ಜನಜಾಗೃತಿ ರಥ: ಜಿಲ್ಲಾಧಿಕಾರಿ ಮುಲ್ಲೈ ಮುಹಿಲನ್ ಚಾಲನೆ 

Spread the love

 ಜನಜಾಗೃತಿ ರಥ: ಜಿಲ್ಲಾಧಿಕಾರಿ ಮುಲ್ಲೈ ಮುಹಿಲನ್ ಚಾಲನೆ 

ಮಂಗಳೂರು: ಶಾಲೆಯಿಂದ ಹೊರಗುಳಿದ ಮಕ್ಕಳಿಗೆ ಮರಳಿ ಶಾಲೆಗೆ ಸೇರುವಂತೆ ಪ್ರೇರೇಪಿಸಿ ಕಡ್ಡಾಯವಾಗಿ ಉಚಿತ ಶಿಕ್ಷಣವನ್ನು ನೀಡಲು ಸೂಕ್ತ ಕ್ರಮ ಕೈಗೊಳ್ಳುವುವಂತೆ ಜಿಲ್ಲಾಧಿಕಾರಿ ಮುಲ್ಲೈ ಮುಹಿಲನ್ ಎಂ.ಪಿ ಅವರು ಕರೆ ನೀಡಿದರು.

ಅವರು ಡಿಸೆಂಬರ್ 5ರ ಮಂಗಳವಾರ ಜಿಲ್ಲಾಡಳಿತ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಕಾರ್ಮಿಕ ಇಲಾಖೆ ಹಾಗೂ ಜಿಲ್ಲಾ ಬಾಲಕಾರ್ಮಿಕ ಯೋಜನಾ ಸಂಘದ  ಆಶ್ರಯದಲ್ಲಿ ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ನಿರ್ದೇಶನದಂತೆ ಪ್ಯಾನ್ ಇಂಡಿಯಾ ರಕ್ಷಣಾ ಮತ್ತು ಪುನರ್ವಸತಿ ಆಂದೋಲನದ ಅಂಗವಾಗಿ ಬಾಲಕಾರ್ಮಿಕ ಹಾಗೂ ಕಿಶೋರ ಕಾರ್ಮಿಕ (ನಿಷೇಧ ಮತ್ತು ನಿಯಂತ್ರಣ ಕಾಯ್ದೆ 1986 ರಡಿ ಜನಜಾಗೃತಿ ರಥಕ್ಕೆ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಚಾಲನೆ ನೀಡಿ ಮಾತನಾಡಿದರು.

ಪುಟ್ಟ ಮಕ್ಕಳ ಕೈಯಿಂದ ಕೆಲಸ ಮಾಡಿಸುವುದು ಮಕ್ಕಳ ಹಕ್ಕುಗಳ ಉಲ್ಲಂಘನೆಯಾಗಿರುತ್ತದೆ. ಬಾಲಕಾರ್ಮಿಕತೆಯನ್ನು ತೊಡೆದು ಹಾಕಿ ಮಕ್ಕಳು ಬಾಲಾಪರಾಧಿಗಳಾಗುವುದನ್ನು ತಡೆಯುವ ಕೆಲಸದಲ್ಲಿ ಎಲ್ಲಾ ಇಲಾಖೆಯ ಅಧಿಕಾರಿಗಳು, ಸಂಘ ಸಂಸ್ಥೆಗಳು ಕೈಜೋಡಿಸಬೇಕು ಎಂದರು.

ಜಿಲ್ಲಾ ಬಾಲಕಾರ್ಮಿಕ ಯೋಜನಾ ಸಂಘದ ಸಹಾಯಕ ಕಾರ್ಮಿಕ ಆಯುಕ್ತರು ಹಾಗೂ ಸದಸ್ಯ ಕಾರ್ಯಾದರ್ಶಿ ಶಿವಕುಮಾರ್ ಬಿ ಈ, ಅವರು ಬಾಲಕಾರ್ಮಿಕ ಪದ್ಧತಿಯು ಸಾಮಾಜಿಕ ಪಿಡುಗು ಆಗಿದ್ದು, ಅದನ್ನು ಹೋಗಲಾಡಿಸಲು ಕಲಂ 17 ರಡಿ ನೇಮಕಗೊಂಡ ವಿವಿಧ ಇಲಾಖೆಗಳ ನಿರೀಕ್ಷಕರು ಅಭಿಯಾನದಲ್ಲಿ ಈ ವರ್ಷದಲ್ಲಿ 100ಕ್ಕೂ ಅಧಿಕ ಹಠಾತ್ ದಾಳಿಗಳನ್ನು ಮಾಡಿ ಜನರಲ್ಲಿ ಅರಿವು ಮೂಡಿಸಿರುತ್ತಾರೆ. ಬಾಲಕಾರ್ಮಿಕ ಕಾಯ್ದೆಯ ಬಗ್ಗೆ ಹೆಚ್ಚಿನ ಅರಿವು ಮೂಡಿಸಲು ಜಾಗೃತಿ ರಥವು 9 ದಿನಗಳ ಕಾಲ ಪ್ರತಿ ತಾಲ್ಲೂಕಿನಲ್ಲಿ ಸಂಚರಿಸಿ, ಮಾಹಿತಿ ನೀಡುವ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಹಿರಿಯ ಸಿವಿಲ್ ನ್ಯಾಯಾಧೀಶರು ಮತ್ತು ಸದಸ್ಯ ಕಾರ್ಯದರ್ಶಿ ಶೋಭ ಬಿ.ಜಿ., ಅವರು ಭಾಗವಹಿಸಿದರು.

ಕಾರ್ಯಕ್ರಮದಲ್ಲಿ ದ.ಕ ಉಪವಿಭಾಗ-1 ರ ಕಾರ್ಮಿಕ ಅಧಿಕಾರಿ ಕಾವೇರಿ ಟಿ,, ದ.ಕ ಉಪವಿಭಾಗ-2 ರ ಕಾರ್ಮಿಕ ಅಧಿಕಾರಿ, ವಿಲ್ಮಾ ಎಲಿಜಬೆತ್ ತೌವ್ರೋ, ಹಿರಿಯ ಕಾರ್ಮಿಕ ನಿರೀಕ್ಷಕರು ಹಾಗೂ ಮತ್ತಿತರರು ಇದ್ದರು.


Spread the love