ಚಿಕ್ಕಮಗಳೂರು: ಬಿಜೆಪಿ ಕಾರ್ಯಕರ್ತರಿಂದ ಹಿಂದೂ ಮುಖಂಡ ಪ್ರವೀಣ್ ಖಾಂಡ್ಯ ಮೇಲೆ ಹಲ್ಲೆ ಆರೋಪ

Spread the love

ಚಿಕ್ಕಮಗಳೂರು: ಬಿಜೆಪಿ ಕಾರ್ಯಕರ್ತರಿಂದ ಹಿಂದೂ ಮುಖಂಡ ಪ್ರವೀಣ್ ಖಾಂಡ್ಯ ಮೇಲೆ ಹಲ್ಲೆ ಆರೋಪ

ಚಿಕ್ಕಮಗಳೂರು: ಜಿಲ್ಲೆಯಲ್ಲಿ ಶುಕ್ರವಾರ ಮತದಾನ ಪ್ರಕ್ರಿಯೆ ಮುಕ್ತಾಯಗೊಳ್ಳುವ ಹಂತದಲ್ಲಿ ಬಿಜೆಪಿ ಕಾರ್ಯಕರ್ತರ ಎರಡು ಗುಂಪುಗಳ ನಡುವೆ ಮಾರಾಮಾರಿ ನಡೆದಿದೆ. ಜೀವರಾಜ್ ಆಪ್ತರು ಎನ್ನಲಾದ ಇಬ್ಬರು ವ್ಯಕ್ತಿಗಳು ಶೃಂಗೇರಿ ಕ್ಷೇತ್ರ ವ್ಯಾಪ್ತಿಯ ಪ್ರಭಾವಿ ಬಿಜೆಪಿ ಹಾಗೂ ಬಜರಂಗದಳದ ಮುಖಂಡನ ಮೇಲೆ ರಾಡ್‌ನಿಂದ ಮಾರಣಾಂತಿಕವಾಗಿ ಹಲ್ಲೆ ಮಾಡಲಾಗಿದೆ ಎಂದು ವರದಿಯಾಗಿದೆ.

ಜಿಲ್ಲೆಯ ಶೃಂಗೇರಿ ವಿಧಾನಸಭೆ ಕ್ಷೇತ್ರ ವ್ಯಾಪ್ತಿಯ ಖಾಂಡ್ಯ ಹೋಬಳಿ ಉಜಿನಿ ಮತಗಟ್ಟೆ ಬಳಿ ಘಟನೆ ನಡೆದಿದ್ದು, ಬಜರಂಗದಳ ಹಾಗೂ ಬಿಜೆಪಿ ಮುಖಂಡ ಖಾಂಡ್ಯ ಪ್ರವೀಣ್ ಹಲ್ಲೆಗೊಳಗಾದ ವ್ಯಕ್ತಿಯಾಗಿದ್ದಾರೆ. ಶೃಂಗೇರಿ ಕ್ಷೇತ್ರದ ಮಾಜಿ ಶಾಸಕ ಡಿ.ಎನ್.ಜೀವರಾಜ್ ಬೆಂಬಲಿಗರಾದ ವೆನಿಲ್ಲಾ ಪ್ರಭಾಕರ್, ಅರುಣ್ ಹಾಗೂ ಇನ್ನೂ ಕೆಲ ಮಂದಿ ಪ್ರವೀಣ್ ಮೇಲೆ ರಾಡ್‌ನಿಂದ ಹಲ್ಲೆ ಮಾಡಿದ್ದಾರೆಂದು ಆರೋಪಿಸಲಾಗಿದ್ದು, ಘಟನೆಯಲ್ಲಿ ಪ್ರವೀಣ್ ತಲೆಗೆ ತೀವ್ರ ಗಾಯವಾಗಿದೆ.

ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಶುಕ್ರವಾರ ಪ್ರವೀಣ್ ತಮ್ಮ ಬೆಂಬಲಿಗರೊಂದಿಗೆ ಶೃಂಗೇರಿ ಕ್ಷೇತ್ರ ವ್ಯಾಪ್ತಿಯ ವಿವಿಧ ಮತಗಟ್ಟೆಗಳ ವ್ಯಾಪ್ತಿಯಲ್ಲಿ ಸಂಚಾರ ಮಾಡುತ್ತಿದ್ದರು, ಈ ವೇಳೆ ಅವರು ಮತದಾರರ ಬಳಿ ತೆರಳಿ ಮತದಾನಕ್ಕೆ ಮನವೊಲಿಸುವ ಕೆಲಸ ಮಾಡುತ್ತಿದ್ದರು ಎನ್ನಲಾಗಿದ್ದು, ಇದರಿಂದ ಕುಪಿತರಾದ ಜೀವರಾಜ್ ಆಪ್ತರ ಒಂದು ಗುಂಪು ಪ್ರವೀಣ್ ಗುಂಪಿನೊಂದಿಗೆ ವಾಗ್ವಾದ ನಡೆಸಿ ಪರಸ್ಪರ ಕೈಮಿಲಾಯಿಸಿದ್ದಾರೆ. ಈ ವೇಳೆ ಜೀವರಾಜ್ ಬೆಂಬಲಿಗರು ಪ್ರವೀಣ್ ತಲೆಗೆ ರಾಡ್‌ನಿಂದ ಹಲ್ಲೆ ಮಾಡಿದ್ದಾರೆಂದು ತಿಳಿದು ಬಂದಿದೆ.

ಪ್ರವೀಣ್ ಖಾಂಡ್ಯ ಬ್ರಾಹ್ಮಣ ಸಮುದಾಯದವರಾಗಿದ್ದು, ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಲು ಟಿಕೆಟ್ ಆಕಾಂಕ್ಷಿಯಾಗಿದ್ದಾರೆ ಎನ್ನಲಾಗುತ್ತಿದ್ದು, ಈ ಹಿಂದೆ ಶೃಂಗೇರಿ ಕ್ಷೇತ್ರದ ವಿಧಾನಸಭೆ ಚುನಾವಣೆಯಲ್ಲಿ ಪ್ರವೀಣ್ ಖಾಂಡ್ಯ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ 2ಸಾವಿರಕ್ಕೂ ಹೆಚ್ಚು ಮತ ಪಡೆದಿದ್ದರು. ಈ ಮತಗಳು ಜೀವರಾಜ್ ಸೋಲಿಗೆ ಕಾರಣವಾಗಿ, ಕ್ಷೇತ್ರದಲ್ಲಿ ಮೊದಲ ಬಾರಿಗೆ ಕಾಂಗ್ರೆಸ್ ಅಭ್ಯರ್ಥಿ ಜಯಗಳಿಸಿದ್ದರು. ಈ ಹಿನ್ನೆಲೆಯಲ್ಲಿ ಜೀವರಾಜ್ ಹಾಗೂ ಪ್ರವೀಣ್ ಖಾಂಡ್ಯ ನಡುವೆ ಹಲವು ವರ್ಷಗಳಿಂದ ಹಗೆತನವಿದ್ದು, ಈ ಹಗೆತನವೇ ಪ್ರವೀಣ್ ಖಾಂಡ್ಯ ಮೇಲಿನ ಮಾರಣಾಂತಿಕ ಹಲ್ಲೆಗೆ ಕಾರಣ ಎನ್ನಲಾಗುತ್ತಿದೆ.

ಘಟನೆ ಸಂಬಂಧ ಮಾಧ್ಯಮದವರೊಂದಿಗೆ ಮಾತನಾಡಿರುವ ಪ್ರವೀಣ್ ಖಾಂಡ್ಯ, ಕ್ಷೇತ್ರದಲ್ಲಿ ಬ್ರಾಹ್ಮಣ ಸಮುದಾಯದ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿದ್ದು, ತಾನೂ ಬ್ರಾಹ್ಮಣ ಸಮುದಾಯದವನಾಗಿದ್ದೇನೆ. ಕ್ಷೇತ್ರದಲ್ಲಿ ತನ್ನ ಏಳಿಗೆ ಸಹಿಸದ ಜೀವರಾಜ್ ತನ್ನ ಬೆಂಬಲಿಗರಿಗೆ ಕುಮ್ಮಕ್ಕು ನೀಡಿ ಹಲ್ಲೆ ಮಾಡಿಸಿದ್ದಾರೆ ಎಂದು ಆರೋಪಿಸಿದ್ದಾರೆ.

ಘಟನೆ ಸಂಬಂಧ ಬಾಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ.


Spread the love

Leave a Reply