ನಾನು….???

ನಾನು….???

ನಾನು ಬೆತ್ತಲಾಗುತ್ತೇನೆ
ಹೆಣ್ಣೆಂದಲ್ಲ.! ಗಂಡಿನ
ಕುರುಹು ನನ್ನೊಳಗಿಲ್ಲವೆಂದೆ ..?
ಅಲ್ಲ, ನಿರ್ವಾಣ ಕಾಯದ
ಮಾಯವಾದ ಊನಕ್ಕಾಗಿಯೆ..?
ಉತ್ತರ ಸಿಗದ ಪ್ರಶ್ನೆಗಳಿವು .‌..

ಹೊಕ್ಕಳ ಬಳ್ಳಿ ಕಡಿದಾಗ
ನಾನು ಅವನೇ…! ಈಗ
ಅವಳೊ .ಅವನೋ ಯಾವುದೋ
ಎಲ್ಲವೂ ಅಯೋಮಯ …
ನೋವಿಗೆ ನಾಯಕನ ನಾಯಕಿಯೊ ಆಗಿದ್ದೇನೆ…

ಸೀರೆಯ ಸೆರಗು ಮೆರುಗು ನೀಡಿ
ಹೆಣ್ಣಿನ ದಿರಿಸೇ ಹಿತವಾದಂತೆ ….
ದುಃಖದ ಮಂಪರಿನಲ್ಲೂ
ನಾನು ತೇಲಾಡುತ್ತಿರುತ್ತೇನೆ…
ಕೆಲವರಿಗೆ ರಾತ್ರಿಯ ರಾಣಿ ,
ಅನ್ಯರಿಗೆ ಭಿಕ್ಷೆಯ ಮಾರಿಯಾಗಿ..!

ಜಗದ ಯೋನಿಯ ಜೀವ ನಾನು ನಿಮ್ಮಂತೆ,
ಹುಸಿ ಹೇಸಿಗೆಗೆ ಮಸಿ ಬಳಿದು
ನಿಮ್ಮ ಮೌಢ್ಯಕ್ಕೆ ಚಟ್ಟ ಕಟ್ಟಿಬಿಡಿ ..
ನಾ ಅವನಾದರು ಅವಳಾದರು ..
ಎಲ್ಲರಲ್ಲೊಂದಾಗಿ ಬಾಳಿನ
ತೇರನೆಳೆಯಲು ಬಿಡುವಿರ ಕುರುಡು ಮಾನವರೆ…!!!!

 

 

 

 

 

 

ಗಣೇಶ್ ಅದ್ಯಪಾಡಿ, ಮಂಗಳೂರು
9620038356