ಜನರಿಗೆ ತೊಂದರೆಯಾಗುತ್ತಿರುವ ಕಾಪು ತಾಲೂಕು ಕಛೇರಿ ಸಮಸ್ಯೆ ಬಗೆಹರಿಸಿ- ಯುವ ಕಾಂಗ್ರೆಸ್

Spread the love

ಜನರಿಗೆ ತೊಂದರೆಯಾಗುತ್ತಿರುವ ಕಾಪು ತಾಲೂಕು ಕಛೇರಿ ಸಮಸ್ಯೆ ಬಗೆಹರಿಸಿ- ಯುವ ಕಾಂಗ್ರೆಸ್

ಕಾಪು : ಕಾಪು ತಾಲೂಕು ಘೋಷಣೆಯಾಗಿ ಒಂದು ವರ್ಷ ಕಳೆದರೂ ಇನ್ನೂ ಇಲ್ಲಿಗೆ ಪೂರ್ಣಕಾಲಿಕ ತಹಶೀಲ್ದಾರ್ ಇಲ್ಲ. ಸಿಬಂದಿ ಕೊರತೆ ಮುಂತಾದ ಸಮಸ್ಯೆಯಿಂದಾಗಿ ಸಕಾಲದಲ್ಲಿ ಜನರ ಕೆಲಸ ಆಗುತ್ತಿಲ್ಲ. ಈ ಬಗ್ಗೆ ಸಂಬಂಧಪಟ್ಟವರು ಗಮನ ಹರಿಸಿ ಜನರ ಹಿತ ಕಾಯುವ ಕೆಲಸ ಮಾಡಬೇಕು ಎಂದು ಕಾಪು ವಿಧಾನಸಭಾ ಕ್ಷೇತ್ರ ಯುವ ಕಾಂಗ್ರೆಸ್ ಅಧ್ಯಕ್ಷ ನ್ಯಾಯವಾದಿ ಮೆಲ್ವಿನ್ ಡಿಸೋಜ ಒತ್ತಾಯಿಸಿದ್ದಾರೆ.

ಇಲ್ಲಿಗೆ ಈಗ ಪೂರ್ಣ ಕಾಲಿಕ ತಹಶೀಲ್ದಾರ್ ಇಲ್ಲದೆ ಉಡುಪಿ ತಹಶೀಲ್ದಾರಿಗೆ ಚಾರ್ಜ್ ನೀಡಲಾಗಿದೆ. ಆದರೆ ಅವರು ಇಲ್ಲಿಗೆ ಯಾವಾಗ ಬರುತ್ತಾರೆ ಎಂಬ ಬಗ್ಗೆ ಯಾವುದೇ ಖಾತ್ರಿ ಇಲ್ಲ. ಹಾಗಾಗಿ ತಮ್ಮ ಸಮಸ್ಯೆ ಹೇಳಿಕೊಳ್ಳಲು ಜನರು ಉಡುಪಿಗೆ ಹೋಗಬೇಕಾದ ಅನಿವಾರ್ಯತೆ ಇದೆ. ವಾರದಲ್ಲಿ ಕನಿಷ್ಟ ಎರಡು ಮೂರು ದಿನ ತಹಶೀಲ್ದಾರರು ಇಲ್ಲಿಯೇ ಇರುವ ಅಗತ್ಯವಿದೆ.

ಇನ್ನೊಂದೆಡೆ ಸಿಬಂದಿಯ ಕೊರತೆಯಿಂದಾಗಿ ಸಿದ್ದವಾದ ಕಡತಗಳು ತಿಂಗಳಾದರೂ ಜಿಲ್ಲಾಧಿಕಾರಿ ಕಛೇರಿಗೆ ತಲಪುತ್ತಿಲ್ಲ. ಪಹಣಿ ಪತ್ರಿಕೆ ಆನ್ ಲೈನ್ ಮಾಡಿದರೂ ಲಾಗ್ ಮಾಡಿ ಹಣ ಪಾವತಿಸಿದರೂ ಆರ್‍ಟಿಸಿ ಬರದೆ ಹಣ ಕಡಿತಾಗುತ್ತಿದ್ದು ಜನರಿಗೆ ತೊಂದರೆಯಾಗುತ್ತಿದೆ. ತಾಲೂಕು ಕಛೇರಿಯ ಲ್ಯಾಂಡ್‍ಲೈನ್‍ಗೆ ಕರೆ ಮಾಡಿದರೆ ಎತ್ತುವವರೇ ಇಲ್ಲ.

ನಾಗರಿಕರು ನೀಡಿದ ಅರ್ಜಿಗಳಿಗೆ ಸಕಾಲದಲ್ಲಿ ತಹಶೀಲ್ದಾರ್ ಸಹಿ ಆಗದೆ ಜನ ತಾಲೂಕು ಕಚೇರಿಗೆ ಮತ್ತೆ ಮತ್ತೆ ಅಲೆಯುವಂತಾಗಿದೆ. ಇನ್ನೂ ಕೆಲವು ಇಲಾಖೆಗಳು ಉಡುಪಿಯಿಂದ ಕಾಪುವಿಗೆ ವರ್ಗಾಣೆಯಾಗದಿರುವುದು ಮತ್ತೊಂದು ಸಮಸ್ಯೆಯಾಗಿದೆ. ಕಛೇರಿಯ ಸಿಬಂದಿಗಳು ಕೂಡಾ ಆಗಾಗ ಉಡುಪಿಗೆ ಹೋಗಬೇಕಾಗಿ ಬರುತ್ತಿರುವುದರಿಂದ ಕಚೇರಿಗೆ ಬಂದ ಜನರಿಗೆ ಖಾಲಿ ಕುರ್ಚಿಗಳ ದರ್ಶನ ಭಾಗ್ಯವಷ್ಟೇ ಸಿಗುತ್ತಿದೆ.

ಸಾಕಷ್ಟು ಪ್ರಯತ್ನ ಪಟ್ಟು ಪಡೆದುಕೊಂಡ ಕಾಪು ತಾಲೂಕಿನ ಲಾಭ ಜನರಿಗೆ ನ್ಯಾಯವಾಗಿ ಸಿಗಬೇಕಾಗಿದ್ದು ತಾಲೂಕು ಕಛೇರಿಯಲ್ಲಿನ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಸ್ಥಳೀಯ ಶಾಸಕರು ಅಗತ್ಯ ಕ್ರಮ ಕೈಗೊಳ್ಳಲಿ ಎಂದವರು ಹೇಳಿಕೆಯಲ್ಲಿ ಒತ್ತಾಯಿಸಿದ್ದಾರೆ.


Spread the love