ಪಿಯುಸಿ ರಾಸಾಯನ ಶಾಸ್ತ್ರ ಪ್ರಶ್ನೆಪತ್ರಿಕೆ ಸೋರಿಕೆ ಆಘಾತಕಾರಿ-ಯಾಸೀನ್ ಕೋಡಿಬೆಂಗ್ರೆ

Spread the love

ಉಡುಪಿ: ದ್ವಿತೀಯ ಪಿಯುಸಿ ರಾಸಾಯನ ಶಾಸ್ತ್ರ ಪ್ರಶ್ನೆಪತ್ರಿಕೆ ಮರು ಸೋರಿಕೆಯಾಗಿರುವುದು ಬಹಳ ಆಘಾತಕಾರಿ ಬೆಳವಣಿಗೆಯಾಗಿದೆ. ಈ ಮೂಲಕ ಪರೀಕ್ಷಾ ಮಂಡಳಿಯ ಬೇಜವಾಬ್ದಾರಿತನ ಮತ್ತೊಮ್ಮೆ ಸಾಬೀತಾಗಿದೆ. ಇಂದು ಸರಕಾರವು ನಡೆಸುವ ಯಾವುದೇ ಸ್ಪರ್ಧಾತ್ಮಕ ಪರೀಕ್ಷೆಯ ಪಾರದರ್ಶಕತೆ ಮತ್ತು ಗುಣಮಟ್ಟದ ಕುರಿತು ಜನಸಾಮಾನ್ಯರು ಸಂಪೂರ್ಣ ನಂಬಿಕೆ ಕಳಕೊಂಡಿದ್ದಾರೆ. ತಪ್ಪನ್ನು ಸರಿಪಡಿಸಿದ್ದೇವೆ ಮತ್ತು ಸಮಗ್ರ ತನಿಖೆ ನಡೆಸಿ ಕಾನೂನು ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿ ಸರಕಾರವು ಆಶ್ವಾಸನೆಗಳನ್ನು ನೀಡಿ ತಪ್ಪಿನಿಂದ ಜಾರಿಗೊಳ್ಳಲು ಪ್ರಯತ್ನಿಸುತ್ತಿದೆ ಎಂದು ಎಸ್.ಐ.ಓ ಇದರ ಜಿಲ್ಲಾಧ್ಯಕ್ಷರಾದ ಯಾಸೀನ್ ಕೋಡಿಬೆಂಗ್ರೆ ಉಡುಪಿಯ ಕ್ಲಾಕ್ ಟವರ್ ಬಳಿ ಎಸ್.ಐ.ಓ ಉಡುಪಿ ಜಿಲ್ಲೆಯ ವತಿಯಿಂದ ದ್ವಿತೀಯ ಪಿಯುಸಿ ರಸಾಯನ ಶಾಸ್ತ್ರ ಪ್ರಶ್ನೆ ಪತ್ರಿಕೆ ಸೋರಿಕೆ ವಿರೋಧಿಸಿ ನಡೆದ ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದರು.

sio-protest-puc

ಪಶ್ನೆ ಪತ್ರಿಕೆ ತಯಾರಿಯಲ್ಲಿ ರಚನೆ, ಪ್ಯಾಕಿಂಗ್ ಮತ್ತು ಸಾಗಾಣೆ ಈ ಮೂರು ಹಂತಗಳಲ್ಲಿ ಎಲ್ಲೋ ಒಂದು ಕಡೆ ಲೋಪದೋಷವನ್ನು ಹುಡುಕುವಲ್ಲಿ ಸರಕಾರವು ಸಂಪೂರ್ಣವಾಗಿ ವಿಫಲವಾಗಿದೆ. ಪ್ರಶ್ನಾಪತ್ರಿಕೆಗಳು ಬಹಳ ಗೌಪ್ಯವಾಗಿ ಹೊರ ರಾಜ್ಯಗಳಲ್ಲಿ ಮುದ್ರಣವಾಗಿ ನಂತರ ಅದನ್ನು ಗೌಪ್ಯ ಸ್ಥಳದಲ್ಲಿ ಇಟ್ಟು, ಬಿಗಿ ಭದ್ರತೆಯೊಂದಿಗೆ ಅದನ್ನು ಜಿಲ್ಲಾ ಖಜಾನೆಗೆ ವರ್ಗಾಯಿಸಲಾಗುತ್ತದೆ. ಸಿಐಡಿ ತಣಿಖೆ ನಡೆಯುತ್ತಿರುವಾಗಲೇ ಪ್ರಶ್ನೆಪತ್ರಿಕೆ ಮರುಸೋರಿಕೆಯಾಗಿರುವುದು ಸರಕಾರದ ತನಿಖೆಯ ಮುಖವಾಡ ಮತ್ತೊಮ್ಮೆ ಬಯಲಾಗಿದೆ. ಸರಕಾರವು ಈ ಅವ್ಯವಹಾರದ ಹಿಂದಿನ ಮೂಲವನ್ನು ಹುಡುಕಲು ಪ್ರಯತ್ನಿಸಬೇಕು. ಮೌಲ್ಯಮಾಪನದ ಪದ್ಧತಿ, ಮರುಮೌಲ್ಯಮಾಪನ ಮತ್ತು ಮರು ಎಣಿಕೆ ಹಾಗೂ ಅಂಕಪಟ್ಟಿ ತಯಾರಿಕೆಯಲ್ಲೂ ಇಂತಹ ಲೋಪದೋಷಗಳು ನಿರಂತರವಾಗಿ ನಡೆಯುತ್ತಿರುವುದು ಖಂಡನಾರ್ಹವಾಗಿದೆ. ಇತ್ತೀಚೆಗೆ ಪಿಯುಸಿ ಗಣಿತದ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಅವೈಜ್ಞಾನಿಕ ಮತ್ತು ಪಠ್ಯೇತರವಾಗಿತ್ತೆಂದು ಹಲವಾರು ಆರೋಪಗಳು ಕೇಳಿ ಬರುತ್ತಿರುವಾಗಲೇ, ಕೋಲಾರ ಮತ್ತು ಬಳ್ಳಾರಿ ಜಿಲ್ಲೆಯಲ್ಲಿ ರಸಾಯನ ಶಾಸ್ತ್ರ ವಿಷಯದ ಪ್ರಶ್ನೆಪತ್ರಿಕೆ ಸೋರಿಕೆಯಾಗಿ ಮಕ್ಕಳಲ್ಲೂ ಪೋಷಕರಲ್ಲೂ ಹಲವಾರು ಆತಂಕಕ್ಕೆ ಕಾರಣವಾಗಿತ್ತು. ಈ ಹಿಂದೆಯೂ 2012 ರಲ್ಲಿ ಬೆಂಗಳೂರು, ಚಿಕ್ಕಬಳ್ಳಾಪುರ, ಕೋಲಾರ ಜಿಲ್ಲೆಯ ಕೆಲವು ಕೇಂದ್ರಗಳಲ್ಲಿ ಪಿಯುಸಿ ಪರೀಕ್ಷೆಯ ಗಣಿತ, ಭೌತಶಾಸ್ತ್ರದ ಪ್ರಶ್ನೆಪತ್ರಿಕೆ ಸೋರಿಕೆಯಾಗಿ 14 ಉಪನ್ಯಾಸಕರನ್ನು ಅಮಾನತ್ತು ಮಾಡಲಾಗಿತ್ತು. ಇಂತಹ ಅವ್ಯವಹಾರವು ಮರುಕಳಿಸುತ್ತಿರುವುದು ಆಘಾತಕಾರಿ ಬೆಳವಣಿಗೆಯಾಗಿದೆ. ಆದ್ದರಿಂದ ಇಂತಹ ಸ್ಪರ್ಧಾತ್ಮಕ ಪರೀಕ್ಷೆಯ ಗುಣಮಟ್ಟ ಮತ್ತು ಪಾರದರ್ಶಕತೆಯನ್ನು ಕಾಪಾಡಲು ಸರಕಾರವು ಪ್ರತಿಜ್ಞಾಬದ್ಧವಾಗಬೇಕು. ಇಲಾಖೆಯು ಪದೇ ಪದೇ ವಿದ್ಯಾರ್ಥಿಗಳ ಭವಿಷ್ಯದೊಂದಿಗೆ ಚೆಲ್ಲಾಟವಾಡುವುದನ್ನು ನಿಲ್ಲಿಸಿ ಸಮಸ್ಯೆಯ ಮೂಲ ಕಾರಣವನ್ನು ಹುಡುಕಿ ಖಾಯಂ ಪರಿಹಾರವನ್ನು ಕೈಗೊಳ್ಳುವುದಲ್ಲದೆ, ತಪ್ಪಿತಸ್ಥರ ವಿರುದ್ಧ ಶೀಘ್ರ ಕ್ರಮಕೈಗೊಳ್ಳಬೇಕೆಂದು ಆಗ್ರಹಿಸಿದರು.
ಫ್ರೋ.ಫಣಿರಾಜ್ ಮಾತನಾಡಿ ಘಟನೆಯ ಬಗ್ಗೆ ಉನ್ನತ ಮಟ್ಟದ ತನಿಖೆಯಾಗಬೇಕು, ವಿದ್ಯಾರ್ಥಿಗಳಿಗೆ ನ್ಯಾಯ ಸಿಗುವಂತಾಗಬೇಕು. ಇಂತಹ ಘಟನೆಗಳ ಹಿಂದೆ ದೊಡ್ಡ ದೊಡ್ಡ ಮಾಫಿಯಾದ ಕೈವಾಡವಿದ್ದು, ಕೊಲಂಕುಷವಾದ ತನಿಖೆ ನಡೆದು ವಿದ್ಯಾರ್ಥಿಗಳಿಗೆ ನ್ಯಾಯ ಸಿಗುವಂತಾಗಬೇಕೆಂದು ಆಗ್ರಹಿಸಿದರು.
ಹುಸೇನ್ ಕೋಡಿಬೆಂಗ್ರೆ ಸಭೆಯನ್ನುದ್ದೇಶಿಸಿ ಮಾತನಾಡಿದರು. ಶಾರೂಕ್ ಜಿಲ್ಲಾ ಕಾರ್ಯದರ್ಶಿ, ಅಫ್ವಾನ್, ಸಲಾಹುದ್ದೀನ್ ಹೂಡೆ, ಹಾಗೂ ಬಿಲಾಲ್, ಅಫ್ಶಾನ್ ಕುಂದಾಪುರ ಉಪಸ್ಥಿತರಿದ್ದರು. ಶುಐಬ್ ಮಲ್ಪೆ ನಿರೂಪಿಸಿದರು.


Spread the love