ಜನ ಬದಲಾವಣೆಯನ್ನು ಬಯಸಿದ್ದಾರೆ: ಜಯಪ್ರಕಾಶ್‌ ಹೆಗ್ಡೆ

Spread the love

ಜನ ಬದಲಾವಣೆಯನ್ನು ಬಯಸಿದ್ದಾರೆ: ಜಯಪ್ರಕಾಶ್‌ ಹೆಗ್ಡೆ

ಮೂಡಿಗೆರೆ: ಪ್ರಜಾಪ್ರಭುತ್ವ ಉಳಿಯಬೇಕಾದರೆ ಜನರು ಸರಕಾರ ಮಾಡಿರುವ ತಪ್ಪುಗಳನ್ನು ಪ್ರಶ್ನಿಸುವಂತಿರಬೇಕು, ವಿರೋಧ ಪಕ್ಷಗಳೂ ಪ್ರಶ್ನಿಸಬೇಕು. ಸರಕಾರ ಮಾಡಿದ್ದೇ ಸರಿ ಎಂಬ ಸ್ಥಿತಿ ಬರಬಾರದು. ಈ ಬಾರಿಯ ಚುನಾವಣೆಯಲ್ಲಿ ಜನ ಬದಲಾವಣೆ ಬಯಸುತ್ತಿದ್ದಾರೆ ಎಂಬುದು ಸ್ಪಷ್ಟವಾಗುತ್ತಿದೆ ಎಂದು ಲೋಕಸಭಾ ಚುನಾವಣೆಯಲ್ಲಿ ಉಡುಪಿ-ಚಿಕ್ಕಮಗಳೂರು ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಜಯಪ್ರಕಾಶ್‌ ಹೆಗ್ಡೆ ಅವರು ಅಭಿಪ್ರಾಯಪಟ್ಟರು.

ಅವರು ಭಾನುವಾರ ಮೂಡಿಗೆರೆಯ ಕಾಂಗ್ರೆಸ್‌ ಭವನದಲ್ಲಿ ನಡೆದ ಕಾಂಗ್ರೆಸ್‌ ಕಾರ್ಯಕರ್ತರ ಸಭೇಯನ್ನುದ್ದೇಶಿಸಿ ಮಾತನಾಡಿದರು. “ಗೆದ್ದ ಸಂಸದರು ವರ್ಷಗಳೇ ಗತಿಸಿದರೂ ತಾನು ಪ್ರತಿನಿಧಿಸಿದ ಕ್ಷೇತ್ರಕ್ಕೆ ಬಾರದಿದ್ದರೆ ಅಲ್ಲಿಯ ಜನ ಬದಲಾವಣೆ ಬಯಸುವುದು ಸಹಜ. ಇಲ್ಲಿಯ ಕೆಲವು ರಸ್ತೆಗಳ ಕಾಮಗಾರಿಯ ಪ್ರಗತಿಯನ್ನು ನೋಡಿದಾಗ ಸ್ಪಷ್ಟವಾಗುತ್ತದೆ. ನನಗೆ ಮತ್ತೊಮ್ಮೆ ಅವಕಾಶ ಸಿಕ್ಕಿದರೆ ಆ ಕೆಲಸಗಳಿಗೆ ಮತ್ತೆ ಜೀವ ತುಂಬುವೆ. ಸಂಸದನಾಗಿ ಅಲ್ಪ ಅವಧಿಯಲ್ಲಿ ಇಲ್ಲಿಯ ಕಾಫಿ ಬೆಳೆಗಾರರು ಮತ್ತು ಅಡಿಕೆ ಬೆಳೆಗಾರರ ಸಮ್ಯೆಗಳಿಗ ಸ್ಪಂದಿಸಿರುವೆ ಎಂಬ ತೃಪ್ತಿ ಇದೆ. ಕೇಂದ್ರ ಸರಕಾರ ನೀಡಿರುವ ಅಶ್ವಾಸನೆಗಳು ಹಾಗೆಯೇ ಉಳಿದುಕೊಂಡಿವೆ. 2ಕೋಟಿ ಉದ್ಯೋಗ, ಪ್ರತಿಯೊಬ್ಬರ ಖಾತೆಗೂ 15 ಲಕ್ಷ ಇವೆಲ್ಲವನ್ನು ಪ್ರಶ್ನಿಸುವವರೇ ಇಲ್ಲದಂತಾಗಿದೆ. ನಾನು ಹಿಂದೆ ಮಾಡಿರುವ ಕಾರ್ಯಗಳನ್ನು ಗಮನಿಸಿ, ಹಿಂದಿನ ಸಂಸದರು ಮಾಡಿದ ಕೆಲಸಗಳನ್ನು ಗಮನಿಸಿ, ಕಾರ್ಯದಕ್ಷತೆ, ಪ್ರಗತಿ ಇವುಗಳನ್ನು ಗಮನಿಸಿ ಬೆಂಬಲ ನೀಡಿ. ಮತ್ತೊಮ್ಮೆ ನಿಮ್ಮ ಕ್ಷೇತ್ರದ ಅಭಿವೃದ್ಧಿಗಾಗಿ ಶ್ರಮಿಸಲು ಅವಕಾಶ ಕೊಡಿ,” ಎಂದು ಹೆಗ್ಡೆ ಹೇಳಿದರು.

ಜಯಪ್ರಕಾಶ್‌ ಹೆಗ್ಡೆಯವರನ್ನು ಗೆಲ್ಲಿಸುವುದು ನಮ್ಮ ಜವಾಬ್ದಾರಿ: ಮೋಟಮ್ಮ
ಈ ಸಂದರ್ಭದಲ್ಲಿ ಮಾಜಿ ಸಚಿವೆ ಮೋಟಮ್ಮ ಮಾತನಾಡಿ, “ಜಯಪ್ರಕಾಶ್‌ ಹೆಗ್ಡೆ ಅವರನ್ನು ಗೆಲ್ಲಿಸುವ ಜವಾಬ್ದಾರಿ ನಮ್ಮ ಚಿಕ್ಕಮಗಳೂರಿನ ಜನತೆ ಮುಂದಿದೆ. ಈ ಹಿಂದೆ ಸಂಸರಾಗಿದ್ದಾಗ ಜಯಪ್ರಕಾಶ್‌ ಹೆಗ್ಡೆ ಅವರು ಉತ್ತಮ ಕಾರ್ಯಗಳನ್ನು ಮಾಡಿದ್ದಾರೆ. ರೈಲ್ವೆಸೇವೆ ನಮ್ಮ ಕಣ್ಣ ಮುಂದಿಯೇ ಇದೆ. ಇಂಥ ಉತ್ತಮ ಹಾಗೂ ಅನುಭವಿ ಅಭ್ಯರ್ಥಿಯನ್ನು ಗೆಲ್ಲಿಸಲು ನಾವೆಲ್ಲ ಒಂದಾಗಿ ಶ್ರಮಿಸಬೇಕು,” ಎಂದು ಹೇಳಿದರು,

“ದೇಶದಲ್ಲಿ ಬಿಜೆಪಿಯನ್ನು ಕಿತ್ತೊಗೆಯುವ ಕೆಲಸ ಮಾಡಬೇಕಾಗಿದೆ. ಸುಳ್ಳಿನ ರಾಜಕೀಯ ಮಾಡುವವರನ್ನು ಕಿತ್ತೊಗೆಯಬೇಕಾದರೆ ನಾವೆಲ್ಲರೂ ಸಂಘಟಿತರಾಗಿ ಕಾಂಗ್ರೆಸ್‌ ಪಕ್ಷದ ಯಶಸ್ಸಿಗಾಗಿ ಶ್ರಮಿಸಬೇಕು. ಕಾಫಿ ಬೆಳೆಗಾರರ ಹೋರಾಟದಲ್ಲಿ ಸಾಥ್‌ ಕೊಟ್ಟವರು. ಸದ್ಯ ನಡೆಯುತ್ತಿರುವ ಹೈವೇ ಕಾಮಗಾರಿಗೂ ಜಯಪ್ರಕಾಶ್‌ ಹೆಗ್ಡೆಯವರೇ ಕಾರಣ. ಇದುವರೆಗೂ ಪ್ರತಿಯೊಬ್ಬರೂ ಜಯಪ್ರಕಾಶ್‌ ಹೆಗ್ಡೆ ಅವರಿಗೆ ಬೆಂಬಲ ನೀಡುತ್ತಿರುವುದು ಖುಷಿಯ ಸಂಗತಿ. ರಾಜ್ಯ ಸರಕಾರ ಮಹಿಳೆಯರಿಗಾಗಿ ಉತ್ತಮ ಯೋಜನೆಗಳನ್ನು ಕಾರ್ಯರೂಪಕ್ಕೆ ತಂದಿದ್ದು, ಅವುಗಳು ಯಶಸ್ಸು ಕಂಡಿವೆ. ಇದರಿಂದಾಗಿ ಚಿಕ್ಕಮಗಳೂರಿನ ಜನರು ಜಯಪ್ರಕಾಶ್‌ ಹೆಗ್ಡೆ ಅವರ ಕಾರ್ಯವೈಖರಿಯನ್ನು ನೋಡಿ ಪ್ರೋತ್ಸಾಹ ನೀಡಬೇಕು, ಜಿಲ್ಲೆಯ ಜನರು ಕಾಂಗ್ರೆಸ್‌ ಸರಕಾರವನ್ನು ಹಾರೈಸಿದ್ದಾರೆ. ಈಗ ಮತ್ತೊಮ್ಮೆ ಅವರು ಹಾರೈಕೆ ನೀಡುತ್ತಾರೆಂಬ ಭರವಸೆ ಇದೆ, ” ಎಂದರು.

ಈ ಸಂದರ್ಭದಲ್ಲಿ ಮಾಜಿ ಸಚಿವರಾದ ಬಿ.ಎಲ್‌, ಶಂಕರ್‌, ಬಿ.ಬಿ. ನಿಂಗಯ್ಯ, ಜಿಲ್ಲಾ ಡಿಸಿಸಿ ಅಧ್ಯಕ್ಷರಾದ ಅಂಶುಮಂತ ಗೌಡ, ಗ್ಯಾರೆಂಟಿ ಅನುಷ್ಠಾನ ಸಮಿತಿ ಜಿಲ್ಲಾಧ್ಯಕ್ಷ ಶಿವಾನಂದ ಸ್ವಾಮಿ, ಮಾಜಿ ಶಾಸಕರಾದ ಕುಮಾರ ಸ್ವಾಮಿ, ತಾಲೂಕು ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಹೆಚ್‌.ಜಿ. ಸುರೇಂದ್ರ, ಸ್ಥಳೀಯ ಮುಖಂಡರಾದ ಎಂ.ಪಿ. ಮನು, ಪಿ.ಆರ್‌. ವಿನಯ್‌ ಕುಮಾರ್‌, ಕೆ. ವೆಂಕಟೇಶ್‌, ಬಿ,ಎಸ್‌. ಜಯರಾಮ್‌, ಅಕ್ರಮ್‌ ಹಾಜಿಕ ಸಿ.ಕೆ. ಇಬ್ರಾಹಿಂ, ಎಂ.ಎಸ್‌. ಅನಂತ್‌, ಜಿಲ್ಲಾ ಪಂಚಾಯಿತಿ ಹಾಲಿ ಮತ್ತು ಮಾಜಿ ಸದಸ್ಯರುಗಳು, ಗ್ರಾಮ ಪಂಚಾಯಿತಿ ಸದಸ್ಯರುಗಳು, ಜಿಲ್ಲಾ ಮತ್ತು ತಾಲೂಕಿನ ಕಾಂಗ್ರೆಸ್‌ ಪದಾಧಿಕಾರಿಗಳು ಹಾಜರಿದ್ದರು.


Spread the love