ಜುಲೈ 5ರಿಂದ ಭಾನುವಾರ ಲಾಕ್‌ಡೌನ್‌, ಜೂ 29 ರಿಂದ ರಾತ್ರಿ 8ರಿಂದ ಬೆಳಿಗ್ಗೆ 5ರವರೆಗೆ ‘ಕರ್ಫ್ಯೂ’

Spread the love

ಜುಲೈ 5ರಿಂದ ಭಾನುವಾರ ಲಾಕ್‌ಡೌನ್‌, ಜೂ 29 ರಿಂದ ರಾತ್ರಿ 8ರಿಂದ ಬೆಳಿಗ್ಗೆ 5ರವರೆಗೆ ‘ಕರ್ಫ್ಯೂ’

ಬೆಂಗಳೂರು: ಕೊರೊನಾ ಸೋಂಕು ಹರಡುವುದನ್ನು ತಡೆಗಟ್ಟುವ ಉದ್ದೇಶ ದಿಂದ ಜುಲೈ 5ರಿಂದ ಪ್ರತಿ ಭಾನುವಾರ ರಾಜ್ಯದಾದ್ಯಂತ ‘ಕರ್ಫ್ಯೂ’ ಮಾದರಿಯಲ್ಲಿ ಸಂಪೂರ್ಣ ಲಾಕ್‌ಡೌನ್ ಮಾಡಲು ರಾಜ್ಯ ಸರ್ಕಾರ ನಿರ್ಧರಿಸಿದೆ.

ಜುಲೈ 10ರಿಂದ ಎಲ್ಲ ಸರ್ಕಾರಿ ಹಾಗೂ ಸರ್ಕಾರಿ ಸ್ವಾಮ್ಯದ ಕಚೇರಿಗಳ ನೌಕರರಿಗೆ ಒಂದು ತಿಂಗಳ ಕಾಲ ಎಲ್ಲ ಶನಿವಾರ ರಜೆ ನೀಡಿ, ವಾರದ ಕೆಲಸದ ದಿನಗಳನ್ನು ಐದು ದಿನಗಳಿಗೆ ಇಳಿಸಲಾಗಿದೆ.

ಸೋಮವಾರದಿಂದ (ಜೂನ್ 29) ರಾತ್ರಿ 8ಗಂಟೆಯಿಂದ ಬೆಳಿಗ್ಗೆ 5 ಗಂಟೆ ಯವರೆಗೆ ‘ಕರ್ಫ್ಯೂ’ ಜಾರಿಗೆ ತೀರ್ಮಾನಿಸಲಾಗಿದೆ. ಸದ್ಯ ರಾತ್ರಿ 9ಗಂಟೆಯಿಂದ ಬೆಳಿಗ್ಗೆ 5 ಗಂಟೆಯವರೆಗೆ ಕರ್ಫ್ಯೂ ಜಾರಿಯಲ್ಲಿದೆ.

‘ಲಾಕ್ ಡೌನ್ ಹಾಗೂ ಕರ್ಫ್ಯೂ ಅವಧಿಯಲ್ಲಿ ಅಗತ್ಯ ವಸ್ತುಗಳ ಸಾಗಾಣಿಕೆಗೆ ಯಾವುದೇ ನಿರ್ಬಂಧ ಇರುವುದಿಲ್ಲ’ ಎಂದು ಸರ್ಕಾರ ತಿಳಿಸಿದೆ.

‘ಕರ್ಫ್ಯೂ ಹೇಗಿರುತ್ತದೆ, ಓಡಾಡಲು ಯಾರಿಗೆ ಅವಕಾಶ ಇರುತ್ತದೆ, ಭಾನುವಾರ ಅಂಗಡಿ, ಹೋಟೆಲ್‌ಗಳು ತೆರೆದಿರುತ್ತವೆಯೇ ಎಂಬ ಬಗ್ಗೆ ಪ್ರತ್ಯೇಕ ಮಾರ್ಗಸೂಚಿ ಹೊರಡಿಸಲಾಗುತ್ತದೆ’ ಎಂದು ಮುಖ್ಯಮಂತ್ರಿ ಸಚಿವಾಲಯ ತಿಳಿಸಿದೆ.

ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ನೇತೃತ್ವದಲ್ಲಿ ಶನಿವಾರ ನಡೆದ ಹಿರಿಯ ಸಚಿವರು ಮತ್ತು ಅಧಿಕಾರಿಗಳ ತುರ್ತು ಸಭೆಯಲ್ಲಿ ಈ ತೀರ್ಮಾನಗಳನ್ನು ತೆಗೆದುಕೊಳ್ಳಲಾಗಿದೆ. ಕೊರೊನಾ ನಿಯಂತ್ರಣಕ್ಕೆ ಇನ್ನಷ್ಟು ಕಟ್ಟುನಿಟ್ಟಿನ ಕ್ರಮಗಳನ್ನು ತೆಗೆದುಕೊಳ್ಳುವ ಬಗ್ಗೆಯೂ ಸಭೆಯಲ್ಲಿ ಚರ್ಚೆ ನಡೆಯಿತು.

ಈ ಹಿಂದೆ ಸಚಿವ ಸಂಪುಟ ಸಭೆಯಲ್ಲಿ ಭಾನುವಾರ ಕರ್ಫ್ಯೂ ಜಾರಿಗೆ ನಿರ್ಧರಿಸಲಾಗಿತ್ತು. ಅದರಂತೆ, ಮೇ 24ರಂದು (ಭಾನುವಾರ) ಮೊದಲ ಬಾರಿಗೆ ಕರ್ಫ್ಯೂ ಜಾರಿಗೊಳಿಸಲಾಗಿತ್ತು. ಆದರೆ, ಸಾರ್ವಜನಿಕರ ಬೇಡಿಕೆ ಹಾಗೂ ರಾಜ್ಯದ ಜನರ ಹಿತದೃಷ್ಟಿಯ ಕಾರಣ ನೀಡಿ ಏಕಾಏಕಿ ಈ ನಿರ್ಧಾರದಿಂದ ಸರ್ಕಾರ ಹಿಂದೆ ಸರಿದಿತ್ತು.

ಸಭೆಯ ಬಳಿಕ ಮಾತನಾಡಿದ ಕಂದಾಯ ಸಚಿವ ಆರ್‌. ಅಶೋಕ, ‘ರಾಜಧಾನಿಯ ಕೊರೊನಾ ಸೋಂಕಿತರಿಗೆ ಕೃಷಿ ವಿಶ್ವವಿದ್ಯಾಲಯದಲ್ಲಿ 900 ಹಾಸಿಗೆಗಳಿಗೆ ವ್ಯವಸ್ಥೆ ಮಾಡಲಾಗುತ್ತಿದೆ. ಖಾಸಗಿ ಆಸ್ಪತ್ರೆಗಳ ಜೊತೆ ಸೋಮವಾರ ಸಭೆ ‌ಮಾಡುತ್ತೇನೆ. ನಂತರ ಖಾಸಗಿ ವೈದ್ಯಕೀಯ ಕಾಲೇಜುಗಳ ಪ್ರಮುಖರ ಜೊತೆಗೂ ಚರ್ಚೆ ನಡೆಸುತ್ತೇನೆ. ಖಾಸಗಿ ಆಸ್ಪತ್ರೆಗಳ ಮುಖ್ಯಸ್ಥರ ಬಳಿ ನಾವು ಬೇಡುವ ಸ್ಥಿತಿಯಲ್ಲಿ ಇಲ್ಲ. ರಾಷ್ಟ್ರೀಯ ವಿಪತ್ತು ಕಾಯ್ದೆಯ ಅನ್ವಯ ಸರ್ಕಾರ ನಿಗದಿಪಡಿಸುವ ದರಕ್ಕೆ ಹಾಗೂ ತೀರ್ಮಾನಗಳಿಗೆ ಅವರು ಬದ್ಧರಾಗಬೇಕಿದೆ’ ಎಂದು  ತಿಳಿಸಿದರು.


Spread the love