ಜ.22 ರಾಮ ಮಂದಿರ ಲೋಕಾರ್ಪಣೆಗೆ ಸಾರ್ವತ್ರಿಕ ರಜೆ ಘೋಷಣೆಗೆ ಸಿಎಂ ಗೆ ಯಶ್ಪಾಲ್ ಸುವರ್ಣ ಮನವಿ

Spread the love

 ಜ.22 ರಾಮ ಮಂದಿರ ಲೋಕಾರ್ಪಣೆಗೆ ಸಾರ್ವತ್ರಿಕ ರಜೆ ಘೋಷಣಗೆ ಸಿಎಂ ಗೆ ಯಶ್ಪಾಲ್ ಸುವರ್ಣ ಮನವಿ

ಉಡುಪಿ: ಸಮಸ್ತ ಹಿಂದೂಗಳ ಶ್ರದ್ಧಾ ಕೇಂದ್ರವಾಗಿ 500 ವರ್ಷಗಳ ಕನಸು ನನಸಾಗುವ ಸಮಸ್ತ ಭಾರತೀಯರ ಪಾಲಿಗೆ ಅತ್ಯಂತ ಪವಿತ್ರ ದಿನವಾಗಿ ಅಯೋಧ್ಯೆ ಶ್ರೀ ರಾಮ ಮಂದಿರದ ಲೋಕಾರ್ಪಣೆಯ ಭಾವನಾತ್ಮಕ ಐತಿಹಾಸಿಕ ಕ್ಷಣವನ್ನು ಮನೆ ಮನಗಳಲ್ಲಿ ಆಚರಿಸಲು ಜನವರಿ 22 ರಂದು ಸಾರ್ವತ್ರಿಕ ರಜೆ ಘೋಷಣೆ ಮಾಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ರವರಿಗೆ ಉಡುಪಿ ಶಾಸಕ ಶ್ರೀ ಯಶ್ ಪಾಲ್ ಸುವರ್ಣ ಮನವಿ ಮಾಡಿದ್ದಾರೆ.

ಜನವರಿ 22 ರಂದು ಪ್ರಧಾನಿ ನರೇಂದ್ರ ಮೋದಿಯವರ ಉಪಸ್ಥಿತಿಯಲ್ಲಿ ಶ್ರೀ ರಾಮ ದೇವರ ವಿಗ್ರಹಕ್ಕೆ ಪ್ರಾಣ ಪ್ರತಿಷ್ಠೆಯ ಮೂಲಕ ಕೋಟ್ಯಾಂತರ ಭಕ್ತರ ಹಲವು ಶತಮಾನಗಳ ಮಂದಿರದ ಲೋಕಾರ್ಪಣೆಗೆ ಜಗತ್ತು ಸಾಕ್ಷಿಯಾಗಲಿದೆ.

ಈ ವಿಶೇಷ ದಿನದಂದು ದೇಶದಾದ್ಯಂತ ಹಲವು ದೇವಸ್ಥಾನ, ಮಂದಿರ ಹಾಗೂ ಸಂಘ ಸಂಸ್ಥೆಗಳಲ್ಲಿ ವಿಶೇಷ ಪೂಜೆ, ಭಜನಾ ಸಂಕೀರ್ತನೆ, ಅನ್ನ ಸಂತರ್ಪಣೆಯ ಮೂಲಕ ಅತ್ಯಂತ ಸಂಭ್ರಮ ಸಡಗರದಿಂದ ಅಚರಿಸುತ್ತಿದ್ದು, ಪ್ರಧಾನಿ ಶ್ರೀ ನರೇಂದ್ರ ಮೋದಿಯವರು ದೇಶದ ಜನತೆಗೆ ಈ ಪವಿತ್ರ ದಿನವನ್ನು ಮನೆ ಮನೆಗಳಲ್ಲಿ ದೀಪಾವಳಿ ಹಬ್ಬದಂತೆ ಆಚರಿಸಲು ಕರೆ ನೀಡಿದ್ದಾರೆ.

ರಾಜ್ಯ ಸರಕಾರ ಜನವರಿ 22 ರಂದು ಸಾರ್ವತ್ರಿಕ ರಜೆ ಘೋಷಣೆ ಮಾಡಿ ಪವಿತ್ರ ದಿನವನ್ನು ಸಂಭ್ರಮದಿಂದ ಆಚರಿಸಲು ರಾಜ್ಯದ ಜನತೆಗೆ ಅವಕಾಶ ಕಲ್ಪಿಸುವಂತೆ ಮನವಿ ಮಾಡಿದ್ದರೆ.

ಉಡುಪಿಯಲ್ಲಿ ಬೆಳಕಿನ ರಾಮೋತ್ಸವ ಆಚರಿಸೋಣ : ಯಶ್ ಪಾಲ್ ಸುವರ್ಣ

ಅಯೋಧ್ಯೆ ಶ್ರೀ ರಾಮ ಮಂದಿರದಲ್ಲಿ ಸಮಸ್ತ ಹಿಂದೂಗಳ ಬಹು ಶತಮಾನದ ಕನಸು ಶ್ರೀ ರಾಮ ದೇವರ ಪ್ರಾಣ ಪ್ರತಿಷ್ಠೆಯ ಐತಿಹಾಸಿಕ ದಿನವನ್ನು ಸಂಭ್ರಮದಿಂದ ಆಚರಿಸುವ ನಿಟ್ಟಿನಲ್ಲಿ ಉಡುಪಿಯ ಜನತೆ ತಮ್ಮ ಮನೆ, ಕಚೇರಿ, ಕಟ್ಟಡಗಳಿಗೆ ದೀಪಾಲಂಕಾರ ಮಾಡಿ ರಾಮ ಜ್ಯೋತಿಯನ್ನು ಬೆಳಗುವ ಮೂಲಕ ಪೊಡವಿಗೊಡೆಯ ಕೃಷ್ಣನ ನಾಡಿನಿಂದ ಅಯೋಧ್ಯೆ ಶ್ರೀ ರಾಮ ಮಂದಿರ ನಿರ್ಮಾಣ ಸಮಿತಿಯ ವಿಶ್ವಸ್ಥರಾಗಿರುವ ಪೇಜಾವರ ಮಠದ ಪರಮಪೂಜ್ಯ ಶ್ರೀ ಶ್ರೀ ವಿಶ್ವಪ್ರಸನ್ನ ತೀರ್ಥರ ಆಶಯದಂತೆ ದೇಶಕ್ಕೆ ಹೊಸ ಸಂದೇಶ ಸಾರುವಂತೆ ಉಡುಪಿಯ ಜನತೆಗೆ ಶಾಸಕ ಯಶ್ ಪಾಲ್ ಸುವರ್ಣ ಮನವಿ ಮಾಡಿದ್ದಾರೆ.

ಜನವರಿ 14 ಮಕರ ಸಂಕ್ರಾತಿಯ ಶುಭ ದಿನದಿಂದ ಆರಂಭಗೊಂಡು, ಜನವರಿ 18 ರಂದು ಉಡುಪಿಯ ಪುತ್ತಿಗೆ ಮಠದ ಶ್ರೀ ಶ್ರೀ ಸುಗುಣೇಂದ್ರ ತೀರ್ಥರ ಚತುರ್ಥ ಪರ್ಯಾಯ ಮಹೋತ್ಸವ ಹಾಗೂ ಜನವರಿ 22 ರಂದು ನಡೆಯುವ ಅಯೋಧ್ಯೆ ಶ್ರೀ ರಾಮ ಮಂದಿರದ ಲೋಕಾರ್ಪಣೆ ಸಮಾರಂಭದ ಪ್ರಯುಕ್ತ ಜನವರಿ 25 ರವೆರೆಗೆ 10 ದಿನಗಳ ಕಾಲ ದೀಪಾಲಂಕಾರ ಮಾಡುವಂತೆ ಜನತೆಗೆ ಮನವಿ ಮಾಡಿದ್ದಾರೆ.

ಜನವರಿ 22 ರಂದು ಶಾಸಕ ಯಶ್ ಪಾಲ್ ಸುವರ್ಣ ವತಿಯಿಂದ ಶ್ರೀ ಕೃಷ್ಣ ಮಠದಲ್ಲಿ ವಿಶೇಷ ಹಾಲು ಪಾಯಸ ಸೇವೆ ಹಾಗೂ ಕುಣಿತ ಭಜನಾ ಕಾರ್ಯಕ್ರಮ
ಜನವರಿ 22 ರಂದು ರಾಮ ಮಂದಿರದ ಲೋಕಾರ್ಪಣೆಯ ಹಿನ್ನೆಲೆಯಲ್ಲಿ ಶಾಸಕ ಯಶ್ ಪಾಲ್ ಸುವರ್ಣ ವತಿಯಿಂದ ಭಕ್ತಾದಿಗಳಿಗೆ ವಿಶೇಷ ಹಾಲು ಪಾಯಸ ಸೇವೆ ಹಾಗೂ ಉಡುಪಿ ಶ್ರೀ ಕೃಷ್ಣ ಮಠದಲ್ಲಿ ವಿವಿಧ ತಂಡಗಳ ಕುಣಿತ ಭಜನಾ ಕಾರ್ಯಕ್ರಮ ಆಯೋಜಿಸಿರುವುದಾಗಿ ತಿಳಿಸಿದ್ದಾರೆ.


Spread the love