ಪಿ.ಎಸ್.ಐ. ಅನಂತಪದ್ಮನಾಭ ಪಿ.ಐ ಆಗಿ ಮುಂಬಡ್ತಿ- ಕರಾವಳಿ ಕಾವಲು ಪಡೆ ಮಲ್ಪೆಗೆ ನಿಯುಕ್ತಿ
ಉಡುಪಿ: ಡಿ.ಸಿ.ಆರ್.ಬಿ. ಉಡುಪಿ ಜಿಲ್ಲೆ ಇಲ್ಲಿ ಪಿ.ಎಸ್.ಐ ಆಗಿ ಕಾರ್ಯನಿರ್ವಹಿಸುತ್ತಿದ್ದ ಅನಂತಪದ್ಮನಾಭ ಕೆ.ಬಿ ಅವರನ್ನು ಕರಾವಳಿ ಕಾವಲು ಪಡೆ ಮಲ್ಪೆ ಇದರ ಪಿ ಐ ಆಗಿ ಮುಂಬಡ್ತಿ ನೀಡಿ ಆದೇಶ ಹೊರಡಿಸಿದ್ದಾರೆ.

ಅನಂತಪದ್ಮನಾಭ ಕೆ ಬಿ ಅವರು ಮೊದಲು ಉಡುಪಿ ನಗರ ಠಾಣೆಯಲ್ಲಿ ಪಿಎಸ್.ಐ ಆಗಿ ಸೇವೆ ಸಲ್ಲಿಸಿ ದಕ್ಷ ಹಾಗೂ ಜನಸ್ನೇಹಿ ಅಧಿಕಾರಿ ಎಂದು ಹೆಸರು ಪಡೆದಿದ್ದರು. ಆದರೆ ಕಳೆದ ನವೆಂಬರ್ ತಿಂಗಳಿನಲ್ಲಿ ನಡೆದ ಹಲ್ಲೆ ಪ್ರಕರಣವೊಂದಕ್ಕೆ ಸಂಬಂಧಿಸಿ ಕರ್ತವ್ಯ ಲೋಪದ ಆರೋಪದ ಮೇಲೆ ಆಗಿನ ಜಿಲ್ಲಾ ಎಸ್ಪಿ ನಿಶಾ ಜೇಮ್ಸ್ ಅಮಾನತುಗೊಳಿಸಿದ್ದರು.
ಎಸ್ಸೈ ಅನಂತಪದ್ಮನಾಭ ಅವರನ್ನು ಅಮಾನತುಗೊಳಿಸಿದ್ದಕ್ಕೆ ಉಡುಪಿ ಶಾಸಕ ರಘುಪತಿ ಭಟ್, ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಸೇರಿದಂತೆ ವಿವಿಧ ಸಂಘಟನೆಗಳು, ಸಾರ್ವಜನಿಕರಿಂದ ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಈ ಪ್ರಕರಣವನ್ನು ಎಸ್ಪಿ ಮಂಗಳೂರು ಪಶ್ಚಿಮ ವಲಯ ಐಜಿಪಿಯವರಿಗೆ ಕಳುಹಿಸಿಕೊಟ್ಟಿದ್ದರು. ಈ ಬಗ್ಗೆ ಪರಿಶೀಲನೆ ನಡೆಸಿದ ಐಜಿಪಿ ಎಸ್ಸೈ ಅವರ ಅಮಾನತು ಆದೇಶವನ್ನು ರದ್ದುಗೊಳಿಸಿದ್ದರು. ಬಳಿಕ ಅವರನ್ನು ವಾಪಾಸು ಪಡೆದು ಜಿಲ್ಲಾ ಡಿ.ಸಿ.ಆರ್.ಬಿ. ವಿಭಾಗಕ್ಕೆ ಉಪನಿರೀಕ್ಷಕರಾಗಿ ವರ್ಗಾವಣೆಗೊಳಿಸಲಾಗಿತ್ತು.
ಈಗ ಪೊಲೀಸ್ ಉಪನಿರೀಕ್ಷಕರ ಹುದ್ದೆಯಿಂದ ಪಿಐ ಆಗಿ ಭಡ್ತಿ ಹೊಂದಿದ್ದು ಕರಾವಳಿ ಕಾವಲು ಪಡೆ ಮಲ್ಪೆ ಇಲ್ಲಿಗೆ ನಿಯೋಜನೆಗೊಂಡಿದ್ದಾರೆ.













