ತಾಯಿ, ಮಕ್ಕಳ ಕಗ್ಗೊಲೆ : ತಕ್ಷಣ ಹಂತಕನ ಬಂಧನವಾಗಲಿ – ಉಡುಪಿ ಜಿಲ್ಲಾ ಮುಸ್ಲಿಂ ಒಕ್ಕೂಟ

Spread the love

ತಾಯಿ, ಮಕ್ಕಳ ಕಗ್ಗೊಲೆ : ತಕ್ಷಣ ಹಂತಕನ ಬಂಧನವಾಗಲಿ – ಉಡುಪಿ ಜಿಲ್ಲಾ ಮುಸ್ಲಿಂ ಒಕ್ಕೂಟ

  • ಸರಕಾರದ ಬೇಜವಾಬ್ದಾರಿತನ ಖಂಡನೀಯ  

ಉಡುಪಿಯ ನೇಜಾರು ಕೆಮ್ಮಣ್ಣು ರಸ್ತೆಯ ತೃಪ್ತಿ ಲೇ ಔಟ್ ನಲ್ಲಿ ರವಿವಾರ ನಡೆದಿರುವ ತಾಯಿ ಮತ್ತು ಮೂವರ ಮಕ್ಕಳ ಭಯಾನಕ ಹತ್ಯೆ ಘಟನೆಯಿಂದ ಉಡುಪಿ ಜಿಲ್ಲೆಯ ಜನರು ಬೆಚ್ಚಿ ಬಿದ್ದಿದ್ದಾರೆ. ಉಡುಪಿಯ ಇತಿಹಾಸದಲ್ಲೇ ಅತ್ಯಂತ ಭೀಕರ ಹತ್ಯಾಕಾಂಡವೊಂದು ಹಾಡಹಗಲೇ ಜಿಲ್ಲಾ ಕೇಂದ್ರಕ್ಕೆ ಸಮೀಪದಿಂದ ತೀರಾ ದೂರ ಇಲ್ಲದ ಊರೊಂದರಲ್ಲಿ ನಡೆದಿರುವುದು ಜನರಲ್ಲಿ ತೀವ್ರ ಆತಂಕ ಸೃಷ್ಟಿಸಿದೆ. ಇಂತಹದೊಂದು ಭೀಕರ ಅಪರಾಧ ನಮ್ಮ ಸುತ್ತಮುತ್ತಲಲ್ಲಿ ನಡೆದಿದೆ ಎಂಬುದನ್ನು ನಂಬಲೂ ಆಗದಂತಹ ಆಘಾತ ಉಡುಪಿ ಜಿಲ್ಲೆಯ ಜನರ ಪಾಲಿಗೆ ಬಂದೆರಗಿದೆ ಎಂದು ಸೋಮವಾರ ಸಂಜೆ ನಡೆದ ಉಡುಪಿ ಜಿಲ್ಲಾ ಮುಸ್ಲಿಂ ಒಕ್ಕೂಟದ ಹೊಣೆಗಾರರ ತುರ್ತು ಸಭೆಯಲ್ಲಿ ಚರ್ಚಿಸಿದ ಬಳಿಕ ನೀಡಿರುವ ಪ್ರಕಟಣೆ ತಿಳಿಸಿದೆ.

ತಾಯಿ, ಆಕೆಯ ಇಬ್ಬರು ಹೆಣ್ಣು ಮಕ್ಕಳು ಹಾಗು ಒಬ್ಬ ಮಗನನ್ನು ಹಾಡಹಗಲಲ್ಲೇ ಅವರ ಮನೆಗೇ ನುಗ್ಗಿ ಕೇವಲ ಹತ್ತಿಪ್ಪತ್ತು ನಿಮಿಷಗಳಲ್ಲಿ ಕೊಂದು ಹಂತಕ ಆರಾಮವಾಗಿ ಪರಾರಿಯಾಗಿದ್ದಾನೆ. ಹತ್ಯಾಕಾಂಡ ನಡೆದು ಒಂದೂವರೆ ದಿನವಾಗಿದೆ. ಆದರೆ ಈವರೆಗೂ ಹಂತಕನ ಸುಳಿವು ಸಿಕ್ಕಿಲ್ಲ, ಬಂಧನ ಆಗಿಲ್ಲ. ಹಂತಕ ಕೊಲೆ ಮಡಿದ ಬಳಿಕ ಆತನನ್ನು ಕರೆದುಕೊಂಡು ಹೋಗಿದ್ದಾನೆ ಎನ್ನಲಾದ ಬೈಕ್ ಸವಾರನ ಬಗ್ಗೆಯೂ ಯಾವುದೇ ಸುಳಿವು ಈವರೆಗೆ ಸಿಕ್ಕಿರುವ ವರದಿಯಿಲ್ಲ. ಇದು ಜನರಲ್ಲಿ ಇನ್ನಷ್ಟು ಭೀತಿ ಸೃಷ್ಟಿಸಿದೆ. ಜೊತೆಗೆ ಜನರಲ್ಲಿ ನಾನಾ ಪ್ರಶ್ನೆಗಳನ್ನು ಸೃಷ್ಟಿಸಿದೆ. ಉಡುಪಿ ಪೊಲೀಸರು ಈ ದುರಂತದ ತನಿಖೆಯನ್ನು ಚುರುಕುಗೊಳಿಸಬೇಕು. ಅದಕ್ಕೆ ಬೇಕಾದ ಎಲ್ಲ ಕ್ರಮಗಳನ್ನು ಕೈಗೊಂಡು ನಿಷ್ಪಕ್ಷ ಹಾಗು ಕ್ಷಿಪ್ರ ತನಿಖೆ ನಡೆಸಿ ಹಂತಕ ಹಾಗು ಆತನ ಹಿಂದಿರುವ ಸೂತ್ರಧಾರಿಗಳನ್ನು ಆದಷ್ಟು ಶೀಘ್ರ ಬಂಧಿಸಿ ಕಾನೂನು ಪ್ರಕಾರ ಅತ್ಯಂತ ಗರಿಷ್ಟ ಶಿಕ್ಷೆ ಕೊಡಿಸಬೇಕು.

ಇನ್ನು ಇಷ್ಟು ದೊಡ್ಡ ಘಟನೆಯ ಬಗ್ಗೆ ರಾಜ್ಯ ಸರಕಾರ ಅತ್ಯಂತ ಸಂವೇದನಾರಹಿತವಾಗಿ ಹಾಗು ಬೇಜವಾಬ್ದಾರಿಯಿಂದ ನಡೆದುಕೊಂಡಿದೆ. ಘಟನೆ ನಡೆದು ನಲ್ವತ್ತು ಘಂಟೆಗಳಾದರೂ ಜಿಲ್ಲಾ ಉಸ್ತುವಾರಿ ಸಚಿವರು ಭೇಟಿ ಕೊಟ್ಟಿಲ್ಲ ಕನಿಷ್ಠ ಒಂದು ಹೇಳಿಕೆಯನ್ನೂ ಬಿಡುಗಡೆ ಮಾಡಿಲ್ಲ. ಜನರಿಂದ ವ್ಯಾಪಕ ಅಸಮಾಧಾನ ವ್ಯಕ್ತವಾಗಿ, ಮಾಧ್ಯಮಗಳಲ್ಲಿ ಸುದ್ದಿಯಾದ ಮೇಲೆಯೇ ಉಸ್ತುವಾರಿ ಸಚಿವರು ಪೊಲೀಸರಿಗೆ ಮಾತನಾಡಿ ಸೂಚನೆ ನೀಡಿದ್ದಾರೆ ಎಂಬ ಹೇಳಿಕೆ ಬಂದಿದೆ. ಉಸ್ತುವಾರಿ ಸಚಿವರೂ ಓರ್ವ ಮಹಿಳೆ ಹಾಗು ತಾಯಿ. ಅವರಿಂದ ಉಡುಪಿಯ ಜನ ಇಂತಹ ಸಂವೇದನಾರಹಿತ ವರ್ತನೆಯನ್ನು ನಿರೀಕ್ಷಿಸಿರಲಿಲ್ಲ. ಇದು ಜಿಲ್ಲೆಯ ಜನರಿಗೆ ತೀವ್ರ ನಿರಾಶೆ ತಂದಿದೆ.

ಹತ್ಯಾಕಾಂಡ ನಡೆದಿರುವ ನೇಜಾರು ಕೆಮ್ಮಣ್ಣು ಪ್ರದೇಶದಲ್ಲಿ ಹೆಚ್ಚಿನ ಪುರುಷರು ವಿದೇಶಗಳಲ್ಲಿ ಅಥವಾ ಪರಊರುಗಳಲ್ಲಿ ದುಡಿಯುವವರು. ಅಲ್ಲಿ ಹೆಚ್ಚಿನ ಮನೆಗಳಲ್ಲಿ ಮಹಿಳೆಯರು, ಮಕ್ಕಳೇ ಇರುತ್ತಾರೆ. ಹಾಗಾಗಿ ರವಿವಾರದ ಕಗ್ಗೊಲೆಗಳು ಈ ಪ್ರದೇಶದ ಜನರಲ್ಲಿ ಭಾರೀ ಭಯದ ವಾತಾವರಣ ಸೃಷ್ಟಿಸಿದೆ. ತಕ್ಷಣ ಹಂತಕನನ್ನು ಬಂಧಿಸುವುದು ಹಾಗು ಈ ಪ್ರದೇಶದಲ್ಲಿ ಸಿಸಿಟಿವಿ ಕ್ಯಾಮರಾ ಸಹಿತ ಇತರ ಕ್ರಮಗಳನ್ನು ತೆಗೆದುಕೊಂಡು ಜನರಲ್ಲಿ ಧೈರ್ಯ ತುಂಬುವ ಕೆಲಸವನ್ನು ಜಿಲ್ಲಾಡಳಿತ ಹಾಗು ಪೊಲೀಸ್ ಇಲಾಖೆ ತಡಮಾಡದೆ ಮಾಡಬೇಕಾಗಿದೆ. ಸರ್ಕಾರದ ಪ್ರತಿನಿಧಿಗಳು ಬಂದು ಸಂತ್ರಸ್ತ ಕುಟುಂಬದ ಸದಸ್ಯರನ್ನು ಹಾಗು ಪ್ರದೇಶದ ಜನರನ್ನು ಭೇಟಿಯಾಗಿ ಅವರಿಗೆ ಸ್ಥೈರ್ಯ ತುಂಬಬೇಕಾಗಿದೆ. ಇದು ಸರಕಾರದ ಆದ್ಯ ಕರ್ತವ್ಯ. ತಕ್ಷಣ ಈ ಕೆಲಸ ಆಗಬೇಕಾಗಿದೆ.


Spread the love

Leave a Reply