ಚುನಾವಣಾ ವೆಚ್ಚಕ್ಕಾಗಿ ಸಾರ್ವಜನಿಕರಿಂದ ವಂತಿಗೆ ಸಂಗ್ರಹ  – ಅಮೃತ್ ಶೆಣೈ ವಿರುದ್ದ ಪ್ರಕರಣ

Spread the love

ಚುನಾವಣಾ ವೆಚ್ಚಕ್ಕಾಗಿ ಸಾರ್ವಜನಿಕರಿಂದ ವಂತಿಗೆ ಸಂಗ್ರಹ  – ಅಮೃತ್ ಶೆಣೈ ವಿರುದ್ದ ಪ್ರಕರಣ

ಉಡುಪಿ: ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದ ಬಂಡಾಯ ಅಭ್ಯರ್ಥಿ ಅಮೃತ್ ಶೆಣೈ ಅವರು ತಮ್ಮ ಚುನಾವಣಾ ಖರ್ಚಿಗೆ ಸಾರ್ವಜನಿಕರಿಂದ ಹಣ ಸಂಗ್ರಹಿಸಿರುವುದು ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆಯಾಗಿದ್ದು ಅವರ ಮೇಲೆ ಪ್ರಕರಣ ದಾಖಲಿಸಿಕೊಳ್ಳುವಂತೆ ಕೇಂದ್ರ ಚುನಾವಣಾ ಆಯೋಗದ ವೀಕ್ಷಕರಾದ ಕೃಷ್ಣ ಕುನಾಲ್ ಜಿಲ್ಲಾ ಚುನಾವಣಾಧಿಕಾರಿ ಆಗಿರುವ ಜಿಲ್ಲಾಧಿಕಾರಿ ಹೆಬ್ಸಿಬಾ ರಾಣಿ ಕೊರ್ಲಪಾಟಿ ಅವರಿಗೆ ಆದೇಶೀಸಿದ್ದಾರೆ.

ಅಮೃತ್ ಶೆಣೈ ಅವರು ಗುರುವಾರ ಸಂಜೆ ಉಡುಪಿ ನಗರದಲ್ಲಿ ಪಾದಯಾತ್ರೆ ನಡೆಸಿ ತಮ್ಮ ಚುನಾವಣಾ ವೆಚ್ಚಕ್ಕಾಗಿ ದೇಣಿಗೆ ಸಂಗ್ರಹಿಸಿದ್ದರು. ಚುನಾವಣಾ ಆಯೋಗವು ಈ ಬಾರಿ ಅಭ್ಯರ್ಥಿಗಳ ಚುನಾವಣಾ ಖರ್ಚುವೆಚ್ಚಗಳ ಮೇಲೆ ನಿಗಾ ಇಡುವುದಕ್ಕಾಗಿ ಪ್ರತಿಯೊಬ್ಬ ಅಭ್ಯರ್ಥಿಗಳು ತಮ್ಮ ಚುನಾವಣೆಯ ಪ್ರತಿಯೊಂದು ಖರ್ಚು ವೆಚ್ಚ-ದೇಣಿಗೆಗಳನ್ನು ಪ್ರತ್ಯೇಕ ಬ್ಯಾಂಕ್ ಖಾತೆಯ ಮೂಲಕವೇ ನಿರ್ವಹಿಸಬೇಕು ಮತ್ತು 10 ಸಾವಿರ ರೂ ಗಳಿಗಿಂತ ಹೆಚ್ಚು ಮೊತ್ತ ದೇಣಿಗೆ – ಪಾವತಿಗಳನ್ನು ಚೆಕ್ ಮೂಲಕವೇ ನಡೆಸಬೇಕು. ಅದಕ್ಕಿಂತ ಕಡಿಮೆ ಮೊತ್ತದ ಖರ್ಚುಗಳ ವಿವರಗಳನ್ನು ಚುನಾವಣಾ ಆಯೋಗಕ್ಕೆ ಸಲ್ಲಿಸಬೇಕು ಎಂದು ಆದೇಶಿಸಿದೆ. ಆದ್ದರಿಂದ ಅಮೃತ್ ಶೆಣೈ ಅವರು ಸಾರ್ವಜನಿಕರ ಹಣವನ್ನು ಖಾತೆಯ ಮೂಲಕ ಸ್ವೀಕರಿಸದೇ ನಗದಾಗಿ ಸ್ವೀಕರಿಸಿದ್ದಾರೆ. ಆದ್ದರಿಂದ ಅವರ ಮೇಲೆ ಪ್ರಕರಣ ದಾಖಲಿಸಿ ವರದಿಯನ್ನು ರಾಜ್ಯ ಚುನಾವಣಾ ಆಯುಕ್ತರಿಗೆ ಸಲ್ಲಿಸುವಂತೆ ವೀಕ್ಷಕ ಕೃಷ್ಣ ಕುನಾಲ್ ಅವರು ಉಡುಪಿ ಜಿಲ್ಲಾಧಿಕಾರಿಗೆ ಸೂಚಿಸಿದ್ದಾರೆ.

ಅಮೃತ್ ಶೆಣೈ ಅವರು ಮತಯಾಚನೆಗೆ ಪಾದಯಾತ್ರೆ ನಡೆಸುವುದಕ್ಕಾಗಿ ಮಾತ್ರ ಆಯೋಗದ ಪರವಾನಿಗೆ ಪಡೆದಿದ್ದರು ಆದರೆ ನಗದು ರೂಪದಲ್ಲಿ ಹಣ ಸಂಗ್ರಹಕ್ಕೆ ಪರವಾನಿಗೆ ಪಡೆದಿರಲಿಲ್ಲ ಎಂದು ಜಿಲ್ಲಾ ಸಹಾಯಕ ಚುನಾವಣಾಧಿಕಾರಿ ಅಪರ ಜಿಲ್ಲಾಧಿಕಾರಿ ವಿದ್ಯಾಕುಮಾರಿ ತಿಳಿಸಿದ್ದಾರೆ.


Spread the love