ದಕ್ಷಿಣ ಕನ್ನಡ: ಕಿತ್ತೂರು ಚೆನ್ನಮ್ಮ ಜಯಂತಿ ಆಚರಣೆ

Spread the love

ದಕ್ಷಿಣ ಕನ್ನಡ: ಕಿತ್ತೂರು ಚೆನ್ನಮ್ಮ ಜಯಂತಿ ಆಚರಣೆ

ಮಂಗಳೂರು : ಬ್ರಿಟಿಷ್‍ರ ವಿರುದ್ಧ ಹೋರಾಡಿದ ಭಾರತದ ಮೊದಲ ಮಹಿಳೆ ಕಿತ್ತೂರಿನ ರಾಣಿ ಚೆನ್ನಮ್ಮ. ಆಕೆ ಸ್ವಾತಂತ್ರ್ಯ, ಶೌರ್ಯ ಮತ್ತು ಸ್ವಾಭಿಮಾನದ ಸಂಕೇತವಾಗಿದ್ದಾಳೆ ಎಂದು ಇತಿಹಾಸ ಸಂಶೋಧಕ ಡಾ|ಪುಂಡಿಕಾ ಗಣಪಯ್ಯ ಭಟ್ ಹೇಳಿದ್ದಾರೆ.

ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸರಕಾರಿ ಶಿಕ್ಷಕ ಶಿಕ್ಷಣ ಮಹಾವಿದ್ಯಾಲಯದಲ್ಲಿ ಮಂಗಳವಾರ ಆಯೋಜಿಸಿದ ಕಿತ್ತೂರು ರಾಣಿ ಚೆನ್ನಮ್ಮ ಜಯಂತಿಯಲ್ಲಿ ವಿಶೇಷ ಉಪನ್ಯಾಸ ನೀಡಿದರು.

ಚೆನ್ನಮ್ಮ ರಾಣಿ ಬ್ರಿಟಿಷರೊಂದಿಗೆ ನಡೆಸಿದ ಮೊದಲ ಯುದ್ಧದಲ್ಲಿ ಬ್ರಿಟಿಷ್ ಕಲೆಕ್ಟರ್ ಥ್ಯಾಕರೆಯ ಸಾವಾಯಿತು. ಚೆನ್ನಮ್ಮ ರಾಣಿಯ ಸೈನ್ಯ ಬ್ರಿಟಿಷ್ ಸೈನ್ಯವನ್ನು ಸದೆ ಬಡಿಯಿತು. ಆದರೆ ಮುಂದೆ ಎರಡನೆಯ ಬಾರಿ ಯುದ್ಧ ನಡೆದಾಗ ತನ್ನವರ ಸಂಚಿನಿಂದಾಗಿ ಸೋಲ ಬೇಕಾಯಿತು. ಆಕೆಯನ್ನು ಬೈಲಹೊಂಗಲದಲ್ಲಿ ಗೃಹ ಬಂಧನದಲ್ಲಿ ಇಡಲಾಯಿತು. ಚೆನ್ನಮ್ಮ ರಾಣಿ ಐದು ವರ್ಷ ಬಂಧನದಲ್ಲಿದ್ದು ಅಲ್ಲಿಯೇ ನಿಧನರಾದರು ಎಂದು ಗಣಪಯ್ಯ ಭಟ್ ಹೇಳಿದರು.

ಚೆನ್ನಮ್ಮ ರಾಣಿಯ ಕುರಿತಾಗಿ ಸ್ಮಾರಕಗಳು ಸಾಕಷ್ಟಿವೆ. ಆದರೆ ಅವೆಲ್ಲವೂ ಭೌತಿಕ ಸ್ಮಾರಕಗಳಾಗಿವೆ. ನಾವು ಚೆನ್ನಮ್ಮ ರಾಣಿಯನ್ನು ಮನದಲ್ಲಿ ಆರಾಧಿಸಬೇಕು. ಅದು ಆಕೆಗೆ ನೀಡುವ ನಿಜವಾದ ಗೌರವವಾಗಿದೆ ಎಂದು ಡಾ|ಪುಂಡಿಕಾೈ ಗಣಪಯ್ಯ ಭಟ್ ಅಭಿಪ್ರಾಯ ಪಟ್ಟರು.

ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಪ್ರದೀಪಕುಮಾರ್ ಕಲ್ಕೂರ ದೀಪ ಬೆಳಗಿಸಿ ಕಿತ್ತೂರು ರಾಣಿ ಚೆನ್ನಮ್ಮ ಜಯಂತಿಗೆ ಚಾಲನೆ ನೀಡಿದರು. ವಿಧಾನ ಪರಿಷತ್ತು ಸದಸ್ಯ ಐವನ್ ಡಿಸೋಜ ಮಾತನಾಡಿ, ಕಿತ್ತೂರು ರಾಣಿ ಚೆನ್ನಮ್ಮ ಅವರ ಸಾಹಸ, ಹೋರಾಟ ಮಂಗಳೂರಿನ ಜನತೆಯ ಮನದಲ್ಲೂ ಚಿರಸ್ಥಾಯಿ ಆಗಬೇಕು. ಅದಕ್ಕಾಗಿ ಮಂಗಳೂರಿನಲ್ಲೂ ಚೆನ್ನಮ್ಮ ರಾಣಿಯ ಸ್ಮಾರಕ ಸ್ಥಾಪಿಸಬೇಕು ಎಂದು ಹೇಳಿದರು.

ಜಿಲ್ಲಾ ಪಂಚಾಯತ್ ಸಹಾಯಕ ಕಾರ್ಯದರ್ಶಿ ಗೋಪಾಲಕೃಷ್ಣ ಭಟ್, ಹೆಚ್ಚುವರಿ ಪೊಲೀಸ್ ಅಧೀಕ್ಷಕ ವಿ.ಜೆ.ಸಜಿತ್, ಸರಕಾರಿ ಶಿಕ್ಷಕ ಶಿಕ್ಷಣ ಮಹಾವಿದ್ಯಾಲಯದ ಪ್ರಾಂಶುಪಾಲ ಟಿ.ನಾರಾಯಣ ಗೌಡ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಮಂಗಳೂರು ತಾಲೂಕು ಪಂಚಾಯತ್ ಅಧ್ಯಕ್ಷ ಮೊಹಮ್ಮದ್ ಮೋನು ಅಧ್ಯಕ್ಷತೆ ವಹಿಸಿದ್ದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ರಾಜೇಶ್ ಜಿ ಸ್ವಾಗತಿಸಿ, ವಂದಿಸಿದರು.

ದಕ್ಷಿಣ ಕನ್ನಡ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜಂಟಿ ಆಶ್ರಯದಲ್ಲಿ ಕಿತ್ತೂರು ರಾಣಿ ಚೆನ್ನಮ್ಮ ಜಯಂತಿಯನ್ನು ಆಚರಿಸಲಾಯಿತು.


Spread the love