ತಾನೇ ಕಾಲಿಗೆ ಸರಪಳಿ ಸುತ್ತಿ ಬೀಗ ಹಾಕಿಕೊಂಡ ಭೂಪ! ಕುಟುಂಬಿಕರಿಗೆ ಒಪ್ಪಿಸಿದ ಬೈಂದೂರು ಪೊಲೀಸರು

Spread the love

ತಾನೇ ಕಾಲಿಗೆ ಸರಪಳಿ ಸುತ್ತಿ ಬೀಗ ಹಾಕಿಕೊಂಡ ಭೂಪ! ಕುಟುಂಬಿಕರಿಗೆ ಒಪ್ಪಿಸಿದ ಬೈಂದೂರು ಪೊಲೀಸರು

ಕುಂದಾಪುರ: ಇಲ್ಲಿನ ಕಿರಿಮಂಜೇಶ್ವರ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ಕಾಲಿಗೆ ಸರಪಳಿ ಸುತ್ತಿ ಮರವೊಂದಕ್ಕೆ ಬೀಗ ಹಾಕಿಕೊಂಡ ಅಮಾನವೀಯ ಸ್ಥಿತಿಯಲ್ಲಿ ಪತ್ತೆಯಾದ ಕೇರಳ ಮೂಲದ ಸಯ್ಯದ್ನನ್ನು ಬೈಂದೂರು ಪೊಲೀಸರು ಭಾನುವಾರ ಸಂಜೆ ಕುಟುಂಬಿಕರಿಗೆ ಒಪ್ಪಿಸಿದ್ದಾರೆ.

ಸಯ್ಯದ್ ಕುಟುಂಬಿಕರು ಭಾನುವಾರ ಸಂಜೆ ಬೈಂದೂರು ಠಾಣೆಗೆ ಆಗಮಿಸಿದ್ದು, ಠಾಣಾಧಿಕಾರಿ ತಿಮ್ಮೇಶ್ ಸಯ್ಯದ್ನನ್ನು ಸುರಕ್ಷಿತವಾಗಿ ಕುಟುಂಬಿಕರಿಗೆ ಒಪ್ಪಿಸಿದ್ದಾರೆ.

ಶನಿವಾರ ಮಧ್ಯಾಹ್ನದ ಸುಮಾರಿಗೆ ಕಿರಿಮಂಜೇಶ್ವರ ಆಸ್ಪತ್ರೆಯ ಸಮೀಪದಲ್ಲಿ ಕಾಲಿಗೆ ಸರಪಳಿ ಸುತ್ತಿ ಸಣ್ಣ ಮರವೊಂದಕ್ಕೆ ಬೀಗ ಹಾಕಿರುವ ಸ್ಥಿತಿಯಲ್ಲಿ ಪತ್ತೆಯಾಗಿದ್ದ ಸಯ್ಯದ್ನನ್ನು ವಾಹನ ಸವಾರರು ಬೈಂದೂರು ಠಾಣೆಗೆ ಮಾಹಿತಿ ನೀಡಿದ್ದರು. ಕೂಡಲೇ ಸ್ಥಳಕ್ಕಾಗಮಿಸಿದ ಠಾಣಾಧಿಕಾರಿ ತಿಮ್ಮೇಶ್ ಹಾಗೂ ಸಿಬ್ಬಂದಿಗಳು ಸರಪಳಿಯನ್ನು ಬಿಡಿಸಲು ಪ್ರಯತ್ನಿಸಿದರಾದರೂ ಬೀಗ ಹಾಕಿದ್ದರಿಂದ ತೆಗೆಯಲು ಸಾಧ್ಯವಾಗಿರಲಿಲ್ಲ. ಬಳಿಕ ಮರವನ್ನು ತುಂಡರಿಸಿ ಸರಪಳಿ ಸಮೇತವಾಗಿ ಸಮೀಪದ ವರ್ಕ್ ಶಾಪ್ಗೆ ಕರೆದೊಯ್ದು ಸಯ್ಯದ್ನನ್ನು ಸರಪಳಿ ಬಂಧನದಿಂದ ಮುಕ್ತಿಗೊಳಿಸಿದ್ದರು.

ಮಲೆಯಾಳಂ ಭಾಷೆ ಮಾತನಾಡುತ್ತಿರುವ ಸಯ್ಯದ್ನನ್ನು ಬೈಂದೂರು ಠಾಣಾಧಿಕಾರಿ ತಿಮ್ಮೇಶ್ ವಿಚಾರಣೆ ನಡೆಸಿದಾಗ ಈತ ಕೇರಳದ ಕೊಲಿಕೊಡ್ ಜಿಲ್ಲೆಯ ನಿವಾಸಿ ಎಂದು ತಿಳಿದುಬಂದಿತ್ತು. ಕೂಡಲೇ ಸಯ್ಯದ್ನನ್ನು ಮನೆಗೆ ಕಳುಹಿಸಲು ಬೈಂದೂರು ಪೊಲೀಸರು ಕೇರಳ ಪೊಲೀಸರ ನೆರವು ಕೋರಿದ್ದರು. ಸಯ್ಯದ್ ಬೈಂದೂರು ಪೊಲೀಸ್ ಠಾಣೆಯಲ್ಲೇ ಒಂದು ದಿನ ಕಳೆದಿದ್ದು, ರಾತ್ರಿ ಹಾಗೂ ಬೆಳಿಗ್ಗೆಯ ಊಟೋಪಚಾರ ವ್ಯವಸ್ಥೆಯನ್ನು ಪೊಲೀಸರೇ ವ್ಯವಸ್ಥೆ ಮಾಡಿದ್ದಾರೆ.

ಮೇಲ್ನೋಟಕ್ಕೆ ಸಯ್ಯದ್ ಸ್ಥಳೀಯರಿಗೆ ತೊಂದರೆ ಕೊಟ್ಟಿದ್ದರಿಂದ ಈ ರೀತಿಯಾಗಿ ಕಟ್ಟಿ ಹಾಕಿದ್ದಾರೆ ಎಂಬ ಅನುಮಾನಗಳು ವ್ಯಕ್ತವಾಗಿತ್ತು. ಬಳಿಕ ಸಯ್ಯದ್ನನ್ನು ಠಾಣೆಗೆ ಕರೆದೊಯ್ದ ಪೊಲೀಸರು ಮಲೆಯಾಳಂ ಭಾಷೆಯಲ್ಲೇ ವಿಚಾರಣೆ ನಡೆಸಿದ್ದರು. ವಿಚಾರಣೆ ವೇಳೆಯಲ್ಲಿ ಸಯ್ಯದ್ ಆಡಿರುವ ಮಾತು ಕೇಳಿ ಪೊಲೀಸರು ಆಶ್ಚರ್ಯಪಟ್ಟಿದ್ದರು. “ಕಾಲಿಗೆ ಸರಪಳಿ ಸುತ್ತಿ ಮರಕ್ಕೆ ಬೀಗ ಹಾಕಿಕೊಂಡಿದ್ದು ನಾನೇ. ಬೀಗ ಹಾಕಿದ ಬಳಿಕ ಬೀಗದ ಕೀಲಿಯನ್ನು ಬಿಸಾಡಿದ್ದೇನೆ. ನಾನು ಹೀಗೆ ಮಾಡುವುದರಿಂದ ನನ್ನ ಫೋಟೊ ಮತ್ತು ಹೆಸರು ಪೇಪರ್, ಟಿವಿಗಳಲ್ಲಿ ಬರುತ್ತೆ. ಪೊಲೀಸರು ಬಂದು ನನ್ನನ್ನು ಕರೆದುಕೊಂಡು ಹೋಗುತ್ತಾರೆ. ಈ ಹಿಂದೆಯೂ ನಾನು ಮೂರು ಬಾರಿ ಹೀಗೆ ಮಾಡಿಕೊಂಡಿದ್ದೇನೆ. ಕಣ್ಣೂರಿನಲ್ಲಿಯೂ ಒಮ್ಮೆ ಹೀಗೆ ಮಾಡಿಕೊಂಡಿದ್ದೇನೆ” ಎಂದು ಮಲೆಯಾಳಂ ಭಾಷೆಯಲ್ಲೇ ಸಯ್ಯದ್ ನಗು ನಗುತ್ತಾ ಠಾಣಾಧಿಕಾರಿಯ ಮುಂದೆ ಹೇಳಿಕೊಂಡಿದ್ದಾನೆ.

ಈ ಕುರಿತು ಮನೆಯವರು ಮಾತನಾಡಿ ಎರಡು ಮೂರು ಬಾರಿ ಹೀಗೆಯೇ ಮಾಡಿಕೊಂಡಿದ್ದಾನೆ. ಪೊಲೀಸರು ಫೋನ್ ಮಾಡಿದ ಬಳಿಕ ನಮ್ಮ ಗಮನಕ್ಕೆ ಬಂದಿದ್ದು, ಠಾಣೆಗೆ ಹೋಗಿ ಕರೆದುಕೊಂಡು ಬಂದಿದ್ದೇವೆ. ಇದೀಗ ಇಲ್ಲಿಯೂ ಹೀಗೆ ಮಾಡಿಕೊಂಡಿದ್ದಾನೆ. ಈಗಲೂ ಕರೆದುಕೊಂಡು ಮನೆಗೆ ಬಿಟ್ಟರೆ ಮತ್ತೆ ಬೇರೆಲ್ಲಾದರೂ ಹೋಗುತ್ತಾನೆ.


Spread the love