ದೇವರನ್ನೆ ಯಾಮಾರಿಸಿದ ಸುನೀಲ್ ಕುಮಾರ್ ಗೆ ಸಿಎಂ ರಾಜೀನಾಮೆ ಕೇಳುವ ನೈತಿಕತೆ ಇಲ್ಲ – ರಮೇಶ್ ಕಾಂಚನ್

Spread the love

ದೇವರನ್ನೆ ಯಾಮಾರಿಸಿದ ಸುನೀಲ್ ಕುಮಾರ್ ಗೆ ಸಿಎಂ ರಾಜೀನಾಮೆ ಕೇಳುವ ನೈತಿಕತೆ ಇಲ್ಲ – ರಮೇಶ್ ಕಾಂಚನ್

ಉಡುಪಿ: ನಕಲಿ ಪರಶುರಾಮರ ಮೂರ್ತಿಯನ್ನು ಮಾಡಿ ದೇವರನ್ನೇ ಯಾಮಾರಿಸಿದ ಕಾರ್ಕಳ ಶಾಸಕ ಸುನೀಲ್ ಕುಮಾರ್ ಅವರಿಗೆ ಸಿಎಂ ಸಿದ್ದರಾಮಯ್ಯನವರ ರಾಜೀನಾಮೆ ಕೇಳುವ ನೈತಿಕತೆ ಇಲ್ಲ ಎಂದು ಉಡುಪಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಮೇಶ್ ಕಾಂಚನ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸುನೀಲ್ ಕುಮಾರ್ ಅವರು ತಮ್ಮ ಮಂತ್ರಿ ಪದವಿಯ ಅಧಿಕಾರವನ್ನು ದುರುಪಯೋಗಪಡಿಸಿಕೊಂಡು ಕಾರ್ಕಳದ ಉಮಿಕಲ್ ಬೆಟ್ಟದಲ್ಲಿ ಪರಶುರಾಮನ ಕಂಚಿನ ಮೂರ್ತಿಯನ್ನು ಸ್ಥಾಪಿಸುವುದಾಗಿ ಹೇಳಿಕೊಂಡು ಬಳಿಕ ಫೈಬರ್ ಮೂರ್ತಿಯನ್ನಿಟ್ಟು ಇಡೀ ಜಿಲ್ಲೆಯ ಜನತೆಯನ್ನು ಮಾತ್ರವಲ್ಲದೆ ದೇವರನ್ನೇ ಮಂಗ ಮಾಡಿಕೊಂಡು ಬಂದಿದ್ದಾರೆ. ಮೂಡ ಪ್ರಕರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಹೆಸರು ಕೂಡ ಪ್ರಸ್ತಾಪವಾಗದೇ ಇದ್ದರೂ ಕೂಡ ದ್ವೇಷದ ರಾಜಕಾರಣ ಮಾಡಿಕೊಂಡು ಬಂದಿರುವ ಬಿಜೆಪಿ ತಮ್ಮ ಕೇಂದ್ರದ ಪ್ರಭಾವ ಬಳಸಿಕೊಂಡು ರಾಜ್ಯಪಾಲರ ಮೂಲಕ ಸಿಎಂ ಅವರ ವಿರುದ್ದ ಪ್ರಾಸಿಕ್ಯೂಶನ್ ಗೆ ಅನುಮತಿ ನೀಡಿರುವುದು ಖಂಡನೀಯ

ಕಳೆದ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ 136 ಸ್ಥಾನ ನೀಡುವ ಮೂಲಕ ರಾಜ್ಯದ ಜನತೆ ಸ್ಪಷ್ಟ ಬಹುಮತ ನೀಡಿದ್ದಾರೆ. ಕಾಂಗ್ರೆಸ್ನ ಶಾಸಕರನ್ನು ಖರೀದಿಸಿ ಸರ್ಕಾರ ಉರುಳಿಸಲು ಸಾಧ್ಯವಿಲ್ಲ ಎಂಬುದನ್ನು ಮನಗಂಡಿರುವ ಬಿಜೆಪಿ ಮುಖಂಡರು ರಾಜ್ಯಪಾಲರ ಮೂಲಕ ರಾಜ್ಯ ಸರ್ಕಾರವನ್ನು ಬೀಳಿಸಲು ಮುಂದಾಗಿದ್ದಾರೆ. ಐದು ಗ್ಯಾರಂಟಿ ಯೋಜನೆಗಳನ್ನು ಸಿದ್ದರಾಮಯ್ಯ ಅವರು ಯಶಸ್ವಿಯಾಗಿ ಜಾರಿಗೊಳಿಸಿರುವುದನ್ನು ಸಹಿಸಿಕೊಳ್ಳಲು ಬಿಜೆಪಿಯವರಿಗೆ ಸಾಧ್ಯವಾಗುತ್ತಿಲ್ಲ. ಅವರ ಜನಪ್ರಿಯತೆಗೆ ಕುಂದು ತರುವ ದುರುದ್ದೇಶದಿಂದಲೆ ಬಿಜೆಪಿಯವರು ರಾಜಭವನದ ಮೂಲಕ ಷಡ್ಯಂತ್ರ ನಡೆಸಿದ್ದಾರೆ

ಕಳಂಕ ರಹಿತರಾದ ಮುಖ್ಯಮಂತ್ರಿ ಸಿದ್ದರಾಮಯ್ಯ ಹೆಸರಿಗೆ ಮಸಿ ಬಳಿಯುವ ಉದ್ದೇಶದಿಂದ ರಾಜ್ಯಪಾಲರನ್ನು ತನ್ನ ಕೈಗೊಂಬೆ ಮಾಡಿಕೊಂಡಿದೆ. ತಮ್ಮದಲ್ಲದ ಪ್ರಕರಣದಲ್ಲಿ ಸಿದ್ದರಾಮಯ್ಯರನ್ನು ಸಿಲುಕಿಸಲು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಿದ್ದಾರೆ. ಇದು ಸಂವಿಧಾನ ವಿರೋಧಿ ನಡೆಯಾಗಿದೆ. ಆದ್ದರಿಂದ ಈ ಕೂಡಲೇ ರಾಜ್ಯ ಪಾಲರನ್ನು ಹುದ್ದೆಯಿಂದ ವಜಾಗೊಳಿಸಬೇಕು.

ಅಹಿಂದ ನಾಯಕ ಸಿದ್ದರಾಮಯ್ಯ 2ನೇ ಬಾರಿಗೆ ಮುಖ್ಯಮಂತ್ರಿಯಾಗಿರುವುದನ್ನು ಸಹಿಸದ ಕೇಂದ್ರ ಹಾಗು ರಾಜ್ಯ ಬಿಜೆಪಿ ನಾಯಕರು ಪ್ರತಿನಿತ್ಯ ಸಿಎಂ ವಿರುದ್ಧ ಪಿತೂರಿ ನಡೆಸುತ್ತಿದ್ದಾರೆ. ಸಿದ್ದರಾಮಯ್ಯ ಪರ ಇಡೀ ಸಚಿವ ಸಂಪುಟ, ಶಾಸಕರು ಸೇರಿದಂತೆ ರಾಜ್ಯದ 6 ಕೋಟಿ ಜನತೆ ನಿಂತಿದೆ. ಇದನ್ನು ಬಿಜೆಪಿಯವರು ಮನಗಾಣಬೇಕು. ಈ ಹಿಂದೆ ಬಿಜೆಪಿ-ಜೆಡಿಎಸ್ ಪಕ್ಷದ ಹಲವು ಮಂದಿ ಹಗರಣಗಳನ್ನು ಮಾಡಿ ಮುಖ್ಯವಾಹಿನಿಗೆ ಬಂದಿದ್ದರು ಸಹ ರಾಜ್ಯಪಾಲರು ಸುಮ್ಮನಿದ್ದು, ಇದೀಗ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಿರುವ ಕ್ರಮ ಸರಿಯಲ್ಲ

ಜನಪರ ಸರ್ಕಾರ ನಡೆಸುತ್ತಿರುವ ಸಿದ್ದರಾಮಯ್ಯನವರು ಸಾಮಾಜಿಕ ನ್ಯಾಯ ಎತ್ತಿ ಹಿಡಿಯುವ ಕೆಲಸ ಮಾಡುತ್ತಿದ್ದು, ಅವರು ಮುಖ್ಯಮಂತ್ರಿಯಾಗಿ ಅಧಿಕಾರ ದುರುಪಯೋಗ ಪಡಿಸಿಕೊಂಡಿಲ್ಲ. ಯಾವುದೇ ಅಪರಾಧ ಮಾಡದಿದ್ದರೂ ಖಾಸಗಿ ದೂರು ಆಧರಿಸಿ ಮೈಸೂರಿನ ಮುಡಾ ನಿವೇಶನ ಹಂಚಿಕೆ ಪ್ರಕರಣದಲ್ಲಿ ಅವರ ವಿರುದ್ಧ ಪ್ರಾಸಿಕ್ಯೂಷನ್ಗೆ ರಾಜ್ಯಪಾಲರು ಅನುಮತಿ ನೀಡಿದ್ದಾರೆ. ಇದು ಪ್ರಜಾಪ್ರಭುತ್ವದ ಕಗ್ಗೊಲೆಯಾಗಿದೆ. ಹೀಗೆ ಮಾಡುವುದರ ಮೂಲಕ ಅವರು ತಾನು ಪಕ್ಷಪಾತಿ ಎನ್ನುವುದನ್ನು ತೋರಿಸಿಕೊಟ್ಟಿದ್ದಾರೆ. ಪ್ರಜಾಪ್ರಭುತ್ವ ಹಾಗೂ ಸಂವಿಧಾನದ ಆಶಯಕ್ಕೆ ವಿರುದ್ಧವಾಗಿ ರಾಜ್ಯಪಾಲರು ನಡೆದುಕೊಂಡಿದ್ದು, ಅವರನ್ನು ತಕ್ಷಣವೇ ವಾಪಸ್ ಕರೆಸಿಕೊಳ್ಳಬೇಕೆಂದು ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Spread the love
Subscribe
Notify of

0 Comments
Inline Feedbacks
View all comments