ನೇಜಾರು ಹತ್ಯಾಕಾಂಡ: ಸೌಜನ್ಯಕ್ಕಾದರೂ ಶೋಭಾ ಕರಂದ್ಲಾಜೆ ಸಾಂತ್ವಾನ ಹೇಳಿಲ್ಲ – ರಮೇಶ್ ಕಾಂಚನ್

Spread the love

ನೇಜಾರು ಹತ್ಯಾಕಾಂಡ: ಸೌಜನ್ಯಕ್ಕಾದರೂ ಶೋಭಾ ಕರಂದ್ಲಾಜೆ ಸಾಂತ್ವಾನ ಹೇಳಿಲ್ಲ – ರಮೇಶ್ ಕಾಂಚನ್

ಉಡುಪಿ: ಇಡೀ ಕರಾವಳಿಯನ್ನೇ ಬೆಚ್ಚಿಬೀಳಿಸುವಂತಹ ರೀತಿಯಲ್ಲಿ ನೇಜಾರು ಹತ್ಯಾಕಾಂಡ ನಡೆದು ಒಂದೇ ಮನೆಯ ನಾಲ್ಕು ಮಂದಿ ಸದಸ್ಯರು ಬರ್ಬರವಾಗಿ ಕೊಲೆಯಾದರೂ ಕೂಡ ಕನಿಷ್ಠ ಸೌಜನ್ಯಕ್ಕಾದರೂ ಮೃತ ಕುಟುಂಬದ ಸದಸ್ಯರಿಗೆ ಸಾಂತ್ವಾನ ಹೇಳುವ ಕೆಲಸ ಮಾಡಲು ಸಾಧ್ಯವಾಗದ ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಸಂಸದೆ, ಕೇಂದ್ರ ಸಚಿವೆಯಾದ ಶೋಭಾ ಕರಂದ್ಲಾಜೆಯವರ ವರ್ತನೆ ನಾಚೀಕೆಗೇಡು ಎಂದು ಉಡುಪಿ ಬ್ಲಾಕ್ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ರಮೇಶ್ ಕಾಂಚನ್ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರಾಜ್ಯದ ಯಾವುದೇ ಭಾಗದಲ್ಲಿ ಕೂಡ ಯಾರೇ ಸತ್ತರೂ ಅದಕ್ಕೆ ಧರ್ಮದ ರಾಜಕೀಯವನ್ನು ಬೆರೆಸಿ ಅರಚಾಟ ಮಾಡುವ ಸಂಸದೆಯವರು ತನ್ನದೇ ಕ್ಷೇತ್ರದಲ್ಲಿ ತಾಯಿ ಮತ್ತು ಮೂವರು ಮಕ್ಕಳು ಒಬ್ಬ ವ್ಯಕ್ತಿಯಿಂದ ಅಮಾನುಷವಾಗಿ ಕೊಲೆಯಾಗಿ ಹೋಗಿದ್ದಾರೆ. ಕೊಲೆಯಾದವರಲ್ಲಿ ಮೂವರು ಮಹಿಳೆಯರಾಗಿದ್ದು ಸಂಸದೆಯವರೂ ಕೂಡ ಮಹಿಳೆಯಾಗಿದ್ದು ಕನಿಷ್ಠ ಮೃತ ಕುಟುಂಬದ ಸದಸ್ಯರ ದುಃಖದಲ್ಲಿ ಭಾಗಿಯಾಗುವ ಸೌಜನ್ಯ ಕೂಡ ತೋರಿಸದಿರುವುದು ಅತ್ಯಂತ ಕಳವಳಕಾರಿ ಸಂಗತಿಯಾಗಿದೆ.

ಸಂಸದೆ ಅವರು ಕೇವಲ ಒಂದು ಧರ್ಮಕ್ಕೆ ಅಥವಾ ಸಮುದಾಯಕ್ಕೆ ಸೀಮಿತರಾಗಿಲ್ಲ ಎನ್ನುವುದನ್ನು ಶೋಭಾ ಕರಂದ್ಲಾಜೆಯವರು ಮರೆತಿದ್ದಾರೆ. ಸಬ್ ಸಾಥ್ ಸಬಕಾ ವಿಕಾಸ್ ಎನ್ನುವ ಮೋದಿಯವರ ತತ್ವದಿಂದ ಶೋಭಾ ಕರಂದ್ಲಾಜೆಯವರು ಹೊರಗಿದ್ದಾರೆಯೇ? ಅಥವಾ ಒಂದು ಸಮುದಾಯದವರು ಕೊಲೆಯಾದಾಗ ಅಥವಾ ಮೃತರಾದಾಗ ಬಂದು ಮೊಸಳೆ ಕಣ್ಣೀರು ಹಾಕುತ್ತಾರೆಯೇ? ಬಿಜೆಪಿ ಪಕ್ಷದವರು ಪ್ರತಿಯೊಂದನ್ನು ಧರ್ಮಧ ದೃಷ್ಟಿಯಲ್ಲಿ ನೋಡುತ್ತಿದ್ದಾರೆ ಎನ್ನುವುದನ್ನು ಸಂಸದೆಯವರು ಸಾಬೀತುಪಡಿಸಿದ್ದಾರೆ.

ಜಿಲ್ಲೆಯ ಪೊಲೀಸ್ ಇಲಾಖೆ ಕ್ಷಿಪ್ರವಾಗಿ ಕಾರ್ಯಾಚರಣೆ ನಡೆಸಿ ಕೊಲೆ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ ಇಲ್ಲವಾದಲ್ಲಿ ಬಿಜೆಪಿಗರು ಅದನ್ನು ಕೂಡ ಧರ್ಮದ ಲೇಬಲ್ ಅಂಟಿಸಿ ಜಿಲ್ಲೆಯಲ್ಲಿ ಅಶಾಂತಿ ಸೃಷ್ಟಿಸುವ ಕೆಲಸ ಮಾಡುತ್ತಿದ್ದರು. ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿ ಮತ್ತವರ ತಂಡದ ಕಾರ್ಯ ಶ್ಲಾಘನೀಯವಾಗಿದೆ. ಜಿಲ್ಲೆಯಿಂದ ಆಯ್ಕೆಯಾದ ಸಂಸದೆಯವರು ಪ್ರತಿಯೊಂದು ವಿಚಾರವನ್ನು ತಮ್ಮ ರಾಜಕೀಯ ಬೇಳೆ ಬೇಯಿಸುವುದಕ್ಕೆ ಉಪಯೋಗಿಸುವುದನ್ನು ಬಿಟ್ಟು ಸ್ವಲ್ಪ ಮನುಷ್ಯತ್ವಕ್ಕೂ ಬೆಲೆ ನೀಡುವ ಕೆಲಸ ಮಾಡಲಿ ಇಲ್ಲವಾದರೆ ಮುಂದಿನ ದಿನಗಳಲ್ಲಿ ಜಿಲ್ಲೆಯ ಜನರು ತಕ್ಕ ಪಾಠ ಕಲಿಸಲಿದ್ದಾರೆ ಎಂದು ಉಡುಪಿ ಬ್ಲಾಕ್ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾದ ರಮೇಶ್ ಕಾಂಚನ್ ಅವರು ಪತ್ರಿಕಾ ಪ್ರಕಟಣೆಯ ಮೂಲಕ ಆಗ್ರಹಿಸಿದ್ದಾರೆ.


Spread the love