ನನ್ನ ಬರವಣಿಗೆಯ ಮೊದಲ ಗುರು ವಡ್ಡರ್ಸೆಯವರು; ಪತ್ರಿಕೋದ್ಯಮ ಪ್ರಶಸ್ತಿ ಸ್ವೀಕರಿಸಿ ಜೋಗಿ

Spread the love

ನನ್ನ ಬರವಣಿಗೆಯ ಮೊದಲ ಗುರು ವಡ್ಡರ್ಸೆಯವರು; ಪತ್ರಿಕೋದ್ಯಮ ಪ್ರಶಸ್ತಿ ಸ್ವೀಕರಿಸಿ ಜೋಗಿ

ಬ್ರಹ್ಮಾವರ: ವಡ್ಡರ್ಸೆ ರಘುರಾಮ ಶೆಟ್ಟರ ಹೆಸರಿನಲ್ಲಿ ಕೊಡಮಾಡಿದ ಈ ಪ್ರಶಸ್ತಿ ನನ್ನ ಜೀವನದ ಬಹುದೊಡ್ಡ ಪ್ರಶಸ್ತಿ. ಅಂದು ವಡ್ಡರ್ಸೆಯವರ ಮುಂಗಾರು ಪತ್ರಿಕೆಗೆ ಓದುಗರ ಪತ್ರವನ್ನು ಬರೆಯುತ್ತಿದ್ದೆ. ಹೀಗಾಗಿಯೇ ನನ್ನ ಬರವಣಿಗೆಯ ಮೊದಲ ಗುರು ವಡ್ಡರ್ಸೆಯವರು ಎಂದು ಖ್ಯಾತ ಸಾಹಿತಿ ಪತ್ರಕರ್ತ ಗಿರೀಶ್ ರಾವ್ ಹತ್ವಾರ್(ಜೋಗಿ) ನುಡಿದರು.

 

ಅವರು ಭಾನುವಾರ ಸಂಜೆ ಬ್ರಹ್ಮಾವರ ಬಂಟರ ಭವನದಲ್ಲಿ ಬ್ರಹ್ಮಾವರ ತಾಲೂಕು ಪತ್ರಕರ್ತರ ಸಂಘ ಕೊಡಮಾಡುವ ವಡ್ಡರ್ಸೆ ರಘುರಾಮ ಶೆಟ್ಟಿ ಪತ್ರಿಕೋದ್ಯಮ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದರು.

ಕಾರ್ಯಕ್ರಮದ ವ್ಯವಸ್ಥಾಪಕರು ಯಾವ ವಶೀಲಿಬಾಜಿ ಇಲ್ಲದೆ ಈ ಪ್ರಶಸ್ತಿಗೆ ಆಯ್ಕೆ ಮಾಡಿದ್ದೇವೆ ಎಂದಿದ್ದಾರೆ. ಇದು ತುಂಬಾ ಖುಷಿ ಕೊಟ್ಟಿದೆ. ಬಹಳ ರೋಚಕವಾಗಿರುವ ಕ್ಷೇತ್ರ ಪತ್ರಿಕೋದ್ಯಮ. ವಡ್ಡರ್ಸೆಯವರ ಕಾಲದ ಪತ್ರಿಕಾರಂಗದಲ್ಲಿ ಪತ್ರಕರ್ತರನ್ನು ಬಹಳ ಗೌರಯುತವಾದ ಸ್ಥಾನದಲ್ಲಿ ನೋಡುತ್ತಿದ್ದರು. ಆದರೆ ಇದೀಗ ಈಗ ಹಾಗಿಲ್ಲ. ಪತ್ರಿಕೋದ್ಯಮ ತುಂಬಾ ಬದಲಾಗಿದೆ. ಅನ್ನದ ಹಂಗಿನಿಂದಾಗಿ ಪತ್ರಕರ್ತರು ಹಲವಾರು ಕೆಲಸಗಳನ್ನು ಮಾಡಬೇಕಾಗುತ್ತೆ. ಸಾಕಷ್ಟು ಒತ್ತಡ, ಜವಾಬ್ದಾರಿಗಳು ಪತ್ರಕರ್ತರ ಮೇಲಿದೆ ಎಂದರು.

ಮುಂಗಾರು ಕಾಲದಲ್ಲಿ ವಡ್ಡರ್ಸೆಯವರು ಅನಿಸಿದ್ದನ್ನು ಬರೆ ಎನ್ನುತ್ತಿದ್ದರು. ಬರೆದದ್ದನ್ನು ಅವರ ಬಳಿ ಹೋಗಿ ತೋರಿಸಿದರೆ ರೀ ರೈಟ್ ಮಾಡು ಎಂದು ಬೈಯ್ಯುತ್ತಿದ್ದರು. ಆದರೆ ಈಗಿನ ಪತ್ರಿಕೋದ್ಯಮ ಹಾಗಿಲ್ಲ. ಪತ್ರಕರ್ತರನ್ನು ತರಬೇತುಗೊಳಿಸುವ, ನೈತಿಕವಾಗಿ, ಮೌಲ್ಯಯುತವಾಗಿ ತಿದ್ದುವ ಕೆಲಸ ಆಗುತ್ತಿಲ್ಲ. ಇಂದು ಪತ್ರಕರ್ತರ ಸಂಖ್ಯೆ ಕ್ಷೀಣಿಸುತ್ತಿದೆ. ಪತ್ರಿಕೋದ್ಯಮದಲ್ಲಿ ಅವಸರ, ಅಳತೆ, ಜ್ಞಾನ ಎಂಬ ಮೂರು ಶತ್ರುಗಳಿದ್ದಾರೆ. ಈ ಮೂರು ಶತ್ರುಗಳನ್ನು ನಿವಾರಿಸಿಕೊಂಡರೆ ಪತ್ರಕರ್ತರಿಗೆ ಭವಿಷ್ಯವಿದೆ. ಪತ್ರಿಕಾರಂಗದಲ್ಲಿ ಹೊಸ ಅಲೆಯನ್ನು ಎಬ್ಬಿಸಿದ ವಡ್ಡರ್ಸೆಯವರ ಹೆಸರಿನಲ್ಲಿ ಪ್ರಶಸ್ತಿ ಪಡೆದಿರುವುದು ಹೊಸತನವನ್ನು ಸೃಷ್ಠಿ ಮಾಡಲು ನನಗೆ ಇದೊಂದು ಸ್ಪೂರ್ತಿ ಎಂದರು.

ಪ್ರಶಸ್ತಿ ಪಡೆಯುವ ಮೊದಲು ಜೋಗಿಯವರ ಕುರಿತಾದ ಅವರ ಜೀವನದ ಆಯ್ದ ಚಿತ್ರಣಗಳನ್ನು ಸಂಘಟಕರು ವಿಡಿಯೋ ದೃಶ್ಯಾವಳಿ ಮೂಲಕ ಸಭೆಯಲ್ಲಿ ಭಾಗವಹಿಸಿದ ಸಭಿಕರಿಗೆ ತೋರಿಸಿದರು. ಈ ವೇಳೆಯಲ್ಲಿ ಜೋಗಿವರ ತಾಯಿ ಫೋಟೋ ನೋಡಿ ಜೋಗಿಯವರು ಕ್ಷಣ ಕಾಲ ಭಾವುಕರಾದರು.

ಕಾರ್ಯಕ್ರಮದ ಉದ್ಘಾಟನೆಯನ್ನು ಆಳ್ವಾಸ್ ಸಮೂಹ ಸಂಸ್ಥೆಯ ಅಧಯಕ್ಷರಾದ ಮೋಹನ್ ಆಳ್ವಾ ದೀಪ ಬೆಳಗುವುದರ ಮೂಲಕ ಉದ್ಘಾಟಿಸಿದರು. ಸಾಹಿತಿ, ಕವಿ ಜಯಂತ ಕಾಯ್ಕಿಣಿ ಜೋಗಿಯವರಿಗೆ ವಡ್ಡರ್ಸೆರಘುರಾಮ ಶೆಟ್ಟರ ಪತ್ರಿಕೋದ್ಯಮ ಪ್ರಶಸ್ತಿ ಪ್ರದಾನ ಮಾಡಿದರು. ಅಧ್ಯಕ್ಷತೆಯನ್ನು ಬ್ರಹ್ಮಾವರ ಪತ್ರಕರ್ತರ ಸಂಘದ ಅಧ್ಯಕ್ಷರಾದ ಚಿತ್ತೂರು ಪ್ರಭಾಕರ ಶೆಟ್ಟಿ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಶಾನಾಡಿ ಅಜಿತ್ ಕುಮಾರ್ ಹೆಗ್ಡೆ, ಉಡುಪಿ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾದ ಗಣೇಶ್ ಪಾಂಡೇಲು, ಉದ್ಯಮಿ ಮಾರಣಕಟ್ಟೆ ಕೃಷ್ಣಮೂರ್ತಿ ಮಂಜ, ಸುಗ್ಗಿ ಸುಧಾಕರ ಶೆಟ್ಟಿ, ಸುದರ್ಶನ ಹೆಗ್ಡೆ ಉಪಸ್ಥಿತರಿದ್ದರು.

ಪತ್ರಕರ್ತ ವಸಂತ ಗಿಳಿಯಾರು ಪ್ರಾಸ್ತಾವಿಕ ಮಾತನಾಡಿದರು. ಸಂಘದ ಕಾರ್ಯದರ್ಶಿ ರಾಜೇಶ ಗಾಣಿಗ ಅಚ್ಲಾಡಿ ಸ್ವಾಗತಿಸಿದರೆ, ಖಜಾಂಚಿ ಮೋಹನ ಉಡುಪ ಧನ್ಯವಾದವಿತ್ತರು. ಉಪಾಧ್ಯಕ್ಷ ಚಂದ್ರಶೇಖರ ಬೀಜಾಡಿ ಕಾರ್ಯಕ್ರಮ ನಿರೂಪಿಸಿದರು.


Spread the love