ಡೆಂಗ್ಯೂ ನಿಯಂತ್ರಣ ನಮ್ಮೆಲ್ಲರ ಹೊಣೆ : ಡಾ||ಎಚ್. ಆರ್ ತಿಮ್ಮಯ್ಯ

Spread the love

ಡೆಂಗ್ಯೂ ನಿಯಂತ್ರಣ ನಮ್ಮೆಲ್ಲರ ಹೊಣೆ : ಡಾ||ಎಚ್. ಆರ್ ತಿಮ್ಮಯ್ಯ

ಮಂಗಳೂರು: ಮಳೆಗಾಲದಲ್ಲಿ ಡೆಂಗ್ಯೂ ರೋಗವು ಹೆಚ್ಚಾಗಿ ಹರಡುವ ಸಾದ್ಯತೆ ಇದ್ದು, ನಮ್ಮ ಪರಿಸರವನ್ನು ಸ್ವಚ್ಚವಾಗಿಟ್ಟುಕೊಳ್ಳುವ ಮೂಲಕ ಸುತ್ತಮುತ್ತ ಸೊಳ್ಳೆಗಳ ಉತ್ಪತ್ತಿ ಆಗದಂತೆ ತಡೆಯಲು ಕ್ರಮವಹಿಸಬೇಕು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ|| ಎಚ್.ಆರ್ ತಿಮ್ಮಯ್ಯ ಅವರು ಹೇಳಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಂಗಳೂರು ಮಹಾನಗರ ಪಾಲಿಕೆ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಇವರ ಸಂಯುಕ್ತ ಆಶ್ರಯದಲ್ಲಿ ಇಂದು ರಾಷ್ಟ್ರೀಯ ಡೆಂಗ್ಯೂ ದಿನದ ಅಂಗವಾಗಿ ವೆನ್‍ಲಾಕ್ ಜಿಲ್ಲಾಸ್ವತ್ರೆಯ ಆವರಣದಲ್ಲಿ ನಡೆದ ಜಾಥಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ಸೊಳ್ಳೆಗಳು ಉತ್ಪತ್ತಿ ಆಗದಂತೆ ಮನೆಯಲ್ಲಿ ಸಂಗ್ರಹವಾಗಿರುವ ನೀರಿನ ಮೂಲಗಳನ್ನು ಕಾಲಕಾಲಕ್ಕೆ ಸ್ವಚ್ಚಗೊಳಿಸಿ ಲಾರ್ವ ಬೆಳೆಯದಂತೆ ಕ್ರಮವಹಿಸಬೇಕು ಎಂದರು.

ಜಿಲ್ಲಾ ಮಲೇರಿಯಾ ನಿಯಂತ್ರಣಾಧಿüಕಾರಿ ಡಾ|. ನವೀನ್‍ಚಂದ್ರ ಕುಲಾಲ್ ಮಾತನಾಡಿ ನಾವು ಬಳಕೆ ಮಾಡಿ ಎಸೆದಂತಹಾ ತ್ಯಾಜ್ಯಗಳು, ತೆಂಗಿನ ಚಿಪ್ಪುಗಳು, ಪ್ಲಾಸ್ಟಿಕ್ ಬಾಟಲಿಗಳು, ಟಯರುಗಳು, ಮನೆಯ ಮೇಲಿನ ಛಾವಣಿಯಲ್ಲಿ ನಿಂತ ನೀರಿನಲ್ಲಿ ಡೆಂಗ್ಯೂ ಹರಡಿಸುವ ಈಡೀಸ್ ಸೊಳ್ಳೆ ಉತ್ಪತ್ತಿಯಾಗುತ್ತದೆ. ಮೂಲದಲ್ಲಿಯೇ ಬರದಂತೆ ತಡೆಗಟ್ಟುವ ನಿಟ್ಟಿನಲ್ಲಿ ಡೆಂಗ್ಯೂ ರೋಗಗಕ್ಕೆ ಕಾರಣವಾಗುವ ಈಡೀಸ್ ಸೊಳ್ಳೆಗಳು ಉತ್ಪತ್ತಿಯಾಗದಂತೆ ಮುಂಜಾಗ್ರತೆವಹಿಸಲು ಸಾರ್ವಜನಿಕರು ಕೈ ಜೋಡಿಸಿದರೆ ಡೆಂಗ್ಯೂ ಮುಕ್ತ ಸಮಾಜದ ನಿರ್ಮಾಣ ಸಾಧ್ಯ ಎಂದರು.

ಈ ಜಾಥವು ವೆನ್‍ಲಾಕ್ ಜಿಲ್ಲಾಸ್ಪತ್ರೆಯಿಂದ ಸಾಗಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಕಚೇರಿಯವರೆಗೆ ಸಾಗಿ ಸಾರ್ವಜನಿಕರಿಗೆ ಜಾಗೃತಿ ಮೂಡಿಸಲಾಯಿತು.

ಈ ಸಂದರ್ಭದಲ್ಲಿ ರಾಜ್ಯ ಸಾಂಕ್ರಾಮಿಕ ರೋಗಗಳ ಸಂಶೋದನಾಧಿಕಾರಿ ಡಾ|| ನಾಗರಾಜ್, ವೆನ್ಲಾಕ್ ಆಸ್ಪತ್ರೆಯ ಶಸ್ತ್ರಚಿಕಿತ್ಸಕರಾದ ಡಾ|| ಜೆಸಿಂತಾ, ವೆನ್ಲಾಕ್ ಆಸ್ಪತ್ರೆಯ ಆರ್.ಎಂ.ಓ ಡಾ. ಸುಧಾಕರ್, ಎಂಪಿಡಬ್ಲ್ಯು ಕಾರ್ಯಕರ್ತರು, ಆರೋಗ್ಯ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿಗಳು ಜಾಥದಲ್ಲಿ ಭಾಗವಹಿಸಿದರು.


Spread the love