ಡೆಂಗ್ಯೂ ಮಲೇರಿಯಾ ನಿಯಂತ್ರಣಕ್ಕೆ ಗಪ್ಪಿ ಮೀನು ಅಭಿಯಾನ
ಮಂಗಳೂರು: ಭಾರತ ಸೇವಾದಳ ಮಂಗಳೂರು ತಾಲೂಕು ಸಮಿತಿ, ಮಹಾತ್ಮಾ ಗಾಂಧಿ ಶಾಂತಿ ಪ್ರತಿಷ್ಠಾನ ಹಾಗೂ ಮಂಗಳೂರು ನಗರ ಪರಿಸರಾಸಕ್ತ ಒಕ್ಕೂಟಗಳ ಜಂಟಿ ಆಶ್ರಯದಲ್ಲಿ ಇಂದು ತಾ 6-09-2019 ರಂದು ನಗರದ ಬಾವುಟಗುಡ್ಡದಲ್ಲಿರುವ ಠಾಗೋರ್ ಪಾರ್ಕ್ನಲ್ಲಿ ಡೆಂಗ್ಯೂ, ಮಲೇರಿಯಾ ನಿಯಂತ್ರಣಕ್ಕಾಗಿ ಗಾಪ್ಪಿ ಮೀನು ಅಭಿಯಾನ ಪ್ರಾರಂಭಗೊಂಡಿದೆ.

ಈ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಮಂಗಳೂರು ಮಹಾನಗರ ಪಾಲಿಕೆಯ ಉಪ ಆಯುಕ್ತೆ ಶ್ರೀಮತಿ ಗಾಯತ್ರಿ ನಾಯಕ್ರವರು ಮಾತನಾಡುತ್ತಾ, ಇತ್ತೀಚಿನ ಮೂರು ತಿಂಗಳುಗಳಿಂದ ನಗರದಲ್ಲಿ ಡೆಂಗ್ಯೂ ಕಾಯಿಲೆಯು ಬಹಳಷ್ಟು ವ್ಯಾಪಿಸಿದೆ. ಹಲವಾರು ಜನರು ಈ ರೋಗದಿಂದ ಬಳಲಿದ್ದಾರೆ. ಜಿಲ್ಲಾಡಳಿತ ಈಗಾಗಲೇ ಇದನ್ನು ನಿಯಂತ್ರಿಸಲು ಸಾಕಷ್ಟು ಕ್ರಮ ಕೈಗೊಂಡಿದೆ ಡೆಂಗ್ಯೂ ಕಾಯಿಲೆಯ ಸೊಳ್ಳೆಗಳು ಒಳ್ಳೆಯ ನೀರಿನಿಂದಲೇ ಉತ್ಪತ್ತಿಯಾಗಿರುವುದರಿಂದ, ಇದನ್ನು ನಿರ್ಮೂಲನೆ ಮಾಡಲು ಗಪ್ಪಿ ಮೀನುಗಳ ಸಹಾಯದಿಂದ ಸುಲಭವಾಗುತ್ತದೆ. ಈ ಗಪ್ಪಿ ಮೀನುಗಳು ಡೆಂಗ್ಯೂ ರೋಗದ ಲಾರ್ವಗಳನ್ನು ನಾಶಮಾಡುವ ಸಾಮರ್ಥ್ಯ ಹೊಂದಿರುತ್ತದೆ. ಇದೊಂದು ಜೈವಿಕ ವಿಧಾನವಾಗಿದ್ದು, ಸಾರ್ವಜನಿಕರು ಇದನ್ನು ಪ್ರತಿಯೊಂದು ಮನೆಯಲ್ಲಿ ಉಪಯೋಗಿಸಬೇಕೆಂದು ಮನವಿ ಮಾಡುತ್ತಿದ್ದೇವೆ ಎಂದರು.
ಕಾರ್ಯಕ್ರಮದಲ್ಲಿ ಮಹಾತ್ಮಗಾಂಧಿ ಶಾಂತಿ ಪ್ರತಿಷ್ಠಾನದ ಅಧ್ಯಕ್ಷ ಎ. ಸದಾನಂದ ಶೆಟ್ಟಿ, ಭಾರತ ಸೇವಾದಳ ತಾಲೂಕು ಅಧ್ಯಕ್ಷ ಪ್ರಭಾಕರ ಶ್ರೀಯಾನ್, ಪರಿಸರಾಸಕ್ತ ಒಕ್ಕೂಟದ ಮುಖ್ಯಸ್ಥ ಎ. ಸುರೇಶ್ ಶೆಟ್ಟಿ, ಭಾರತ ಸೇವಾದಳ ಜಿಲ್ಲಾ ಕಾರ್ಯದರ್ಶಿ ಟಿ.ಕೆ. ಸುಧೀರ್, ಗಾಂಧಿ ಪ್ರತಿಷ್ಠಾನದ ಕಾರ್ಯದರ್ಶಿ ಡಾ. ಇಸ್ಮಾಯಿಲ್, ಸೇವಾದಳ ತಾಲೂಕು ಉಪಾಧ್ಯಕ್ಷ ಉದಯ ಕುಂದರ್, ಜಿಲ್ಲಾ ಸಂಘಟಕ ಮಂಜೇಗೌಡ, ಮಾಜೀ ಕಾಪೆರ್Çೀರೇಟರ್ ಪ್ರೇಮ್ ಚಂದ್, ಹೆರಾಲ್ಡ್ ಡಿ’ಸೋಜ, ಕೃತಿನ್ ಕುಮಾರ್ ಮೊದಲಾದವರು ಉಪಸ್ಥಿತರಿದ್ದರು.
ಸಾರ್ವಜನಿಕರಿಗೆ ಗಪ್ಪಿ ಮೀನುಗಳ ಅವಶ್ಯಕತೆಯಿದ್ದಲ್ಲಿ ಠಾಗೋರ್ ಪಾರ್ಕಿನಲ್ಲಿರುವ ಗಾಂಧಿ ಪ್ರತಿಷ್ಠಾನ ಕಚೇರಿಗೆ ಬಂದು ಪಡೆದುಕೊಳ್ಳಬಹುದು ಎಂದು ತಿಳಿಸಲಾಗಿದೆ.













