ಪಲಿಮಾರು ಮಠಕ್ಕೆ ಉತ್ತರಾಧಿಕಾರಿ ನೇಮಕ ; ಆತ್ಮಶ್ರಾದ್ಧ, ಗೋದಾನ, ದಶದಾನ

ಪಲಿಮಾರು ಮಠಕ್ಕೆ ಉತ್ತರಾಧಿಕಾರಿ ನೇಮಕ ; ಆತ್ಮಶ್ರಾದ್ಧ, ಗೋದಾನ, ದಶದಾನ

ಉಡುಪಿ: ಪಲಿಮಾರು ಮಠಕ್ಕೆ ಉತ್ತರಾಧಿಕಾರಿಯಾಗಿ ನೇಮಕ ವಾಗಿರುವ ಶೈಲೇಶ ಉಪಾಧ್ಯಾಯ ಎಂಬ ವಟುವಿಗೆ ಸನ್ಯಾಸ ದೀಕ್ಷೆಯ ಪೂರ್ವಭಾವಿ ವಿಧಿವಿಧಾನಗಳು ಗುರುವಾರ ನೆರವೇರಿದವು.

ಮೊದಲಿಗೆ ಆತ್ಮಶ್ರಾದ್ಧ ನೆರವೇರಿತು. ಬಳಿಕ ತುರಿಯಾಶ್ರಮವಾದ ಸನ್ಯಾಸ ಅಧಿಕಾರ ಯೋಗ್ಯತಾ ಸಿದ್ಧಿಗೋಸ್ಕರ ಪ್ರಾಯಶ್ಚಿತ್ತ ಪೂರ್ವಕವಾಗಿ ಗೋದಾನ ಹಾಗೂ ದಶದಾನಗಳನ್ನು ನೀಡಲಾಯಿತು. ಬಳಿಕ ವಟು ಶೈಲೇಶ ಉಪಾಧ್ಯಾಯ ಅವರ ಕೇಶಮುಂಡನ ನಡೆಯಿತು. ನಂತರ ಮಧ್ವಸರೋವರದಲ್ಲಿ ಪವಿತ್ರಸ್ನಾನ ನೆರವೇರಿತು.

ಶುಕ್ರವಾರ ಬೆಳಗಿನ ಜಾವ ಬ್ರಾಹ್ಮೀ ಮುಹೂರ್ತವಾದ 3.57ಕ್ಕೆ ಪ್ರಣವೋಪದೇಶ ಪುರಸ್ಸರ ಸನ್ಯಾಸದೀಕ್ಷೆ ನೆರವೇರಲಿದೆ. ಪಲಿಮಾರು ಶ್ರೀಗಳು ವಟುವಿಗೆ ಪ್ರಣವೋಪದೇಶ ನೀಡಲಿದ್ದಾರೆ. ಶನಿವಾರ ಅಷ್ಟ ಮಹಾಮಂತ್ರೋಪದೇಶ ಸರ್ವಮೂಲ ಶಾಂತಿಪಾಠ, ತತ್ವ ಚಿಂತನೆಗಳ ವಿಧಿವಿಧಾನಗಳು ನಡೆಯಲಿವೆ.

ಮೇ 12ರಂದು ಪಲಿಮಾರು ಪೀಠದ ನೂತನ ಉತ್ತರಾಧಿಕಾರಿಯ ಪಟ್ಟಾಭಿಷೇಕ ಕಾರ್ಯಕ್ರಮ ನೆರವೇರಲಿದ್ದು, ಸಾವಿರಾರು ಭಕ್ತರು ಉಪಸ್ಥಿತರಿರಲಿದ್ದಾರೆ.