ತಡರಾತ್ರಿ ಹೋಟೆಲ್ ತೆರೆದಿದ್ದಕ್ಕೆ ಪೊಲೀಸರೊಂದಿಗೆ ವಾಗ್ವಾದ: ವ್ಯಕ್ತಿ ವಿರುದ್ಧ ಮುಂಜಾಗ್ರತಾ ಕ್ರಮ

Spread the love

ತಡರಾತ್ರಿ ಹೋಟೆಲ್ ತೆರೆದಿದ್ದಕ್ಕೆ ಪೊಲೀಸರೊಂದಿಗೆ ವಾಗ್ವಾದ: ವ್ಯಕ್ತಿ ವಿರುದ್ಧ ಮುಂಜಾಗ್ರತಾ ಕ್ರಮ

ಪುತ್ತೂರು: ನಿಗದಿತ ಸಮಯದ ಬಳಿಕ ಹೋಟೆಲ್ ತೆರೆಯಲಾಗಿದ್ದ ವಿಚಾರವಾಗಿ ರಾತ್ರಿ ಗಸ್ತಿನಲ್ಲಿದ್ದ ಪೊಲೀಸರೊಂದಿಗೆ ವಾಗ್ವಾದ ನಡೆಸಿದ ವ್ಯಕ್ತಿಯ ವಿರುದ್ಧ ಪುತ್ತೂರು ನಗರ ಪೊಲೀಸರು ಮುಂಜಾಗ್ರತಾ ಕ್ರಮ ಕೈಗೊಂಡಿದ್ದಾರೆ.

ಜೂನ್ 18ರಂದು ರಾತ್ರಿ ಸುಮಾರು 10.30ಕ್ಕೆ ಪುತ್ತೂರು ನಗರ ಪೊಲೀಸ್ ಠಾಣೆಯ ಸಹಾಯಕ ಪೊಲೀಸ್ ಉಪನಿರೀಕ್ಷಕ ಚಂದ್ರ ಅವರು ಠಾಣಾ ಸಿಬ್ಬಂದಿ ಅಸ್ತಮ್ ಅವರೊಂದಿಗೆ ರಾತ್ರಿ ಗಸ್ತು ಕರ್ತವ್ಯದಲ್ಲಿದ್ದ ವೇಳೆ ಕಬಕ ಜಂಕ್ಷನ್‌ನಲ್ಲಿರುವ ಕೆ.ಎಸ್. ಆಲ್ಫಾ ಕಾರ್ನರ್ ಹೋಟೆಲ್ ತೆರೆದಿರುವುದು ಕಂಡುಬಂದಿತ್ತು. ಈ ವೇಳೆ ಹೋಟೆಲ್ ಸಿಬ್ಬಂದಿಗೆ ನಿಗದಿತ ಸಮಯದೊಳಗೆ ಹೋಟೆಲ್ ಮುಚ್ಚುವಂತೆ ಸೂಚಿಸಿ ಪೊಲೀಸರು ಸ್ಥಳದಿಂದ ತೆರಳಿದ್ದರು.

ಬಳಿಕ ತಡರಾತ್ರಿ ಸುಮಾರು 1.30ಕ್ಕೆ ಉಪವಿಭಾಗದ ರಾತ್ರಿ ಗಸ್ತು ಅಧಿಕಾರಿ ಪಿ.ಎಸ್.ಐ ಸುರೇಶ್ ಅವರೊಂದಿಗೆ ಅದೇ ಸ್ಥಳಕ್ಕೆ ಬಂದಾಗ ಹೋಟೆಲ್ ಇನ್ನೂ ತೆರೆದಿದ್ದು, ಮೂವರು ಗ್ರಾಹಕರು ಅಲ್ಲಿದ್ದುದನ್ನು ಪೊಲೀಸರು ಗಮನಿಸಿದರು. ಹೋಟೆಲ್ ಸಿಬ್ಬಂದಿಗೆ ಕಾನೂನು ನಿಯಮಗಳ ಕುರಿತು ತಿಳಿಸಿ ತಕ್ಷಣ ಹೋಟೆಲ್ ಮುಚ್ಚುವಂತೆ ಸೂಚಿಸಿದರು.

ಈ ವೇಳೆ ಅಲ್ಲಿದ್ದ ಗ್ರಾಹಕರ ಪೈಕಿ ಕಬಕ ನಿವಾಸಿ ಉಜ್ವಲ್ ಕುಮಾರ್ ಪ್ರಭು (45) ಎಂಬಾತ, ಮದ್ಯಪಾನ ಮಾಡಿರುವಂತೆ ಕಂಡುಬಂದಿದ್ದು, ಹೋಟೆಲ್ ಮುಚ್ಚುವುದಕ್ಕೆ ತಕರಾರು ತೆಗೆದು ಕರ್ತವ್ಯನಿರತ ಪೊಲೀಸರೊಂದಿಗೆ ವಾಗ್ವಾದ ನಡೆಸಿದ್ದಾನೆ ಎನ್ನಲಾಗಿದೆ. ಬಳಿಕ ಪಿ.ಎಸ್.ಐ ಸುರೇಶ್ ಅವರು ಆತನಿಗೆ ಕಾನೂನು ತಿಳುವಳಿಕೆ ನೀಡಿ ಹೋಟೆಲ್ ಮುಚ್ಚಿಸಿ ಸ್ಥಳದಿಂದ ತೆರಳಿದ್ದಾರೆ. ಘಟನೆಯ ವಿಡಿಯೊವನ್ನು ಕರ್ತವ್ಯದಲ್ಲಿದ್ದ ಪೊಲೀಸ್ ಸಿಬ್ಬಂದಿ ಮೊಬೈಲ್‌ನಲ್ಲಿ ಚಿತ್ರೀಕರಿಸಿಕೊಂಡಿದ್ದಾರೆ.

ತನಿಖೆಯಲ್ಲಿ ಉಜ್ವಲ್ ಕುಮಾರ್ ಪ್ರಭು ವಿರುದ್ಧ ಈ ಹಿಂದೆಯೇ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಎರಡು ಪ್ರಕರಣಗಳು ದಾಖಲಾಗಿರುವುದು ಬೆಳಕಿಗೆ ಬಂದಿದೆ. ಈ ಹಿನ್ನೆಲೆಯಲ್ಲಿ ಕರ್ತವ್ಯನಿರತ ಪೊಲೀಸರೊಂದಿಗೆ ವಾಗ್ವಾದ ನಡೆಸಿದ ಪ್ರಕರಣ ಸಂಬಂಧ ಮುಂಜಾಗ್ರತಾ ಕ್ರಮ ವರದಿ (Preventive Action Report) ಸಂಖ್ಯೆ 127/2026ರಡಿ ಕಾನೂನು ಕ್ರಮ ಕೈಗೊಳ್ಳಲಾಗಿದೆ.

ಇದಲ್ಲದೆ, ಪರವಾನಿಗೆ ಅವಧಿ ಮುಗಿದ ಬಳಿಕ ಅನಧಿಕೃತವಾಗಿ ಕಾರ್ಯನಿರ್ವಹಿಸುತ್ತಿದ್ದ ಹೋಟೆಲ್‌ನ್ನು ಮುಚ್ಚಿಸಲಾಗಿದೆ. ಘಟನೆಯ ಬಗ್ಗೆ ಮೇಲಾಧಿಕಾರಿಗಳಿಗೆ ಮಾಹಿತಿ ನೀಡದೇ ಹಾಗೂ ಪರಿಸ್ಥಿತಿಯನ್ನು ವೃತ್ತಿಪರವಾಗಿ ನಿರ್ವಹಿಸುವಲ್ಲಿ ವಿಫಲರಾದ ಪಿ.ಎಸ್.ಐ ಸುರೇಶ್ ಅವರಿಗೆ ಇಲಾಖೆಯಿಂದ ಎಚ್ಚರಿಕೆ ನೀಡಲಾಗಿದೆ.


Spread the love
Subscribe
Notify of

0 Comments