ನೋವಿಗೆ ಸ್ಪಂದಿಸುವೆ– ಒಮ್ಮೆ ಅವಕಾಶ ಕೊಡಿ – ಪಕ್ಷೇತರ ಅಭ್ಯರ್ಥಿ ಅಮೃತ್ ಶೆಣೈ

Spread the love

ನೋವಿಗೆ ಸ್ಪಂದಿಸುವೆ– ಒಮ್ಮೆ ಅವಕಾಶ ಕೊಡಿ – ಪಕ್ಷೇತರ ಅಭ್ಯರ್ಥಿ ಅಮೃತ್ ಶೆಣೈ

ಶೃಂಗೇರಿ: ‘ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತನಾಗಿ ಜನಸಾಮಾನ್ಯರ ಸಮಸ್ಯೆಗಳಿಗೆ ಪ್ರಾಮಾಣಿಕವಾಗಿ ಸ್ಪಂದಿಸಿದ್ದೇನೆ. ಕಾಂಗ್ರೆಸ್ ನನ್ನ ಸೇವೆಯನ್ನು ಗುರುತಿಸಿ ಪ್ರಸ್ತುತ ಚುನಾವಣೆಯಲ್ಲಿ ಅವಕಾಶ ನೀಡಬೇಕಿತ್ತು. ಅವಕಾಶ ಸಿಗದ ಕಾರಣ ಪಕ್ಷೇತರ ಅಭ್ಯರ್ಥಿಯಾಗಿ ಚುನಾವಣೆಯಲ್ಲಿ ಸ್ಪರ್ಧಿಸಿದ್ದೇನೆ’ ಎಂದು ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಅಮೃತ್ ಶೆಣೈ ತಿಳಿಸಿದರು. ಶೃಂಗೇರಿಯ ಬಸ್ ನಿಲ್ದಾಣದಲ್ಲಿ ಮತ ಪ್ರಚಾರದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

‘ಸಂಸದೆ ಶೋಭಾ ಕರಂದ್ಲಾಜೆ ಅವರ ನಿಷ್ಕ್ರಿಯತೆ, ಎನ್.ಡಿ.ಎ ಸರ್ಕಾರದ ವೈಫಲ್ಯದ ಬಗ್ಗೆ ಜನರಿಗೆ ತಲುಪಿಸಿ, ಧರ್ಮಕ್ಕಾಗಿ ಕಚ್ಚಾಡುವ ಪಕ್ಷದ ನೀತಿಯನ್ನು ನಾನು ವಿರೋಧಿಸುತ್ತಲೇ ಬಂದಿದ್ದೇನೆ. ಲೋಕಸಭೆಯ ಎಂಟು ವಿಧಾನಸಭಾ ಕ್ಷೇತ್ರಗಳಲ್ಲಿ ಜೆಡಿಎಸ್ ಪಕ್ಷದ ಅಸ್ತಿತ್ವವಿಲ್ಲ. ಚುನಾವಣೆಯಲ್ಲಿ ಲಾಜಿಕ್ ಪ್ರಮುಖ ಘಟ್ಟ. ಆದರೆ, ಕಾಂಗ್ರೆಸ್ ಅಸ್ತಿತ್ವವಿದ್ದ ಜಿಲ್ಲೆಯನ್ನು ಜೆಡಿಎಸ್ ಪಕ್ಕಕ್ಕೆ ನೀಡಲಾಗಿದೆ. ಕಾಂಗ್ರೆಸ್ ಪಕ್ಷದ ಸದಸ್ಯತ್ವವಿರುವ ಮಾಜಿ ಶಾಸಕ ಪ್ರಮೋದ್ ಮಧ್ವರಾಜ್ ಅವರಿಗೆ ಜೆಡಿಎಸ್ ಪಕ್ಷ ಟಿಕೆಟ್ ನೀಡಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅಭ್ಯರ್ಥಿ ಒಂದು ಪಕ್ಷದ ಸದಸ್ಯತ್ವ ಹೊಂದಿರಬೇಕು ಎಂಬುದು ಎಲ್ಲರಿಗೂ ತಿಳಿದ ಮಾಹಿತಿ. ಸಮ್ಮಿಶ್ರ ಸರ್ಕಾರದ ಅಭ್ಯರ್ಥಿ ಜನಸಾಮಾನ್ಯರ ಸಮಸ್ಯೆಗಳಿಗೆ ಉಡುಪಿ ಜಿಲ್ಲೆಯಲ್ಲಿ ಎಷ್ಟು ಸ್ಪಂದಿಸಿದ್ದಾರೆ ಎಂಬುದು ಅಲ್ಲಿನ ಪ್ರತಿಯೊಬ್ಬ ಪ್ರಜೆಗೆ ತಿಳಿದಿರುವ ವಿಚಾರ’ ಎಂದರು.

ಸಂಸದರು ಹಾಗೂ ಶಾಸಕರು ಉಡುಪಿ ಜಿಲ್ಲೆಯ ಆರ್ಥಿಕ ಪ್ರಗತಿಗೆ ಸ್ಪಂದಿಸಲಿಲ್ಲ. ಪರಸ್ಪರ ಕಚ್ಚಾಡುತ್ತಾ ಕಾಲಹರಣ ಮಾಡುವ ರಾಜಕಾರಣಿಗಳಿಂದ ಜನರ ನಿರೀಕ್ಷೆಗಳು ಹುಸಿಯಾಗಿವೆ. ಮರಳಿನ ಸಮಸ್ಯೆ, ಕಾಣೆಯಾದ ಮೀನುಗಾರರ ಬಗ್ಗೆ ಎರಡು ಸರ್ಕಾರಗಳೂ ತಲೆಕೆಡಿಸಿಕೊಂಡಿಲ್ಲ. ನೋಟ್ ಬ್ಯಾನ್ನಿಂದ ಜನರ ಆರ್ಥಿಕ ಸ್ಥಿತಿ ಅಸ್ತವ್ಯಸ್ತವಾಗಿದೆ. ಜನರು ಬದಲಾವಣೆ ತರಬೇಕು. ಇಲ್ಲಿರುವ ಜಲ್ವಂತ ಸಮಸ್ಯೆಗಳ ಬಗ್ಗೆ ಕಾಳಜಿ ವಹಿಸಿ ನಾನು ಕಾರ್ಯನಿರ್ವಹಿಸುತ್ತೇನೆ. ದೇಶದಲ್ಲಿ ಶ್ರೀಮಂತರು ಶ್ರೀಮಂತರಾಗೇ ಉಳಿದಿದ್ದಾರೆ. ಬಡವರು ಬಡವರಾಗಿಯೇ ಇದ್ದಾರೆ. ಅಭಿವೃದ್ಧಿ ನನ್ನ ಮಂತ್ರ. ಗೆದ್ದ ಬಳಿಕ ನಾನು ಸಾಮಾನ್ಯರ ನೋವಿಗೆ ನಿರಂತರ ಸ್ಪಂದಿಸುತ್ತೇನೆ’ ಎಂದರು.


Spread the love