ದೀಪಾವಳಿಯಂದೆ ಮೀನುಗಾರರ ಬದುಕಲ್ಲಿ ಕಗ್ಗತ್ತಲು! ಬೆಂಕಿಯ ಜ್ವಾಲೆಗೆ ಧಗದಗಿಸಿದ ಮೀನುಗಾರಿಕಾ ಬೋಟ್

Spread the love

ದೀಪಾವಳಿಯಂದೆ ಮೀನುಗಾರರ ಬದುಕಲ್ಲಿ ಕಗ್ಗತ್ತಲು! ಬೆಂಕಿಯ ಜ್ವಾಲೆಗೆ ಧಗದಗಿಸಿದ ಮೀನುಗಾರಿಕಾ ಬೋಟ್

ಕುಂದಾಪುರ: ಇಲ್ಲಿಗೆ ಸಮೀಪದ ಗಂಗೊಳ್ಳಿಯ ಮೀನುಗಾರಿಕಾ ಬಂದರಿನ ಬೋಟು ನಿಲುಗಡೆಯ ಸ್ಥಳದಲ್ಲಿ ಸೋಮವಾರ ಬೆಳಿಗ್ಗೆ ಕಾಣಿಸಿಕೊಂಡ ಆಕಸ್ಮಿಕ ಅಗ್ನಿ ಅವಘಡದಲ್ಲಿ ಬೋಟು, ದೋಣಿ ಹಾಗೂ ಬೈಕ್ ಸೇರಿದಂತೆ ಕೋಟ್ಯಾಂತರ ರೂ. ಮೌಲ್ಯದ ವಸ್ತುಗಳು ಅಗ್ನಿ ಜ್ವಾಲೆಗೆ ಆಹುತಿಯಾಗಿದೆ.

ಸೋಮವಾರ ಬೆಳಿಗ್ಗೆ ಬಂದರು ಸಮೀಪದ ಬೋಟು ನಿಲುಗಡೆ ಸ್ಥಳದಲ್ಲಿ ಕಾಣಿಸಿಕೊಂಡ ಅಗ್ನಿಯ ಕಿಡಿ ಜ್ವಾಲೆಯಾಗಿ ಹರಡಿಕೊಂಡು ಸ್ಥಳದಲ್ಲಿ ಲಂಗರು ಹಾಕಿದ್ದ ಕೋಟ್ಯಾಂತರ ರೂ. ಮೌಲ್ಯದ ಏಳು ಬೋಟು, ಎರಡು ಮೀನುಗಾರಿಕಾ ದೋಣಿ ಹಾಗೂ ಎರಡು ಬೈಕ್ ಗಳನ್ನು ಆಹುತಿ ತೆಗೆದುಕೊಂಡಿದೆ.

ಆಕಸ್ಮಿಕವಾಗಿ ಕಾಣಿಸಿಕೊಂಡ ಬೆಂಕಿಯನ್ನು ನಿಯಂತ್ರಿಸಲು ಬಂದರು ಪ್ರದೇಶದಲ್ಲಿದ್ದ ಮೀನುಗಾರರು ಹಾಗೂ ಸ್ಥಳೀಯರು ಹರಸಾಹಸಪಟ್ಟರೂ ಪ್ರಯೋಜನವಾಗಲಿಲ್ಲ. ಕುಂದಾಪುರ ಹಾಗೂ ಬೈಂದೂರಿನಿಂದ ಆಗಮಿಸಿದ ಅಗ್ನಿಶಾಮಕ ಘಟಕದ ಎರಡು ತಂಡಗಳ ನಿರಂತರ ಕಾರ್ಯಾಚರಣೆಯಿಂದ 12 ಗಂಟೆಯ ವೇಳೆಗೆ ಬೆಂಕಿ ನಿಯಂತ್ರಣಕ್ಕೆ ಬಂದಿದೆ. ಅದೃಷ್ಟಾವಶಾತ್ ದುರಂತದಲ್ಲಿ ಯಾವುದೇ ಪ್ರಾಣ ಹಾನಿ ಅಥವಾ ಗಾಯಗಳು ಸಂಭವಿಸಿಲ್ಲ.

ಮೀನುಗಾರಿಕೆಯ ಋತುವಾಗಿರುವುದರಿಂದ ಜಿಲ್ಲೆಯ ಪ್ರಮುಖ ಮೀನುಗಾರಿಕಾ ಬಂದರುಗಳಲ್ಲಿ ಒಂದಾಗಿರುವ ಗಂಗೊಳ್ಳಿ ಬಂದರು ಪ್ರದೇಶದಲ್ಲಿ ನೂರಾರು ಮೀನುಗಾರಿಕಾ ಬೋಟು ಹಾಗೂ ದೋಣಿಗಳಿದ್ದು, ಅಗ್ನಿಶಾಮಕ ಸಿಬ್ಬಂದಿಗಳ ಸಮಯೋಚಿತ ಕಾರ್ಯಾಚರಣೆಯಿಂದ ಭಾರೀ ನಷ್ಟವಾಗುವುದು ತಪ್ಪಿದೆ.

ದುರಂತ ಸ್ಥಳಕ್ಕೆ ಕುಂದಾಪುರ ಡಿವೈಎಸ್ಪಿ ಕೆ.ಯು ಬೆಳ್ಳಿಯಪ್ಪ, ಸಿಪಿಐ ಸವಿತ್ರತೇಜ್, ಪಿಎಸ್ಐ ಹರೀಶ್ ಆರ್ ನಾಯ್ಕ್, ಅಪರಾಧ ವಿಭಾಗದ ಪಿಎಸ್ಐ ಬಸವರಾಜ್ ಕನಶೆಟ್ಟಿ, ಮೀನುಗಾರಿಕಾ ಇಲಾಖೆಯ ಅಧಿಕಾರಿ ಅಂಜನಾದೇವಿ ಮುಂತಾದವರು ಭೇಟಿ ನೀಡಿದ್ದಾರೆ.


Spread the love