ಡ್ರಗ್ಸ್‌ ಸೇವನೆ ಪ್ರಕರಣ। 10 ವಿದ್ಯಾರ್ಥಿಗಳು ಸೇರಿ 488 ಮಂದಿ ಪಾಸಿಟಿವ್‌: ಮಂಗಳೂರು ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ

Spread the love

ಡ್ರಗ್ಸ್‌ ಸೇವನೆ ಪ್ರಕರಣ। 10 ವಿದ್ಯಾರ್ಥಿಗಳು ಸೇರಿ 488 ಮಂದಿ ಪಾಸಿಟಿವ್‌: ಮಂಗಳೂರು ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ

ಮಂಗಳೂರು: ಮಾದಕ ದ್ರವ್ಯ ವಿರುದ್ಧದ ಕಾರ್ಯಾಚರಣೆಯನ್ನು ಬಿಗಿಗೊಳಿಸಿರುವಂತೆಯೇ, ಡ್ರಗ್ಸ್ ಸೇವನೆಗೆ ಸಂಬಂಧಿಸಿ ಕಾಲೇಜುಗಳಲ್ಲಿ ನಿಯಮಿತವಾಗಿ ತಪಾಸಣೆ ನಡೆಸಲಾಗುತ್ತಿದ್ದು ಕಳೆದ ಒಂದೂವರೆ ತಿಂಗಳ ಅವಧಿಯಲ್ಲಿ ತಪಾಸಣೆಯ ಸಂದರ್ಭ 10 ಮಂದಿ ವಿದ್ಯಾರ್ಥಿಗಳು ಡ್ರಗ್ಸ್ ಸೇವನೆ ಮಾಡಿರುವುದು ಪತ್ತೆಯಾಗಿದೆ ಎಂದು ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ ತಿಳಿಸಿದ್ದಾರೆ.

ಪೊಲೀಸ್ ಕಮಿಷನ‌ರ್ ಕಚೇರಿಯಲ್ಲಿ ಸುದ್ದಿಗೋಷ್ಟಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಅವರು, ಡ್ರಗ್ಸ್‌ ನಿಯಮಿತ ತಪಾಸಣೆ ಕುರಿತಂತೆ 113 ಕಾಲೇಜುಗಳು ಮುಂದೆ ಬಂದಿವೆ. ಅದರಲ್ಲಿ ಕೆಲವೊಂದು ದೂರು ಹಾಗೂ ಅನುಮಾನದ ಮೇರೆಗೆ ತಪಾಸಣೆ ನಡೆಸಲಾದ 40 ಕಾಲೇಜುಗಳಲ್ಲಿ 10 ವಿದ್ಯಾರ್ಥಿಗಳಲ್ಲಿ ಡ್ರಗ್ಸ್ ಸೇವನೆ ಕಂಡು ಬಂದಿದ್ದು ಅಗತ್ಯ ಕ್ರಮ ವಹಿಸಲಾಗಿದೆ. ಸಾರ್ವಜನಿಕವಾಗಿ ಈ ಅವಧಿಯಲ್ಲಿ 1200ಕ್ಕೂ ಅಧಿಕ ಮಂದಿಯ ತಪಾಸಣೆ ನಡೆಸಲಾಗಿದ್ದು, 478 ಮಂದಿ ಡ್ರಗ್ಸ್ ಸೇವನೆ ಮಾಡಿರುವುದು ಕಂಡು ಬಂದಿದೆ ಎಂದು ಅವರು ಹೇಳಿದರು.

ಕಳೆದ ಮೂರು ತಿಂಗಳ ಅವಧಿಯಲ್ಲಿ 73 ಮಂದಿ ಡ್ರಗ್ಸ್ ಪೂರೈಕೆದಾರನ್ನು ಮಂಗಳೂರು ಪೊಲೀಸರು ಬಂಧಿಸಿದ್ದು, 37 ಮಂದಿ ಇನ್ನೂ ಜೈಲಿನಲ್ಲಿದ್ದಾರೆ. ಕಳೆದ ವರ್ಷ 160 ಜನ ಡ್ರಗ್ಸ್ ಪೂರೈಕೆದಾರರನ್ನು ಬಂಧಿಸಲಾಗಿದ್ದರೆ, ಈ ವರ್ಷ ಈವರೆಗೆ ಒಟ್ಟು 132 ಮಂದಿಯನ್ನು ಬಂಧಿಸಲಾಗಿದೆ ಎಂದವರು ಹೇಳಿದರು.

ಎನ್‌ಡಿಪಿಎಸ್ (ಡ್ರಗ್ಸ್‌ ಪೂರೈಕೆ- ಸೇವನೆ )ಗೆ ಸಂಬಂಧಿಸಿ 2023ರಲ್ಲಿ 713 ಪ್ರಕರಣಗಳಲ್ಲಿ 9 48 ಮಂದಿಯನ್ನು ಬಂಧಿಸಲಾಗಿದ್ದು, ಒಟ್ಟು 1,71,11,700 ರೂ.ಗಳ ಮಾದಕ ದ್ರವ್ಯ ವಶಪಡಿಸಿಕೊಳ್ಳಲಾಗಿತ್ತು. 2024ರಲ್ಲಿ 1114 ಪ್ರಕರಣಗಳಲ್ಲಿ 1404 ಮಂದಿಯನ್ನು ಬಂಧಿಸಲಾಗಿದ್ದು, 82,51,99,930 ರೂ.ಗಳ ಮಾದಕ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿ ತ್ತು. 2025ರಲ್ಲಿ ಈವರೆಗೆ 477 ಪ್ರಕರಣಗಳಲ್ಲಿ 610 ಮಂದಿಯ ಬಂಧನ ಮಾಡಲಾಗಿದ್ದು, 2,04,23,650 ರೂ. ಮೌಲ್ಯದ ನಿಷೇಧಿತ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಕಳೆದ ಮೂರು ದಿನಗಳ ಅವಧಿಯಲ್ಲಿ 4 ಮಂದಿ ಡ್ರಗ್ಸ್ ಪೆಡ್ಡರ್‌ಗಳನ್ನು ವಶಪಡಿಸಿಕೊಂಡು ಅವರಿಂದ 2.5 ಕೆಜಿ ಗಾಂಜಾ ವಶಪಡಿಸಿಕೊಳ್ಳಲಾಗಿದೆ ಎಂದವರು ವಿವರ ನೀಡಿದರು.

ಡ್ರಗ್ಸ್‌ ಸೇವನೆ ಅಥವಾ ಪೂರೈಕೆಗೆ ಸಂಬಂಧಿಸಿ ಯಾವುದೇ ರೀತಿಯ ಮಾಹಿತಿಯನ್ನು ಪೊಲೀಸರಿಗೆ ನೀಡಲು ಸಹಾಯವಾಗುವ ನಿಟ್ಟಿನಲ್ಲಿ ಎಲ್ಲಾ ಕಾಲೇಜುಗಳಲ್ಲಿ ಕ್ಯೂಆ‌ರ್ ಕೋಡ್ ಅಳವಡಿಸುವ ಕಾರ್ಯ ಪೊಲೀಸರಿಂದ ನಡೆದಿದೆ. ಇದರಿಂದ ಸಾಕಷ್ಟು ದೂರುಗಳು ಬಂದಿದ್ದು, ಆರೋಪಿಗಳನ್ನು ಪತ್ತೆ ಹಚ್ಚಲು ನೆರವಾಗಿದೆ. ಈ ಕಾರ್ಯಾಚರಣೆ ಮುಂದುವರಿಯಲಿದೆ. ಸಾರ್ವಜನಿಕರು ಕೂಡಾ ಸಹಕಾರ ನೀಡಬೇಕು ಎಂದು ಅವರು ಹೇಳಿದರು.

ಡಿಸಿಪಿಗಳಾದ ಮಿಥುನ್ ಮತ್ತು ರವಿಶಂಕರ್ ಉಪಸ್ಥಿತರಿದ್ದರು.


Spread the love
Subscribe
Notify of

0 Comments
Inline Feedbacks
View all comments