ಚೌಕಿದಾರ್ ಅದಾನಿ, ಅಂಬಾನಿಗಳ ಸಂಪತ್ತನ್ನು ಕಾಯುವವರೇ ಹೊರತು ಜನಸಾಮಾನ್ಯರ ಬದುಕನ್ನಲ್ಲ – ವಸಂತ ಆಚಾರಿ

ಚೌಕಿದಾರ್ ಅದಾನಿ, ಅಂಬಾನಿಗಳ ಸಂಪತ್ತನ್ನು ಕಾಯುವವರೇ ಹೊರತು ಜನಸಾಮಾನ್ಯರ ಬದುಕನ್ನಲ್ಲ – ವಸಂತ ಆಚಾರಿ

ಮಂಗಳೂರು: ಚಾ ಮಾರುವವನೊಬ್ಬ ದೇಶದ ಪ್ರಧಾನಿಯಾಗಲಿದ್ದಾರೆ ಎಂಬ ಹಸಿಹಸಿ ಸುಳ್ಳನ್ನು ಹಬ್ಬಿಸಿ, ಅಲ್ಲಲ್ಲಿ ಚಾಯ್ ಪೇ ಚರ್ಚಾ ಎಂಬ ನಾಟಕವಾಡಿ, ಅಧಿಕಾರಕ್ಕೇರಿದ ಬಳಿಕ ತನ್ನನ್ನು ತಾನು ಪಕೀರನೆಂದು ಕರೆಸಿಕೊಂಡು ಶೋಕಿ ಜೀವನದಲ್ಲೇ ಕಾಲ ಕಳೆದ ನರೇಂದ್ರ ಮೋದಿಯವರು ಅತ್ಯಂತ ಹೆಚ್ಚಿನ ಸಮಯವನ್ನು ವಿದೇಶ ಪ್ರಯಾಣದಲ್ಲೇ ಕಳೆದಿದ್ದಾರೆ.ಇಂದು ಮತ್ತೆ ಚುನಾವಣೆಯನ್ನು ಎದುರಿಸಲು ಚೌಕಿದಾರನ ವೇಷ ಧರಿಸಿ ಜನರನ್ನು ಮರಳುಗೊಳಿಸುತ್ತಿದ್ದಾರೆ. ಜನಸಾಮಾನ್ಯರ ಬದುಕನ್ನು ಹಾಗೂ ದೇಶವನ್ನು ಕಾಯುವ ಬದಲು ದೇಶದ ಸಂಪತ್ತನ್ನು ಲೂಟಿ ಮಾಡುವ ಹಾಗೂ ಜನರ ರಕ್ತವನ್ನು ಹೀರುವ ಟಾಟಾ ಬಿರ್ಲಾ,ಅಂಬಾನಿ,ಅದಾನಿಗಳ ಸಂಪತ್ತನ್ನು ಕಾಯುತ್ತಿದ್ದಾರೆ ಎಂದು ಸಿಪಿಐಎಮ್ ದ.ಕ.ಜಿಲ್ಲಾ ಕಾರ್ಯದರ್ಶಿ ವಸಂತ ಆಚಾರಿಯವರು ಆಕ್ರೋಶ ವ್ಯಕ್ತಪಡಿಸಿದರು.

ಅವರು ಸಿಪಿಐಎಮ್ ನೇತ್ರತ್ವದಲ್ಲಿ ಜರುಗಿದ ಮಂಗಳೂರು ನಗರ ಮಟ್ಟದ ರಾಜಕೀಯ ಸಮಾವೇಶವನ್ನುದ್ದೇಶಿಸಿ ಮಾತನಾಡುತ್ತಿದ್ದರು.

ಮುಂದುವರಿಸುತ್ತಾ ಅವರು, ನರೇಂದ್ರ ಮೋದಿ ಸರಕಾರದಲ್ಲಿ ಮಹಿಳೆಯರಿಗೆ, ದಲಿತ ಆದಿವಾಸಿ, ಅಲ್ಪಸಂಖ್ಯಾತರಿಗೆ ರಕ್ಷಣೆ ಎಂಬುದೇ ಇಲ್ಲ. ಒಂದು ಕಡೆ ಭೇಟಿ ಬಚಾವೋ ಭೇಟಿ ಪಡಾವೋ ಘೋಷಣೆ ನೀಡಿದರೆ,ಮತ್ತೊಂದು ಕಡೆ ಹಸಿಗೂಸಿನಿಂದ ಹಿಡಿದು ಮಹಿಳೆಯರ ಮೇಲೆ ನಿರಂತರವಾಗಿ ದೌರ್ಜನ್ಯ, ಅತ್ಯಾಚಾರ, ಕೊಲೆಗಳು ನಡೆಯುತ್ತಿದೆ. ಭ್ರಷ್ಟಾಚಾರ ನಿರ್ಮೂಲನೆ ಮಾಡುವುದಾಗಿ ಅಧಿಕಾರಕ್ಕೇರಿದ ನರೇಂದ್ರ ಮೋದಿ ಸರಕಾರವು ಇತ್ತೀಚಿನ ರಪೇಲ್ ಹಗರಣ ಸೇರಿದಂತೆ ಅನೇಕ ವಿಧದ ಬ್ರಹ್ಮಾಂಡ ಭ್ರಷ್ಟಾಚಾರದಲ್ಲಿ ಮುಳುಗಿದೆ. ಇಂತಹ ಫ್ಯಾಸಿಸ್ಟ್ ಸ್ವರೂಪದ NDA ಕೂಟವನ್ನು ಹೀನಾಯವಾಗಿ ಸೋಲಿಸಬೇಕು ಎಂದು ಕರೆ ನೀಡಿದರು.

ಸಿಪಿಐಎಮ್ ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯರಾದ ಜೆ.ಬಾಲಕ್ರಷ್ಣ ಶೆಟ್ಟಿಯವರು ಮಾತನಾಡುತ್ತಾ, ದೇಶಕ್ಕೆ ಅನ್ನ ನೀಡುವ ರೈತಾಪಿ ಜನತೆ,ಸಂಪತ್ತನ್ನು ಸ್ರಷ್ಠಿಸುವ ಕಾರ್ಮಿಕ ವರ್ಗ, ಸೇವೆ ಮಾಡುವ ನೌಕರರು, ಕೂಲಿ ಕೆಲಸ ಮಾಡುವ ಕ್ರಷಿ ಕೂಲಿ ಕಾರ್ಮಿಕರು ನರೇಂದ್ರ ಮೋದಿ ಸರಕಾರದಿಂದ ತೀವ್ರ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಮನ್ ಕಿ ಬಾತ್ ಕಾರ್ಯಕ್ರಮದ ಮೂಲಕ ಅವರ ಮನಸ್ಸಿನಲ್ಲಿ ಇದ್ದುದ್ದನ್ನು ಹೇಳುತ್ತಾರೆಯೇ ಹೊರತು ಜನಸಾಮಾನ್ಯರ ಮನಸ್ಸಿನಲ್ಲಿ ಏನಿದೆ ಎಂಬುದನ್ನು ತಿಳಿಯಲು ಆಸಕ್ತಿ ಇಲ್ಲ ಎಂದು ಹೇಳಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಸಿಪಿಐಎಮ್ ಮಂಗಳೂರು ನಗರ ದಕ್ಷಿಣ ಕಾರ್ಯದರ್ಶಿ ಸುನಿಲ್ ಕುಮಾರ್ ಬಜಾಲ್ ರವರು ಕಳೆದ 10 ವರ್ಷಗಳಿಂದ ಸಂಸದರಾಗಿರುವ ನಳೀನ್ ಕುಮಾರ್ ಕಟೀಲ್ ರವರು ತುಳುನಾಡಿನ ಅಭಿವ್ರದ್ದಿಗೆ ಎಳ್ಳಷ್ಟೂ ಶ್ರಮ ವಹಿಸಿಲ್ಲ. ಜಿಲ್ಲೆಯ ಆರ್ಥಿಕತೆಯ ಜೀವನಾಡಿ ವಿಜಯಾ ಬ್ಯಾಂಕನ್ನು ಬರೋಡಾ ಬ್ಯಾಂಕಿನೊಂದಿಗೆ ವಿಲೀನಗೊಳಿಸಿದಾಗ ಹಾಗೂ ಅಂತರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಅಧಾನಿಗೆ ಕೊಟ್ಟಾಗ ಒಂದು ಶಬ್ದವೂ ಮಾತನಾಡದೆ ಪರೋಕ್ಷವಾಗಿ ಸಹಕರಿಸಿದ್ದಾರೆ. ಜಿಲ್ಲೆಯ ಯುವಜನರಿಗೆ ಉದ್ಯೋಗ ನೀಡುವ ಬದಲು ಹಿಂದುಳಿದ ವರ್ಗದ ಯುವಕರ ತಲೆಗೆ ಹಿಂದುತ್ವದ ಅಮಲನ್ನೇರಿಸಿ ಜೈಲುಪಾಲಾಗುವಂತೆ ಮಾಡಿ ಅವರ ಭವಿಷ್ಯವನ್ನೇ ಹಾಳು ಮಾಡಿದ ಕುಖ್ಯಾತಿ ಇದೆ. ಜಿಲ್ಲೆಯ ಸೌಹಾರ್ದತೆಗೆ ಬೆಂಕಿ ಹಚ್ಚಲು ಹೊರಟ ನಳೀನ್ ರವರನ್ನು ಸೋಲಿಸುವ ಮೂಲಕ ಜನರ ಬದುಕನ್ನು ಬೆಳಗಿಸಲು ಪ್ರಬಲ ಜಾತ್ಯಾತೀತ ಶಕ್ತಿಗಳನ್ನು ಗೆಲ್ಲಿಸಬೇಕೆಂದು* ಕರೆ ನೀಡಿದರು.

ಸಭೆಯ ಅಧ್ಯಕ್ಷತೆಯನ್ನು ಸಿಪಿಐಎಮ್ ಮಂಗಳೂರು ನಗರ ಉತ್ತರ ಕಾರ್ಯದರ್ಶಿ ದಯಾನಂದ ಶೆಟ್ಟಿಯವರು ವಹಿಸಿದ್ದರು. ವೇದಿಕೆಯಲ್ಲಿ ಸಿಪಿಐಎಮ್ ಜಿಲ್ಲಾ ಸಮಿತಿ ಸದಸ್ಯರಾದ ಜಯಂತಿ ಶೆಟ್ಟಿಯವರು ಉಪಸ್ಥಿತರಿದ್ದರು.

1 Comment

Comments are closed.