ಡಿಸೆಂಬರ್ 1-2 ರಂದು ಮಂಗಳೂರಿನಲ್ಲಿ   ಜನನುಡಿ ಕಾರ್ಯಕ್ರಮ

Spread the love

ಡಿಸೆಂಬರ್ 1-2 ರಂದು ಮಂಗಳೂರಿನಲ್ಲಿ   ಜನನುಡಿ ಕಾರ್ಯಕ್ರಮ

ಮಂಗಳೂರು: ದೇಶದ ಜನ ಎದುರಿಸುತ್ತಿರುವ ಸವಾಲುಗಳಿಗೆ ಈ ದೇಶದ ಸಾಹಿತ್ಯ ಮತ್ತು ಸಾಂಸ್ಕೃತಿಕ ಪ್ರತಿರೋಧದ ಮೂಲಕ ಉತ್ತರ ಕಂಡುಕೊಳ್ಳುವ ಆಶಯದೊಂದಿಗೆ ಹುಟ್ಟಿಕೊಂಡಿರುವ ಜನನುಡಿ ಕಾರ್ಯಕ್ರಮವು ಈ ಬಾರಿ ಡಿಸೆಂಬರ್ 01 ಮತ್ತು 02 ರಂದು ಮಂಗಳೂರಿನ ನಂತೂರಿನಲ್ಲಿರುವ ಶಾಂತಿ ಕಿರಣ ಸಭಾಂಗಣದಲ್ಲಿ ನಡೆಯಲಿದೆ. ನಾಡಿನ ಖ್ಯಾತ ಚಿಂತಕರು, ಸಂವಿಧಾನ ತಜ್ಞರೂ ಆಗಿರುವ ಹೈಕೋರ್ಟ್ ನ ನಿವೃತ್ತ ನ್ಯಾಯಾಧೀಶ ಜಸ್ಟಿಸ್ ನಾಗಮೋಹನ್ ದಾಸ್ ಅವರು ಉದ್ಘಾಟಿಸಲಿದ್ದಾರೆ. ಅದ್ಘಾಟನಾ ಗೋಷ್ಠಿಯ ಮುಖ್ಯ ಅತಿಥಿಯಾಗಿ ಬಹುಭಾಷಾ ನಟ ಪ್ರಕಾಶ್ ರೈ ಭಾಗವಹಿಸಲಿದ್ದಾರೆ. ಎರಡು ದಿನಗಳ ಕಾಲ ನಡೆಯುವ “ಜನನುಡಿ” ಯಲ್ಲಿ ನಾಡಿನ ಖ್ಯಾತ ಸಾಹಿತಿಗಳು, ಚಿಂತಕರು, ಹೋರಾಟಗಾರರು ಮತ್ತು ಯುವ ಸಮುದಾಯ ಭಾಗವಹಿಸಲಿದೆ.

ಆರು ವರ್ಷಗಳ ಹಿಂದೆ ಅಭಿಮತ ಎಂಬ ಕೆಲವೇ ಸಮಾನ ಮನಸ್ಕರ ಸಂಘಟನೆಯ ಮೂಲಕ ಪ್ರಾರಂಭಗೊಂಡ ಜನನುಡಿ ಇಂದು ನಾಡಿನ ಸಾಹಿತ್ತಿಕ, ಸಾಂಸ್ಕೃತಿಕ ,ಸಾಮಾಜಿಕ ಮತ್ತು ರಾಜಕೀಯ ಕ್ಷೇತ್ರದ ನಾಯಕರ ಗಮನಸೆಳೆಯುತ್ತಿರುವ ಪ್ರಮುಖ ಕಾರ್ಯಕ್ರಮವಾಗಿದೆ. ಕಲಬುರಗಿಯಿಂದ ಹಿಡಿದು ಮೈಸೂರು ವರೆಗೆ ಶಿವಮೊಗ್ಗದಿಂದ ಕೋಲಾರದ ವರೆಗೆ ರಾಜ್ಯದ ಬಹುತೇಕ ಭಾಗಗಳಿಂದ ಜನ ಸ್ವಇಚ್ಚೆಯಿಂದ ಬಂದು ಜನನುಡಿಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಈಗಾಗಲೆ ಹೊರ ಜಿಲ್ಲೆಗಳಿಂದ ಐನೂರಕ್ಕೂ ಹೆಚ್ಚು ಆಸಕ್ತರು ಪ್ರತಿನಿಧಿಗಳಾಗಿ ಹೆಸರು ನೊಂದಾಯಿಸಿದ್ದಾರೆ.

ಈ ಬಾರಿಯ ಜನನುಡಿಯನ್ನು ಜಸ್ಟಿಸ್ ನಾಗಮೋಹನ ದಾಸ್ ಉದ್ಘಾಟನೆ ನಡೆಸಲಿದ್ದು ಖ್ಯಾತ ಬಹುಭಾಷಾ ನಟರಾದ ಪ್ರಕಾಶ್ ರೈ, ಚಿಂತಕರಾದ ಡಾ. ಹಸೀನಾ ಖಾದ್ರಿ, ದಲಿತ ಹೋರಾಟಗಾರರಾದ ಎಂ ದೇವದಾಸ್ ಉಪಸ್ಥಿತರಿದ್ದಾರೆ. ಲೇಖಕಿ ಡಾ. ವಿನಯಾ ಉದ್ಘಾಟನಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ಭವಿಷ್ಯದ ಭಾರತ : ಮಾರ್ಕ್ಸ್- ಅಂಬೆಂಡ್ಕರ್- ಗಾಂಧಿ- ಲೋಹಿಯಾ ಎಂಬ ವಿಷಯದಲ್ಲಿ ಮೊದಲ ಗೋಷ್ಠಿ ನಡೆಯಲಿದ್ದು, ಜಿ ರಾಜಶೇಖರ, ಡಾ. ಪುರುಷೋತ್ತಮ ಬಿಳಿಮಲೆ, ಡಾ. ಮುಜಫರ್ ಅಸ್ಸಾದಿ, ಡಾ. ಡಿ ಡೊಮಿನಿಕ್ ವಿಚಾರ ಮಂಡನೆ ಮಾಡಲಿದ್ದಾರೆ. ಭಾರತದ ಮುಸ್ಲಿಮರು ಗೋಷ್ಠಿಯಲ್ಲಿ ಹಿರಿಯ ಪತ್ರಕರ್ತರಾದ ಅಬ್ದುಸ್ಸಲಾಂ ಪುತ್ತಿಗೆಯವರು ಉಪನ್ಯಾಸ ನೀಡಲಿದ್ದಾರೆ. ಮೊದಲ ದಿನದ ಸಂಜೆ ಕೊರಗರ ಗಜಮೇಳ, ಬ್ಯಾರಿ ಸಮುದಾಯದ ದಪ್ಪು ಕುಣಿತ ಸೇರಿದಂತೆ ಹಲವು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದ್ದು, ದಲಿತ ಹೋರಾಟಗಾರ್ತಿ ಸುಶೀಲಾ ನಾಡ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ. ಜನನುಡಿಯ ಎರಡನೇ ದಿನವಾದ ಡಿಸೆಂಬರ್ 2 ರಂದು ಬೆಳಿಗ್ಗೆ ಕವಿಗೋಷ್ಠಿ ನಡೆಯಲಿದ್ದು, ಮಹಮ್ಮದ್ ಬಡ್ಡೂರ್, ವಿಲ್ಸನ್ ಕಟೀಲ್, ಹಾರೊಹಳ್ಳಿ ರವೀಂದ್ರ, ಸಹ್ಯಾದ್ರಿ ನಾಗರಾಜ್, ಸಂದೀಪ್ ಈಶಾನ್ಯ, ಪಿ.ಕೆ.ನವಲಗುಂದ, ಶ್ರೀಹರಿ ದೂಪದ, ವಿರೇಶ್ ನಾಯಕ, ಭುವನಾ ಹಿರೇಮಠ, ಸುನೈಫ್, ರಾಜಪ್ಪ ಭರಮಸಾಗರ, ದುರುಗೇಶ್ ಪೂಜಾರ್, ಸೌಮ್ಯ ಸಾಮಂತ್ರಿ, ಖಂಡು ಬಂಜಾರ ಯಾದಗಿರಿ, ಶೇಖರ್ ನಾಯಕ ಕನಕಗಿರಿ, ದೊಡ್ಡಕಲ್ಲಹಳ್ಳಿ ನಾರಾಯಣಪ್ಪ, ಚಾಂದ್ ಪಾಶ ಬೆಂಗಳೂರು, ಜ್ಯೋತಿ ಹಿಟ್ನಾಳ್, ರುಕ್ಮಿಣಿ ನಾಗಣ್ಣನವರ್, ಫೆಲ್ಸಿ ಲೋಬೋ ಕವನ ವಾಚನ ವಾಚನ ಮಾಡಲಿದ್ದಾರೆ. ಈ ಕವಿಗೋಷ್ಠಿಗೆ ಚಿದಂಬರ ನರೇಂದ್ರರವರು ಚಾಲನೆ ನೀಡಲಿದ್ದಾರೆ. ಹೊರಳುನೋಟ ಎಂಬ ಗೋಷ್ಠಿಯಲ್ಲಿ ಮಹೇಂದ್ರ ಕುಮಾರ್, ಸುಧೀರ್ ಕುಮಾರ್ ಮುರೊಳ್ಳಿ, ನಿಕೇತ್ ರಾಜ್ ಮೌರ್ಯ ವಿಷಯ ಮಂಡನೆ ಮಾಡಲಿದ್ದಾರೆ. ದಲಿತ ಭಾರತ ಎಂಬ ಸಂವಾದಗೋಷ್ಟಿಯ ಅಧ್ಯಕ್ಷತೆಯನ್ನು ಹಿರಿಯ ದಲಿತ ಚಿಂತಕರಾದ ಡಾ. ಎಂ ನಾರಾಯಣ ಸ್ವಾಮಿ ವಹಿಸಲಿದ್ದು, ರವಿಕುಮಾರ್ ಟೆಲೆಕ್ಸ್, ಡಾ ಪುಷ್ಪ ಅಮರೇಶ್ ವಿಚಾರ ಮಂಡನೆ ಮಾಡಲಿದ್ದಾರೆ. ಮಹಿಳಾ ಭಾರತ : ಸಂವಾದಗೋಷ್ಟಿಯ ಅಧ್ಯಕ್ಷತೆಯನ್ನು ಡಾ ಎಚ್ ಎಸ್ ಅನುಪಮಾ ನಡೆಸಿಕೊಡಲಿದ್ದು, ಡಾ ಚಮನ್ ಫರ್ಜಾನ, ಸೌಮ್ಯ ವಿಷಯ ಮಂಡನೆ ಮಾಡಲಿದ್ದಾರೆ. ಸಂಜೆ ನಡೆಯಲಿರುವ ಸಮಾರೋಪ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹಿರಿಯ ಪತ್ರಕರ್ತರಾದ ದಿನೇಶ್ ಅಮಿನ್ ಮಟ್ಟುರವರು ವಹಿಸಲಿದ್ದು, ಪ್ರೊ ವಲೇರಿಯನ್ ರೋಡ್ರಿಗಸ್ ಸಮಾರೋಪ ಭಾಷಣ ಮಾಡಲಿದ್ದಾರೆ. ಹಿರಿಯ ದಲಿತ ಚಳುವಳಿಗಾರ ಮಾವಳ್ಳಿ ಶಂಕರ್, ಎಸ್ ವರಲಕ್ಷ್ಮಿ ಸೇರಿದಂತೆ ಹಲವು ಖ್ಯಾತನಾಮರು ಸಮಾರೋಪದಲ್ಲಿ ಭಾಗವಹಿಸಲಿದ್ದಾರೆ ಎಂದು “ಅಭಿಮತ ಮಂಗಳೂರು” ಇದರ ಪ್ರಕಟನೆ ತಿಳಿಸಿದೆ.


Spread the love