲಾಕ್ ಸಮಿತಿ ಮುಖಂಡರ ಪರಿಚಯವೇ ಇಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಅಭ್ಯರ್ಥಿ ಯಾರು ಎಂಬುದು ಇನ್ನೂ ಇತ್ಯರ್ಥ ಆಗಿಲ್ಲ. ಶೋಭಾ ಅವರು ಮೂರು ಲಕ್ಷ ಮತಗಳ ಅಂತರದಿಂದ ಗೆಲ್ಲುತ್ತಾರೆ ಎಂದು ಬಿಜೆಪಿ ಸಂಸದೀಯ ಮಂಡಳಿ ಸದಸ್ಯರಾದ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ. ಅವರೇ ಅಭ್ಯರ್ಥಿ ಎಂಬುದು ಈ ಮಾತಿನ ಅರ್ಥವೇ, ಯಾವುದೇ ಕಾರಣಕ್ಕೂ ಶೋಭಾ ಅವರಿಗೆ ಟಿಕೆಟ್ ನೀಡಬಾರದು’ ಎಂದು ಆಗ್ರಹಿಸಿದರು.

ಕಾರ್ಯಕರ್ತರನ್ನು ಸಮಾಧಾನಪಡಿಸಲು ಜಿಲ್ಲಾ ಘಟಕದ ಅಧ್ಯಕ್ಷ ದೇವರಾಜ ಶೆಟ್ಟಿ ಸೇರಿ ಹಲವು ಮುಖಂಡರು ಪ್ರಯತ್ನಿಸಿದರು. ಆದರೆ, ಸುಮ್ಮನಾಗದ ಕಾರ್ಯಕರ್ತರು, ಕಚೇರಿಯಿಂದ ಹೊರ ಬಂದು ಬಾಗಿಲ ಬಳಿ ಧರಣಿ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.

ಬಳಿಕ ಸ್ಥಳಕ್ಕೆ ಬಂದ ಸಿ.ಟಿ.ರವಿ, ‘ನಮ್ಮ ವೈಮಸ್ಸಿನಿಂದ ದೇಶಕ್ಕೆ ಆಪತ್ತು ಬರಬಾರದು. ಯಾರೇ ಅಭ್ಯರ್ಥಿಯಾದರೂ ಮೋದಿಯವರೇ ಅಭ್ಯರ್ಥಿ ಎಂದು ಭಾವಿಸಿ’ ಎಂದು ಮನವಿ ಮಾಡಿದರು.

‘ನನ್ನ ಸೋಲಿಗೆ ನನ್ನಲ್ಲಿದ್ದ ಅತಿಯಾದ ವಿಶ್ವಾಸ ಕಾರಣ ಇರಬಹುದು. ಬೇರೆಯವರ ಕಡೆ ಬೊಟ್ಟು ಮಾಡುವುದಿಲ್ಲ. ಪಕ್ಷಕ್ಕೆ ದ್ರೋಹ ಮಾಡಿದ್ದರೆ ಅವರಿಗೆ ಕರ್ಮ ಬೆಂಬಿಡುವುದಿಲ್ಲ’ ಎಂದರು


Spread the love