ದೀಪಾವಳಿ ತುಳುವ ನೆಲದ ಸಂಸ್ಕೃತಿಯ ಪ್ರತಿಬಿಂಬ : ಕಿಶೋರ್ ಕುಮಾರ್ ಶೇಣಿ

Spread the love

ದೀಪಾವಳಿ ತುಳುವ ನೆಲದ ಸಂಸ್ಕೃತಿಯ ಪ್ರತಿಬಿಂಬ : ಕಿಶೋರ್ ಕುಮಾರ್ ಶೇಣಿ

ಮಂಗಳೂರು : ತುಳುನಾಡಿನಲ್ಲಿ ನಡೆಯುವ ದೀಪಾವಳಿಯು ಕೃಷಿ ಬದುಕಿಗೆ ಹೊಂದಿಕೊಂಡ ತುಳುವ ನೆಲದ ಸಂಸ್ಕೃತಿಯನ್ನು ಬಿಂಬಿಸುತ್ತದೆ ಎಂದು ಪೆರ್ಲ ಹೊಂಬೆಳಕು ಶಿಕ್ಷಣ ತರಬೇತಿ ಕೇಂದ್ರದ ಪ್ರಾಂಶುಪಾಲ ಡಾ.ಕಿಶೋರ್ ಕುಮಾರ್ ರೈ ಶೇಣಿ ಹೇಳಿದರು.

ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ವತಿಯಿಂದ ಮಂಗಳೂರು ಬಲ್ಮಠದ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ ಆಯೋಜಿಸಲಾದ ‘ದೀಪಾವಳಿ ಪರ್ಬದ ಐಸಿರ’ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು .

ದೀಪಾವಳಿ ಹಬ್ಬದ ಆಚರಣೆ ಪ್ರಯುಕ್ತ ಹಂಡೆಗೆ ಅಲಂಕಾರ ಮಾಡಿ ನೀರು ತುಂಬಿಸುವುದು, ಎಣ್ಣೆ ಹಚ್ಚಿ ಸ್ನಾನ ಮಾಡುವುದು, ಗೋಪೂಜೆ ನಡೆಸುವುದು, ಬಲಿಯೇಂದ್ರನನ್ನು ಕರೆಯುವ ಆಚರಣೆಗಳು ತುಳು ನೆಲದ ಸಂಸ್ಕೃತಿಯನ್ನು ಸಾದರಪಡಿಸುತ್ತದೆ ಎಂದು ಕಿಶೋರ್ ಕುಮಾರ್ ಶೇಣಿ ಅಭಿಪ್ರಾಯಪಟ್ಟರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾದ ತಾರಾನಾಥ ಗಟ್ಟಿ ಕಾಪಿಕಾಡ್ ಅವರು ಮಾತನಾಡಿ, ಪ್ರಾಕೃತಿಕವಾಗಿ ಕೈಗೂಡದ ಹಾಗೂ ಈಡೇರದ ಕರೆಗಳ ಮೂಲಕ ಬಲಿಯೇಂದ್ರನನ್ನು ಆಹ್ವಾನಿಸುವ ಕಥನಗಳು ಸೃಷ್ಟಿಯಾಗಿರುವ ಹಿನ್ನಲೆಯ ಬಗ್ಗೆ ಜಿಜ್ಞಾಸೆ ನಡೆಯಬೇಕಾಗಿದೆ. ತುಳುವಾಲ ಬಲಿಯೇಂದ್ರನ ಐತಿಹ್ಯ ಏನು ಎನ್ನುವುದನ್ನು ತಿಳಿದುಕೊಳ್ಳಬೇಕಾಗಿದೆ ಹಾಗೂ ಮನುಷ್ಯ ಪ್ರಯತ್ನದ ಮೂಲಕ ಕೈಗೂಡುವಂತಹ ಕೆಲಸಗಳನ್ನು ಪೂರೈಸಿ, ಬಲಿಯೇಂದ್ರನನ್ನು ಕರೆಯೋಣ ಎಂದು ಆಶಯ ವ್ಯಕ್ತಪಡಿಸಿದರು.

ಕಾಲೇಜಿನ ಪ್ರಾಂಶುಪಾಲರಾದ ಡಾ.ಜಗದೀಶ್ ಬಾಳ ಅವರು ಮಾತನಾಡಿ, ತುಳುನಾಡಿನ ಆಚರಣೆಗಳಲ್ಲಿನ ವೈವಿಧ್ಯತೆ, ವಿಶಿಷ್ಟತೆ ಹಾಗೂ ಸಾಮರಸ್ಯವನ್ನು ತಿಳಿದುಕೊಳ್ಳಬೇಕು ಎಂದು ಹೇಳಿದರು.

ಅಕಾಡೆಮಿ ಸದಸ್ಯರಾದ ಬೂಬ ಪೂಜಾರಿ, ಉದ್ಯಾವರ ನಾಗೇಶ್ ಕುಮಾರ್, ಕಾಲೇಜಿನ ವಿದ್ಯಾರ್ಥಿ ಕ್ಷೇಮ ಪಾಲನಾಧಿಕಾರಿ ಡಾ. ಜಯಶ್ರೀ ಉಪಸ್ಥಿತರಿದ್ದರು.

ಈ ಸಂದರ್ಭ ನಡೆದ ಕವಿಗೋಷ್ಠಿಯಲ್ಲಿ ಅನಿತಾ ಪಿಂಟೊ, ಸೌಮ್ಯ ಪ್ರವೀಣ್, ಸುಲೋಚನಾ ನವೀನ್, ಶಮೀಮ್ ಕುಟ್ಟಿಕಳ ಅವರು ಕೊಂಕಣಿ, ಕನ್ನಡ, ತುಳು, ಬ್ಯಾರಿ ಭಾಷೆಯಲ್ಲಿ ಕವಿತೆಗಳನ್ನು ವಾಚಿಸಿದರು.

ವಿದ್ಯಾರ್ಥಿಗಳಿಂದ ದೀಪಾವಳಿ ನೃತ್ಯ ಸಂಭ್ರಮ ಹಾಗೂ ಪದರಂಗಿತ ಕಾರ್ಯಕ್ರಮ ನಡೆಯಿತು.

ಶ್ರೇಯಾ ಸ್ವಾಗತಿಸಿದರು. ಕೃಪಾ ನಿರೂಪಿಸಿದರು. ಪೂಜಾ ವಂದಿಸಿದರು.


Spread the love
Subscribe
Notify of

0 Comments
Inline Feedbacks
View all comments