ಚಿಕ್ಕಮಗಳೂರು: ವಕೀಲನ ಮೇಲೆ ಹಲ್ಲೆ ಪ್ರಕರಣದ ತನಿಖೆ ಸಿಐಡಿ ಗೆ ಒಪ್ಪಿಸಿದ ರಾಜ್ಯ ಸರ್ಕಾರ

Spread the love

ಚಿಕ್ಕಮಗಳೂರು: ವಕೀಲನ ಮೇಲೆ ಹಲ್ಲೆ ಪ್ರಕರಣದ ತನಿಖೆ ಸಿಐಡಿ ಗೆ ಒಪ್ಪಿಸಿದ ರಾಜ್ಯ ಸರ್ಕಾರ

ಚಿಕ್ಕಮಗಳೂರು: ನಗರ ಪೊಲೀಸ್​ ಠಾಣೆಯಲ್ಲಿ ವಕೀಲನ ಮೇಲೆ ಹಲ್ಲೆ ನಡೆಸಿದ ಪ್ರಕರಣದ ತನಿಖೆಯನ್ನು ಸಿಐಡಿಗೆ ವಹಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಪ್ರಕರಣ ಸಂಬಂಧ ಡಿವೈಎಸ್​ಪಿ ಶೈಲೇಂದ್ರ ನೇತೃತ್ವದಲ್ಲಿ ತನಿಖೆ ನಡೆಯುತ್ತಿತ್ತು. ಇಂದು ಪ್ರಕರಣದ ತನಿಖೆ ಸಿಐಡಿಗೆ ಒಪ್ಪಿಸಿಲಾಗಿದೆ. ಈ ಬಗ್ಗೆ ಪಶ್ಚಿಮ ವಲಯದ ಐಜಿಪಿ ಚಂದ್ರಗುಪ್ತ ಸ್ಪಷ್ಟಪಡಿಸಿದ್ದಾರೆ.

ಏನಿದು ಪ್ರಕರಣ?
ಚಿಕ್ಕಮಗಳೂರು ಪೊಲೀಸ್ ಠಾಣೆಯಲ್ಲಿ ನ.30 ರಂದು ಹೆಲ್ಮಟ್ ವಿಚಾರಕ್ಕೆ ಸಂಬಂಧಿಸಿದಂತೆ ವಕೀಲ ಪ್ರೀತಮ್ ಎಂಬುವವರ ಮೇಲೆ ಪೊಲೀಸ್ ಇನ್ಸ್ ಪೆಕ್ಟರ್  , ಒಬ್ಬ ಎಎಸ್​ಐ, ಒಬ್ಬ ಹೆಡ್ ಕಾಸ್​ಸ್ಟೇಬಲ್ ಹಾಗೂ ಮೂವರು ಪೊಲೀಸ್ ಪಿಸಿ ಗಳು ಸೇರಿ ಗಂಭೀರ ಸ್ವರೂಪದ ಹಲ್ಲೆ ನಡೆಸಿದ್ದರು. ಈ ಹಿನ್ನೆಲೆ ಠಾಣೆ ಮುಂದೆ ವಕೀಲರು ಜಮಾಯಿಸಿ ಆಕ್ರೋಶ ಹೊರಹಾಕಿದ್ದರು. ಸ್ಥಳಕ್ಕೆ ಆಗಮಿಸಿದ ಎಸ್​ಪಿ ವಿಕ್ರಂ, ವಿಚಾರಣೆ ನಡೆಸಿ ಪಿಎಸ್​ಐ ಸೇರಿದಂತೆ ಆರು ಸಿಬ್ಬಂದಿಯನ್ನು ಅಮಾನತು ಮಾಡಿದ್ದರು. ಜೊತೆಗೆ ಹಲ್ಲೆ ಮಾಡಿದ ಪೊಲೀಸರ ವಿರುದ್ದ ಐಪಿಸಿ ಸೆಕ್ಷನ್​​​​​​ 307, 324, 506, 504ರ ಅಡಿ ಪ್ರಕರಣ ದಾಖಲಾಗಿತ್ತು.

ಪ್ರಕರಣ ದಾಖಲಾಗುತ್ತಿದ್ದಂತೆ ಪೊಲೀಸರು ತಲೆಮರೆಸಿಕೊಂಡಿದ್ದು, ಇವರ ಬಂಧನಕ್ಕೆ ಚಿಕ್ಕಮಗಳೂರು DYSP ಶೈಲೇಂದ್ರ ಕುಮಾರ್ ನೇತೃತ್ವದಲ್ಲಿ ವಿಶೇಷ ತಂಡ ರಚನೆ ಮಾಡಲಾಗಿದೆ. ಈ ನಡುವೆ, ವಕೀಲರು ಠಾಣೆಯಲ್ಲಿ ಪೊಲೀಸರ ಮೇಲೆ ಹಲ್ಲೆ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಹಲ್ಲೆ ಖಂಡಿಸಿ ಶನಿವಾರ ಮಧ್ಯರಾತ್ರಿವರೆಗೂ ನಗರದ ಹನುಮಂತಪ್ಪ ಸರ್ಕಲ್​​ನಲ್ಲಿ ಪೊಲೀಸರು ಮತ್ತು ಅವರ ಕುಟುಂಬಸ್ಥರು ಪ್ರತಿಭಟನೆ ನಡೆಸಿದ್ದರು.

ಪ್ರತಿಭಟನೆ ತೀವ್ರವಾಗುತ್ತಿದ್ದಂತೆ ಚಿಕ್ಕಮಗಳೂರು ಜಿಲ್ಲಾ ಬಾರ್ ಅಸೋಸಿಯೇಷನ್ ಅಧ್ಯಕ್ಷ ಸುಧಾಕರ್, ವಕೀಲ ಪ್ರೀತಮ್ ಸೇರಿದಂತೆ 15 ವಕೀಲರ ವಿರುದ್ಧ ಸೆಕ್ಷನ್​ 503, 406, 353, 149 ಸೆಕ್ಷನ್ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.


Spread the love