ನಿಯಮಾವಳಿ ರೂಪಿಸುವಾಗ ಮರಳಿಗಾಗಿ ಹೋರಾಟ ಸಮಿತಿಯನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲು ಆಗ್ರಹ

Spread the love

ನಿಯಮಾವಳಿ ರೂಪಿಸುವಾಗ ಮರಳಿಗಾಗಿ ಹೋರಾಟ ಸಮಿತಿಯನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲು ಆಗ್ರಹ

ಉಡುಪಿ: ಮರಳು ಸಾಗಾಟ ಸಂಬಧಿತ ನಿಯಮಾವಳಿ ರೂಪಿಸುವಾಗ ಉಡುಪಿ ಜಿಲ್ಲೆಯ ಸರ್ವ ಸಂಘಟನೆಗಳ ಮರಳಿಗಾಗಿ ಹೋರಾಟ ಸಮಿತಿಯನ್ನು ಜಿಲ್ಲಾಡಳಿತ ವಿಶ್ವಾಸಕ್ಕೆ ತೆಗೆದುಕೊಳ್ಳುವಂತೆ ಸಂಚಾಲಕ ಎಂ. ಜಿ. ನಾಗೇಂದ್ರ ಆಗ್ರಹಿಸಿದ್ದಾರೆ.

ಈ ಕುರಿತು ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ಉಡುಪಿ ಜಿಲ್ಲೆಯಲ್ಲಿ ಮರಳುಗಾರಿಕೆಗೆ ಹಸಿರು ಪೀಠ ತಡೆಯಾಜ್ಞೆ ನೀಡಿದ ಬಳಿಕ ಮತ್ತೆ ಮರಳುಗಾರಿಕೆ ಆರಂಭಿಸುವಂತೆ ವಿವಿಧ ಸಂಘಟನೆಗಳ ಸಹಕಾರದೊಂದಿಗೆ ಬೀದಿಗಿಳಿದು ಹೋರಾಟ ನಡೆಸಿ ಸರಕಾರ ಮತ್ತು ಜಿಲ್ಲಾಡಳಿತವನ್ನು ಎಚ್ಚರಿಸುವ ಕೆಲಸ ಮಾಡುತ್ತಾ ಬಂದಿದ್ದು, ಪ್ರಸ್ತುತ ಜಿಲ್ಲೆಯಲ್ಲಿ ಮರಳುಗಾರಿಕೆ ಆರಂಭವಾಗಿದ್ದು ಮರಳುಗಾರಿಕೆಗೆ ಅನುಮತಿ ನೀಡುವ ಸಂಬಂಧ  ಜಿಲ್ಲೆಯ ಕಟ್ಟಡ ಸಾಮಾಗ್ರಿ ಸಾಗಾಟ ಲಾರಿ, ಟೆಂಪೋ ಮಾಲಕರ ಸಂಘ, ಕಾರ್ಮಿಕರ ಸಂಘ, ಉಡುಪಿ ಜಿಲ್ಲೆಯ ಸರ್ವ ಸಂಘಟನೆಗಳ ಮರಳಿಗಾಗಿ ಹೋರಾಟ ಸಮಿತಿಯ ಸದಸ್ಯರನ್ನು ಯಾವುದೇ ಸಭೆಗೆ ಕರೆಯದೆ ಕೇವಲ ಲಾರಿ ಸಂಘಗಳ ಮ್ಹಾಲಕರನ್ನು ಮಾತ್ರ ಜಿಲ್ಲಾಡಳಿತ ಸಭೆಗೆ ಕರೆದಿದ್ದು, ನಮಗೂ ಸಹ ಸಭೆಗೆ ಕರೆಯುವಂತೆ ಆಗ್ರಹಿಸಿದರು.

ಅಲ್ಲದೆ ಉಡುಪಿ ಜಿಲ್ಲೆಯಲ್ಲಿ ಮರಳುಗಾರಿಕೆ ಪ್ರಾರಂಭವಾದ ಬಳಿಕ ಕೆಲವೊಂದು ಸಮಸ್ಯೆಗಳು ಉಂಟಾಗಿದ್ದು, ದಕ್ಕೆ ಮಾಲಕರು ಎಲ್ಲಾ ಲಾರಿ,ಟೆಂಪೋಗಳಿಗೆ ಮರಳನ್ನು ನೀಡುವಂತಾಗಬೇಕು ಆದರೆ ದಕ್ಕೆ ಮಾಲಕರು ಕೇವಲ ತಮ್ಮ ವಾಹನಗಳೀಗೆ ಮಾತ್ರ ಮರಳನ್ನು ಕೊಡುತ್ತಿದ್ದು ಈ ಬಗ್ಗೆ ಜಿಲ್ಲಾಧಿಕಾರಿಯವರು ಸೂಕ್ತ ನಿರ್ದೇಶನ ನೀಡಬೇಕು. ಜಿಪಿಎಸ್ ಅಳವಡಿಸಿರುವ ವಾಹನಗಳು ಎರಡು ವರ್ಷಗಳಿಂದ ನಿಂತಿರುವುದರಿಂದ ವಾಹನಗಳ ದುರಸ್ತಿ ವೆಚ್ಚವನ್ನು ಅದಕ್ಎಕ ಕಟ್ಟುವಂತಹ ಬಾಕಿ ಇರುವ ತೆರಿಗೆ ಮೊತ್ತವನ್ನು ಮನ್ನಾ ಮಾಡಬೇಕು ಎಂದು ಆಗ್ರಹಿಸಿದರು.

ಅಲ್ಲದೆ ಮರಳು ದಕ್ಕೆಯಲ್ಲಿ ಪರವಾನಿಗೆ ಕೊಡದಿದ್ದಾಗ ಲಾರಿ, ಟೆಂಪೋ ಮಾಲಕರ ಮೇಲೆ ದಂಡ ವಿಧಿಸುವ ಬದಲು ದಕ್ಕೆ ಮಾಲಕರಿಗೂ ಕೂಡ ದಂಡ ವಿಧಿಸ ಕ್ರಮ ಕೈಗೊಳ್ಳಬೇಕು. ಈಗಾಗಲೇ ಪರವಾನಿಗೆ ನೀಡಿರುವ ದಕ್ಕೆ ಮಾಲಕರು ಉಡುಪಿ ಜಿಲ್ಲೆಗೆ ಮಾತ್ರ ಮರಳು ಪೊರೈಸುವಂತಾಗಬೇಕು. ಅನ್ಯ ಜಿಲ್ಲೆಗೆ ಮರಳು ಸಾಗಾಟ ಮಾಡದಂತೆ ಕ್ರಮ ಜರುಗಿಸಬೇಕು. ಉಡುಪಿ ಜಿಲ್ಲೆಯ ಎಲ್ಲಾ ದಕ್ಕೆಗಳಿಗೂ ಎಕ ರೂಪದ ಧಾರಣೆಯನ್ನು ಜಿಲ್ಲಾಧಿಕಾರಿಯವರೇ ಮಾರಾಟ ದರವನ್ನು ನಿಗದಿಪಡಿಸಬೇಕು. ಒಂದು ಬಾರಿ ಪರವಾನಿಗೆ ಜಿಪಿಎಸ್ ಮುಕಾಂತರವೇ ಕೊಡುವುದರಿಂದ ರಸ್ತೆಯಲ್ಲಿ ಮರಳು ಸಾಗಾಟ ಮಾಡುವಾಗ ಪೊಲೀಸ್ ಇಲಾಖೆಯವರು ಹಾಗೂ ಇತರೇ ಇಲಾಖೆಯ ಅಧಿಕಾರಿಗಳು ಕಿರುಕುಳ ನೀಡದ ರೀತಿಯಲ್ಲಿ ಸ್ಪಷ್ಟ ಸೂಚನೆಯನ್ನು ಜಿಲ್ಲಾಧಿಕಾರಿಗಳು ಇಲಾಖೆಗಳಿಗೆ ನೀಡಬೇಕು ಎಂದು ಆಗ್ರಹಿಸಿದರು.

ಸುದ್ದಿಗೋಷ್ಟಿಯಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ಅನ್ಸಾರ್ ಅಹಮ್ಮದ್, ಉಡುಪಿ ಜಿಲ್ಲಾ ಕಾರ್ಮಿಕ ವೇದಿಕೆ ಅಧ್ಯಕ್ಷ  ರವಿ ಶೆಟ್ಟಿ, ರಕ್ಷಣಾ ವೇದಿಕೆ ಇದರ ಯು ಸುದೇಶ್ ಶೇಟ್, ರಾಘವೇಂದ್ರ ಶೆಟ್ಟಿ, ಸಂದೀಪ್ ಕುಮಾರ್ ಉಪಸ್ಥಿತರಿದ್ದರು.


Spread the love