ನಗದು ಕಳವು ಪ್ರಕರಣ ಭೇದಿಸಿದ ಪೊಲೀಸರು: ಆರೋಪಿತನ ಬಂಧನ  

Spread the love

ನಗದು ಕಳವು ಪ್ರಕರಣ ಭೇದಿಸಿದ ಪೊಲೀಸರು: ಆರೋಪಿತನ ಬಂಧನ
 

ಮಂಗಳೂರು: ನಗದು ಕಳವು ಪ್ರಕರಣವನ್ನು ಭೇದಿಸಿ ಕ್ಷಿಪ್ರ ಕಾರ್ಯಾಚರಣೆ ನಡೆಸಿದ ಮಂಗಳೂರು ಉತ್ತರ ಪೊಲೀಸ್ ಠಾಣೆಯ ಪೊಲೀಸರು ಆರೋಪಿತನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆರೋಪಿತನಿಂದ ನಗದು ಹಣ, ದ್ವಿಚಕ್ರವಾಹನ ಹಾಗೂ ಮೊಬೈಲ್ ಫೋನ್ ವಶಪಡಿಸಿಕೊಳ್ಳಲಾಗಿದೆ.

ಮಹಮ್ಮದ್ ನಿಜಾಮುದ್ದಿನ್ ಎಂಬವರು ದಿನಾಂಕ 07-02-2026 ರಂದು ಶ್ರೀಧರ ಆಳ್ವರವರಿಗೆ ಸೇರಿದ ಅಡಿಕೆಯನ್ನು ಕೆಎ-19 AE-8663 ಸಂಖ್ಯೆಯ ಟಾಟಾ ಇಂಟ್ರಾ ವಾಹನದಲ್ಲಿ ತುಂಬಿಸಿಕೊಂಡು ಬೀಬಿ ಅಲಾಬಿಯಲ್ಲಿರುವ ಅಂಬಾರ್ ಸುಪಾರಿ ಅಂಗಡಿಗೆ ಮಾರಾಟ ಮಾಡಿ, ಅಲ್ಲಿ ಪಡೆದ ರೂ.1,28,740 ನಗದು ಹಣವನ್ನು ವಾಹನದ ಡ್ಯಾಶ್ ಬೋರ್ಡ್‌ನಲ್ಲಿ ಇಟ್ಟುಕೊಂಡಿದ್ದರು. ಬಳಿಕ ಬೆಳಿಗ್ಗೆ 10.30ರ ಸುಮಾರಿಗೆ ಬಂದರ್ ಜೆ.ಎಂ.ರೋಡ್‌ನಲ್ಲಿರುವ ಸದರ್ನ್ ಏಜೆನ್ಸಿಯಲ್ಲಿ ಎಸಿಪಿ ಶೀಟ್ ಖರೀದಿಸಿದ ನಂತರ ವಾಹನದಲ್ಲಿ ಕುಳಿತು ಡ್ಯಾಶ್ ಬೋರ್ಡ್ ತೆರೆದಾಗ ನಗದು ಹಣ ಕಳವು ಆಗಿರುವುದು ತಿಳಿದುಬಂದಿತ್ತು.

ಈ ಕುರಿತು ಮಂಗಳೂರು ಉತ್ತರ ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ 18/2026, ಕಲಂ 303(2) ಬಿಎನ್‌ಎಸ್ ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು.

ಪ್ರಕರಣದ ತನಿಖೆ ಕೈಗೊಂಡ ಮಂಗಳೂರು ಉತ್ತರ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕ ಸಚಿನ್ ಕುಮಾರ್ ಅವರ ನೇತೃತ್ವದಲ್ಲಿ, ಪೊಲೀಸ್ ಉಪನಿರೀಕ್ಷಕ ಶೀತಲ್ ಅಲಗೂರು, ಎಎಸ್‌ಐಗಳಾದ ಶಶಿಧರ, ದಾಮೋದರ್ ಹಾಗೂ ಸಿಬ್ಬಂದಿಯನ್ನು ಒಳಗೊಂಡ ತಂಡವು ದಿನಾಂಕ 08-02-2026 ರಂದು ನಗರದ ಮಣ್ಣಗುಡ್ಡ ಜಂಕ್ಷನ್ ಬಳಿ ಆರೋಪಿತ ಝಾಕೀರ್ ಹುಸೈನ್ @ ಜಾಕಿ (38), ಕಸಬ ಬೆಂಗ್ರೆ ನಿವಾಸಿ, ಪ್ರಸ್ತುತ ಜಪ್ಪು ಮಾರ್ಕೆಟ್ ಹತ್ತಿರ, ಗುಜ್ಜರೆ ಕೆರೆ, ಜಪ್ಪು, ಮಂಗಳೂರು ಎಂಬಾತನನ್ನು ವಶಕ್ಕೆ ಪಡೆದುಕೊಂಡಿದೆ.

ಆರೋಪಿತನಿಂದ ಕಳವು ಮಾಡಲಾದ ರೂ.70,000 ನಗದು ಹಣ, ಕೃತ್ಯಕ್ಕೆ ಬಳಸಿದ ದ್ವಿಚಕ್ರವಾಹನ, ಕಳವು ಹಣದಿಂದ ಖರೀದಿಸಿದ ವಿವೋ ಕಂಪನಿಯ ಮೊಬೈಲ್ ಫೋನ್ ವಶಪಡಿಸಿಕೊಳ್ಳಲಾಗಿದೆ.

ಬಂಧಿತ ಆರೋಪಿಯನ್ನು ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು ನ್ಯಾಯಾಂಗ ಬಂಧನ ವಿಧಿಸಿದೆ. ಆರೋಪಿತನ ವಿರುದ್ಧ ಉಡುಪಿ ಜಿಲ್ಲೆಯ ಕುಂದಾಪುರ ಪೊಲೀಸ್ ಠಾಣೆಯಲ್ಲಿ ರಾತ್ರಿ ಮನೆ ಕಳವು ಪ್ರಕರಣ ಹಾಗೂ ಮಂಗಳೂರು ದಕ್ಷಿಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಆಟೋರಿಕ್ಷಾದ ಶೀಟ್‌ನಲ್ಲಿ ಇಟ್ಟಿದ್ದ ನಗದು ಹಣ ಕಳವು ಮಾಡಿದ ಪ್ರಕರಣಗಳು ದಾಖಲಾಗಿರುವುದು ತಿಳಿದುಬಂದಿದೆ.


Spread the love
Subscribe
Notify of

0 Comments
Inline Feedbacks
View all comments