ದ.ಕ.ಜಿಲ್ಲಾ ಎನ್.ಎಸ್.ಯು.ಐ ವತಿಯಿಂದ ಪ್ರತಿಭಟನೆ
ಮಂಗಳೂರು: ನೂತನ ರಾಷ್ಟ್ರೀಯ ನೀತಿಗೆ ಸಂಬಂಧಿಸಿ ಮಂಗಳೂರು ವಿಶ್ವವಿದ್ಯಾನಿಲಯ ಕಾಲೇಜಿನಲ್ಲಿ ಆಯೋಜಿಸಲಾದ ಸಮಾಲೋಚನಾ ಕಾರ್ಯಕ್ರಮಕ್ಕೆ ಎಬಿವಿಪಿ ಸಂಘಟನೆಯೊಂದಕ್ಕೆ ಮಾತ್ರವೇ ಆಹ್ವಾನ ನೀಡಿ ಇತರ ವಿದ್ಯಾರ್ಥಿ ಸಂಘಟನೆಗಳನ್ನು ಕಡೆಗಣಿಸಲಾಗಿದೆ ಎಂದು ಆರೋಪಿಸಿ ದ.ಕ.ಜಿಲ್ಲಾ ಎನ್.ಎಸ್.ಯು.ಐ ಸೋಮವಾರ ಪ್ರತಿಭಟನೆ ನಡೆಸಿತು.
ನಗರದ ಹಂಪನಕಟ್ಟೆಯ ಮಂಗಳೂರು ವಿಶ್ವವಿದ್ಯಾನಿಲಯ ಕಾಲೇಜು ಎದುರು ಎನ್.ಎಸ್.ಯು.ಐ ಪಾದಾಧಿಕಾರಿಗಳು ಹಾಗೂ ಸದಸ್ಯರು ಸೇರಿ ಮಂಗಳೂರು ವಿಶ್ವವಿದ್ಯಾನಿಲಯ ಕುಲಪತಿ ವಿರುದ್ಧ ಘೋಷಣೆಗೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಈ ವೇಳೆ ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಎನ್.ಎಸ್.ಯು.ಐ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸವಾದ್ ಸುಳ್ಯ, ಮಂಗಳೂರು ವಿವಿಯ ಕುಲಪತಿ ಎಬಿವಿಪಿ ಕೈಗೊಂಬೆಯಾಗಿ ವರ್ತಿಸುತ್ತಿದ್ದಾರೆ. ಸಂಸತ್ತಿನಲ್ಲಿ ಚರ್ಚಿಸಿದೆ, ರಾಜ್ಯ ಸರ್ಕಾರದ ಜೊತೆ ಸಮಾಲೋಚನೆ ನಡೆಸದೇ ದೇಶದಲ್ಲಿ ಹಲವಾರು ವಿದ್ಯಾರ್ಥಿ ಸಂಘಟನೆಗಳಿದ್ದರೂ ಅವುಗಳ ಜೊತೆ ಚರ್ಚಿಸದೆ ಕೇಂದ್ರ ಸರ್ಕಾರವು ಏಕಾಏಕಿಯಾಗಿ ಹೊಸ ಶಿಕ್ಷಣ ನೀತಿಗೆ ಮುಂದಾಗಿದೆ ಎಂದು ಆರೋಪಿಸಿದರು.
ಇದು ಶಿಕ್ಷಣ, ಇದರ ಬಗ್ಗೆ ಚರ್ಚಿಸದೇ ಏಕಾಏಕಿಯಾಗಿ ಶಿಕ್ಷಣವನ್ನು ಕೇಸರಿಕರಣಗೊಳಿಸುವ ಹುನ್ನಾರಕ್ಕೆ ಕೇಂದ್ರ ಮುಂದಾಗಿದೆ. ಇದು ಶಿಕ್ಷಣದ ಕೇಸರಿಕರಣದ ಹುನ್ನಾರ ಎಂದು ದೂರಿದರು.
ಎನ್.ಎಸ್.ಯು.ಐ ರಾಜ್ಯ ಕಾರ್ಯದರ್ಶಿ ಫಾರೂಕ್ ಬಾಯಬೆ ಮಾತನಾಡಿ, ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿಯವರು ಇಂತಹ ಕಾರ್ಯಕ್ರಮಕ್ಕೆ ಅನುಮತಿ ನೀಡುವ ಮೂಲಕ ಎಬಿವಿಪಿಯ ಕೈಗೊಂಬೆತರ ಮಾಡುತ್ತಿರುವ ವರ್ತನೆ ಖಂಡನೀಯ ಎಂದರು.
ಜಿಲ್ಲಾ ಉಪಾಧ್ಯಕ್ಷ ಶೌವಾದ್ ಗೂನಡ್ಕ ರವರು ಮಾತನಾಡಿ, ರಾಜ್ಯ ಸರ್ಕಾರದೊಂದಿಗೆ ಹಾಗೂ ಸಂಸತ್ತಿನಲ್ಲಿ ಚರ್ಚೆ ಮಾಡದೇ ನೂತನ ಶಿಕ್ಷಣ ನೀತಿಯನ್ನು ಜಾರಿ ಮಾಡಲಾಗಿದೆ. ಇದೀಗ ಮಂಗಳೂರು ವಿಶ್ವ ವಿದ್ಯಾನಿಲಯದ ಕುಲಪತಿಗಳು ಒಂದು ಪಕ್ಷದ ಪರವಾಗಿ ಕಾರ್ಯನಿರ್ವಹಿಸುವ ಮೂಲಕ ಎಬಿವಿಪಿಯವರೊಂದಿಗೆ ಸೇರಿ ನೂತನ ಶಿಕ್ಷಣ ನೀತಿಯ ಕುರಿತ ಕಾರ್ಯಕ್ರಮವನ್ನು ಆಯೋಜಿಸಿರುವುದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಮಂಗಳೂರು ದಕ್ಷಿಣ ವಿಧಾನ ಸಭಾ ಕ್ಷೇತ್ರದ ಎನ್.ಎಸ್.ಯು.ಐ ಅಧ್ಯಕ್ಷ ಶೌನಕ್ ರೈ, ದ.ಕ.ಜಿಲ್ಲಾ ಯುವ ಕಾಂಗ್ರೆಸ್ ಕಾರ್ಯದರ್ಶಿ ಸೌಹಾಸ್, ಶೇಖ್ ಅಫ್ಸಾನ್, ಎನ್.ಎಸ್.ಯು.ಐ ಆರ್.ಟಿ.ಐ ಸೆಲ್ ಕೋರ್ಡಿನೇಟರ್ ಅನ್ವಿತ್ ಕಟೀಲ್, ಎನ್.ಎಸ್.ಯು.ಐ ಜಿಲ್ಲಾ ಕಾರ್ಯದರ್ಶಿ ಬಾತೀಶ್ ಅಳಕೆಮಜಲು, ಎನ್.ಎಸ್.ಯು.ಐ ಪುತ್ತೂರು ವಿಧಾನ ಸಭಾ ಕ್ಷೇತ್ರದ ಉಪಾಧ್ಯಕ್ಷ ಝೈನ್ ಆತೂರು, ಎನ್.ಎಸ್.ಯು.ಐ ಸುಳ್ಯ ಉಪಾಧ್ಯಕ್ಷ ಆಶಿಕ್ ಆರಂತೋಡು, ಎನ್.ಎಸ್.ಯು.ಐ ಬಂಟ್ವಾಳ ಅಧ್ಯಕ್ಷ ವಿನಯ್ ಬಂಟ್ವಾಳ್, ಪ್ರಧಾನ ಕಾರ್ಯದರ್ಶಿ ಅಂಕುಶ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.