ದೇಶದ ಅಭಿವೃದ್ಧಿಗೆ ಕಾಂಗ್ರೆಸ್ ಹಲವಾರು ಕೊಡುಗೆ ನೀಡಿದೆ: ಬಂಟ್ವಾಳದಲ್ಲಿ ರಮಾನಥ ರೈ

ದೇಶದ ಅಭಿವೃದ್ಧಿಗೆ ಕಾಂಗ್ರೆಸ್ ಹಲವಾರು ಕೊಡುಗೆ ನೀಡಿದೆ: ಬಂಟ್ವಾಳದಲ್ಲಿ ರಮಾನಥ ರೈ

ಬಂಟ್ವಾಳ: ದೇಶದಲ್ಲಿ ಮಹತ್ಮಾಗಾಂಧಿ ಉದ್ಯೋಗ ಖಾತರಿ ಯೋಜನೆ ಸಹಿತ ಸರಣಿ ಅಭಿವೃದ್ಧಿ ಯೋಜನೆಗಳನ್ನು ಘೋಷಿಸುವುದರ ಜೊತೆಗೆ ಸಮಗ್ರವಾಗಿ ಅನುಷ್ಠಾನಗೊಳಿಸಿದ ಹಿನ್ನೆಲೆ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರಕ್ಕೆ ಮಾತ್ರ ಇದೆ. ಆದರೆ, ಕಳೆದ ಅವಧಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರ ಕೇವಲ ಭರವಸೆ ಮತ್ತು ಭಾವನಾತ್ಮಕ ಬಣ್ಣದ ಮಾತುಗಳಿಂದ ಜನರನ್ನು ವಂಚಿಸುತ್ತಲೇ ಬಂದಿದೆ ಎಂದು ಮಾಜಿ ಸಚಿವ ಬಿ.ರಮಾನಥ ರೈ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಿದರು.

ದೇಶದಲ್ಲಿ ಜನರಿಗೆ ಆಹಾರ ಭದ್ರತೆ, ಮಾಹಿತಿ ಹಕ್ಕು, ಶಿಕ್ಷಣದ ಹಕ್ಕು (ಆರ್‌ಟಿಇ), ರಾಷ್ಟ್ರೀಯ ಆರೋಗ್ಯ ಅಭಿಯಾನ, ಸಾಕ್ಷರತಾ ಆಂದೋಲನ, ಸರ್ವಶಿಕ್ಷಾ ಅಭಿಯಾನ ಮತ್ತಿತರ ಯೋಜನೆಗಳನ್ನು ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ ಯಶಸ್ವಿಯಾಗಿ ಅನುಷ್ಠಾನಗೊಳಿಸಿದೆ ಎಂದು ಅವರು ತಿಳಿಸಿದರು.

ಭ್ರಷ್ಟಾಚಾರದ ವಿರುದ್ಧ ಮಾತನಾಡುವ ಪ್ರಧಾನಿ ನರೇಂದ್ರ ಮೋದಿ ಅವರ ತವರು ರಾಜ್ಯ ಗುಜರಾತ್‌ನಲ್ಲಿ ಸುಪ್ರೀಂ ಕೋರ್ಟ್‌ ಆದೇಶದ ಬಳಿಕವೂ ಲೋಕಾಯುಕ್ತ ಅನುಷ್ಠಾನಕ್ಕೆ ಬಂದಿಲ್ಲ. ಹಾಲಿ ಸಂಸದ ನಳಿನ್ ಕುಮಾರ್ ಕಟೀಲು ಕಳಪೆ ರಾಜಕಾರಣಿ. ಇವರಿಂದ ಜಿಲ್ಲೆಯಲ್ಲಿ ಯಾವುದೇ ಅಭಿವೃದ್ಧಿ ಕಾಮಗಾರಿ ನಡೆದಿಲ್ಲ ಎಂದು ಆರೋಪಿಸಿದರು.

ಈ ಹಿಂದೆ ಯುಪಿಎ ಸರ್ಕಾರವು ಜನತೆಗೆ ನೀಡಿದ್ದ ಎಲ್ಲಾ ಭರವಸೆ ಈಡೇರಿಸಿದ್ದು, ಈಗ ಪ್ರತೀ ವ್ಯಕ್ತಿಗೆ ₹ 72 ಸಾವಿರ, ಅಂದರೆ ಪ್ರತೀ ತಿಂಗಳಿಗೆ ₹ 6 ಸಾವಿರದಂತೆ ಕನಿಷ್ಟ ಆದಾಯ ನೀಡುವುದಾಗಿ ಪ್ರಣಾಳಿಕೆಯಲ್ಲಿ ಘೋಷಿಸಿದೆ. ಕಾಂಗ್ರೆಸ್ ಮುಖಂಡರ ಮನೆಗೆ ಐಟಿ ದಾಳಿ ನಡೆಸುವ ಮೂಲಕ ಕೀಳು ಮಟ್ಟದ ರಾಜಕೀಯ ನಡೆಸುತ್ತಿರುವ ಪ್ರಧಾನಿ ನರೇಂದ್ರ ಮೋದಿ ಅವರು ಕೇವಲ ಭಾಷಣಕ್ಕೆ ಮಾತ್ರ ಸೀಮಿತ ಎಂದರು.

ಈ ಬಾರಿ ಜಿಲ್ಲೆಯಲ್ಲಿ ಕಾಂಗ್ರೆಸ್ – ಜೆಡಿಎಸ್‌ ಮೈತ್ರಿಕೂಟದ ಅಭ್ಯರ್ಥಿ ಮಿಥುನ್ ರೈಗೆ ಸ್ಪರ್ಧಿಸಲು ಅವಕಾಶ ನೀಡುವ ಮೂಲಕ ಜನತೆ ಬಯಸಿದ ಬದಲಾವಣೆಗೆ ಸೂಕ್ತ ಅವಕಾಶ ಒದಗಿಸಿದೆ ಎಂದರು.