ನಾಪತ್ತೆಯಾದ ಸಂಸದೆ ಕರಂದ್ಲಾಜೆ ಪ್ರಚಾರಕ್ಕಾಗಿ ಪತ್ತೆ ; ಆಪ್ ವ್ಯಂಗ್ಯ!

Spread the love

ನಾಪತ್ತೆಯಾದ ಸಂಸದೆ ಕರಂದ್ಲಾಜೆ ಪ್ರಚಾರಕ್ಕಾಗಿ ಪತ್ತೆ ; ಆಪ್ ವ್ಯಂಗ್ಯ!

ಉಡುಪಿ: ಕಳೆದ ಎರಡು ವರ್ಷಗಳಿಂದ ನಾಪತ್ತೆಯಾಗಿದ್ದ ಶೋಭಾ ಕರಂದ್ಲಾಜೆಯವರು ಇದ್ದಕ್ಕಿದ್ದಂತೆ ಸುದ್ಧಿ ಮಾಡಲೆಂದೇ ಕಾಣಿಸಿಕೊಂಡಿದ್ದಾರೆ! ಎಂದು ಆಮ್ ಆದ್ಮಿ ಪಾರ್ಟಿಯ ರಾಜ್ಯ ಸಹಸಂಚಾಲಕಿ, ಉಡುಪಿ ಜಿಲ್ಲಾ ಉಸ್ತುವಾರಿಯಾಗಿರುವ ಶಾಂತಲಾ ದಾಮ್ಲೆ ವ್ಯಂಗ್ಯವಾಡಿದ್ದಾರೆ

2014 ರಲ್ಲಿ ಉಡುಪಿ-ಚಿಕ್ಕಮಗಳೂರು ಕ್ಷೇತ್ರದಿಂದ ಲೋಕಸಭೆಗೆ ಆಯ್ಕೆಯಾಗಿ ಹೋದಾಗಿನಿಂದ ಕ್ಷೇತ್ರದ ಜನತೆಗೆ ಮುಖ ತೋರಿಸಿರಲಿಲ್ಲ. “ನಾಪತ್ತೆಯಾಗಿದ್ದಾರೆ” ಎಂಬ ಪೋಸ್ಟರ್ ಗಳು ಸಹಾ ಅವರ ಬಗ್ಗೆ ಕಾಣಿಸಿಕೊಂಡಿತ್ತು. ಇನ್ನು, ಚಿಕ್ಕಮಗಳೂರಿನಲ್ಲಿ ದಲಿತದ ಮೇಲೆ ದಾಳಿ ನಡೆದಾಗಲೂ ಆಕೆಯ ಸುಳಿವಿರಲಿಲ್ಲ. ಅಷ್ಟೇ ಅಲ್ಲ. ಎರಡು ತಿಂಗಳ ಹಿಂದೆ ಪ್ರವೀಣ್ ಪೂಜಾರಿ, ಒಬ್ಬ ಬಿಜೆಪಿಯ ಕಾರ್ಯಕರ್ತನೇ, ಉಡುಪಿ ಜಿಲ್ಲೆಯ “ಗೋರಕ್ಷಕ” ರೆಂಬ ರಾಕ್ಷಸರಿಗೆ ಬಲಿಯಾದಾಗ, ಕನಿಷ್ಠ ಅವರ ಕುಟುಂಬಕ್ಕೆ ಸಾಂತ್ವನ ನೀಡಲು ಸಹಾ ಕರಂದ್ಲಾಜೆಯವರು ಕಾಣಿಸಿಕೊಳ್ಳಲಿಲ್ಲ.

ಅಕ್ಟೊಬರ್ 16ರಂದು ನಡೆದ ಆರೆಸ್ಸೆಸ್ ಕಾರ್ಯಕರ್ತ ರುದ್ರೇಶ್ ಕೊಲೆ ಪ್ರಕರಣದಲ್ಲಿ ಬಿಜೆಪಿ ಕೋಮುವಾದಿ ಭಾವನೆಗಳನ್ನು ಕೆರಳಿಸಲು ಪ್ರಯತ್ನಿಸಿತಾದರೂ, ಅದೃಷ್ಟವಶಾತ್ ಬೆಂಗಳೂರಿನ ಪೊಲೀಸರು ಕೊಲೆ ಆರೋಪಿಗಳನ್ನು ಬೇಗನೆ ಹಿಡಿಯುವುದರ ಮೂಲಕ ಸಂದರ್ಭವನ್ನು ಹತೋಟಿಗೆ ತಂದಿದ್ದು ಸಮಾಧಾನದ ವಿಷಯ.

ಸಂಸದೆ ಶೋಭಾ ಕರಂದ್ಲಾಜೆಯವರು ಉಡುಪಿ, ಚಿಕ್ಕಮಗಳೂರು ಜಿಲ್ಲೆಗಳನ್ನು ಭೇಟಿ ಮಾಡಿ ಜನರ ಸಮಸ್ಯೆಗಳನ್ನು ಅರಿತು, ಅವರೊಂದಿಗೆ ಕೆಲಸ ಮಾಡಬೇಕೆಂದು ಆಮ್ ಆದ್ಮಿ ಪಾರ್ಟಿಯ ಕಳಕಳಿಯ ಮನವಿ ಮಾಡಿದೆ.


Spread the love