ಪುಣ್ಯಭೂಮಿ ಧರ್ಮಸ್ಥಳವನ್ನು ಅಪವಿತ್ರಗೊಳಿಸುವ ಯತ್ನವೇಕೇ? – ಶ್ರೀನಿಧಿ ಹೆಗ್ಡೆ 

Spread the love

ಪುಣ್ಯಭೂಮಿ ಧರ್ಮಸ್ಥಳವನ್ನು ಅಪವಿತ್ರಗೊಳಿಸುವ ಯತ್ನವೇಕೇ? – ಶ್ರೀನಿಧಿ ಹೆಗ್ಡೆ 

ಶ್ರೀ ಕ್ಷೇತ್ರ ಧರ್ಮಸ್ಥಳ –ಇದು ಕೇವಲ ಒಂದು ಧಾರ್ಮಿಕ ಸ್ಥಳವಲ್ಲ. ಇದು ನಮ್ಮ ನಾಡಿನ ನಂಬಿಕೆಯ ಮಡಿಲು, ಭಕ್ತಿಯ ಶುದ್ಧ ರೂಪ, ಸಹಸ್ರಾರು ಕುಟುಂಬಗಳಿಗೆ ಬೆಳಕಾಗಿರುವ ಜೀವಂತ ಧಾರ್ಮಿಕ ಕ್ಷೇತ್ರ. ದೇವತಾ ಸಾನ್ನಿಧ್ಯದಲ್ಲಿ ಈ ಕ್ಷೇತ್ರವು ಸಾವಿರಾರು ಸಮಾಜಮುಖಿ ಯೋಜನೆಗಳ ಮೂಲಕ ಪ್ರಜ್ವಲಿತವಾಗಿದ್ದು, ಸಾಮಾಜಿಕ ಬದಲಾವಣೆಗೆ ಮಾದರಿಯಾಗಿ ನಿಂತಿದೆ.

ಇಂತಹ ಪುಣ್ಯಭೂಮಿಯ ವಿರುದ್ಧ ಇತ್ತೀಚೆಗೆ ಕೆಲವರು, ಧಾರ್ಮಿಕ ಶ್ರದ್ಧೆಯ ವಿರೋಧಿಗಳು ಹಾಗೂ ನಿರಾಧಾರ ನಿಲುವು ಹೊಂದಿರುವವರು, ಧರ್ಮಸ್ಥಳದ ಹೆಸರಿನಲ್ಲಿ ಸುಳ್ಳುಗಳ ಕಂತೆಯೊಂದಿಗೆ ಮತಿ ವಿಕಲ್ಪಗೊಂಡವರಂತೆ ಅಪಪ್ರಚಾರ ಮಾಡುತ್ತಿರುವುದು, ನಿಜಕ್ಕೂ ಭಕ್ತರ ನಂಬಿಕೆಗೆ ನೋವುಂಟು ಮಾಡುವಂತಾಗಿದೆ.

ರಾಜ್ಯ ಸರಕಾರ ನೇತ್ರಾವತಿ ನದಿ ತೀರದಲ್ಲಿ ನಡೆದಿದೆ ಎನ್ನಲಾದ ಘಟನೆಗಳ ತನಿಖೆಗೆ ವಿಶೇಷ ತನಿಖಾ ತಂಡ (SIT) ರಚಿಸಿರುವುದು ಸ್ವಾಗತಾರ್ಹ. ಆ ತಂಡದ ನೇತೃತ್ವದಲ್ಲಿ ತನಿಖೆ ಪ್ರಗತಿಯಲ್ಲಿದೆ. ಈ ಮಧ್ಯೆ ಕೆಲವರು ಧರ್ಮಸ್ಥಳ ಕ್ಷೇತ್ರವನ್ನು ಗುರಿಯಾಗಿಸಿ, ವಾಮ ಮನಸ್ಥಿತಿಯಿಂದ ಅಥವಾ ಮತಿ ವಿಕಲ್ಪಗೊಂಡಂತಿರುವ ಕೆಲವರ ಕುಮ್ಮಕ್ಕಿನಿಂದ, ಧರ್ಮ, ದೇವರು ಹಾಗೂ ಶ್ರದ್ಧಾಭಕ್ತಿಗೆ ಧಕ್ಕೆ ತರುವ ಪ್ರಯತ್ನ ಮಾಡುತ್ತಿರುವುದು ಕಂಡುಬರುತ್ತಿದೆ ಇದು ಅಕ್ಷಮ್ಯ ಹಾಗೂ ಒಪ್ಪಲು ಅಸಾಧ್ಯ.

ಇದು ಕೇವಲ ತೇಜೋವಧೆ ಮಾತ್ರವಲ್ಲ, ಇದು ನಂಬಿಕೆಯ ಮೇಲೆ ಹೂಡುತ್ತಿರುವ ಆಯುಧ. ಇದು ನಮ್ಮ ಶ್ರದ್ಧೆಯ ಪ್ರಭಾವವನ್ನು ಕುಗ್ಗಿಸುವ, ವಿಭಜನೆಯ ಮೂಲಕ ಶ್ರದ್ಧಾ ಚಟುವಟಿಕೆಗೆ ಮಸಿ ಬಳಿಯುವ ಯತ್ನ ಅಲ್ಲದೆ ಮತ್ತೇನೂ ಅಲ್ಲ. ಈ ಹಿನ್ನೆಲೆಯಲ್ಲಿ ಕ್ಷೇತ್ರದ ಪರ ನಿಲ್ಲುವುದು, ಸುಳ್ಳುಗಳ ವಿರುದ್ಧ ಸತ್ಯವನ್ನು ನಿಲ್ಲಿಸುವುದು, ನಮ್ಮೆಲ್ಲರ ಹೊಣೆ ಮತ್ತು ಜವಾಬ್ದಾರಿ ಕೂಡ ಆಗಿದೆ.

ಈ ಭಯಾನಕ ಅಪಪ್ರಚಾರದ ಹಿಂದೆ ಒಂದಿಷ್ಟು ಯೋಜಿತ ಜಾಲವಿರುವ ಸಾಧ್ಯತೆಯನ್ನೂ ತಳ್ಳಿ ಹಾಕುವ ಹಾಗಿಲ್ಲ. ಹಿಂದಿನ ವರ್ಷಗಳಲ್ಲಿ ಪ್ರಭಾವಿ ಹುದ್ದೆಗಳಲ್ಲಿ ಇದ್ದ ಕೆಲವು ಶಕ್ತಿಗಳು ಇಂದು ತೆರೆಮರೆಯಲ್ಲಿ ನೇಪಥ್ಯ ನಾಯಕರಂತೆ ಕೆಲಸ ಮಾಡುತ್ತಿರುವ ಶಂಕೆಯೂ ಮೂಡುತ್ತಿದೆ. ಇದು ಆತಂಕದ ವಿಷಯವಲ್ಲದೆ ಮತ್ತೇನು…!!??

ಇನ್ನು ಕೆಲವು ಸಾಮಾಜಿಕ ಮಾಧ್ಯಮ ಚಾನೆಲ್‌ಗಳು ಮತ್ತು ಯೂಟ್ಯೂಬರ್‌ಗಳು ತನಿಖೆ ಮುಗಿಯುವ ಮುನ್ನವೇ ತೀರ್ಪು ನೀಡುವಂತೆ ವರ್ತಿಸುತ್ತಿರುವುದು ಗಂಭೀರ ಬೆಳವಣಿಗೆ. ಅಭಿಪ್ರಾಯ ಮತ್ತು ಅಭಿವ್ಯಕ್ತಿಯ ಸ್ವಾತಂತ್ರ್ಯ ಎಂಬ ಹೆಸರಿನಲ್ಲಿ ನಡೆಯುತ್ತಿರುವ ಈ “ಅಭಿವ್ಯಕ್ತಿ ಸ್ವೇಚ್ಛಾಚಾರ” ಖಂಡನಾರ್ಹ. ಇದು ನಂಬಿಕೆಯ ಮೇಲೆ, ದೇವಾಲಯಗಳ ಮೇಲೆ, ನಿಶ್ಚಿತವಾಗಿ ಪರಿಣಾಮ ಬೀರುತ್ತಿ ರುವುದು ಆತಂಕಕಾರಿ ಬೆಳವಣಿಗೆ.

ಶ್ರೀ ಕ್ಷೇತ್ರ ಧರ್ಮಸ್ಥಳ ನೂರಾರು ದೇವಸ್ಥಾನಗಳ ಪುನರುತ್ಥಾನ, ವ್ಯಸನಮುಕ್ತ ಚಳುವಳಿ, ರುದ್ರಭೂಮಿಗಳ ಅಭಿವೃದ್ಧಿ, ಕೆರೆಗಳ ಪುನಶ್ಚೇತನ ಸೇರಿದಂತೆ ಸಾವಿರಾರು ಸಮಾಜಮುಖಿ ಕಾರ್ಯಗಳಲ್ಲಿ ನಿರಂತರವಾಗಿ ತೊಡಗಿಕೊಂಡಿರುವ ನಾಡಿನ ಆಸ್ತಿಯಂತೆ ಬಾಳುತ್ತಿದೆ. ಇಂತಹ ಕ್ಷೇತ್ರವನ್ನು ಕಳಂಕಿತಗೊಳಿಸಲು ನಡೆಯುತ್ತಿರುವ ಷಡ್ಯಂತ್ರಗಳ ವಿರುದ್ಧ ಕಠಿಣ ನಿಲುವು ತಾಳುವುದು ನಮ್ಮೆಲ್ಲರ ಜವಾಬ್ದಾರಿ.

ಆದ ಕಾರಣ ಸರಕಾರ ಈ ಕುರಿತು ಎಸ್ ಐ ಟಿ ತನಿಖೆಯ ಕುರಿತ ಮಧ್ಯಂತರ ವರದಿಯನ್ನು ಬಿಡುಗಡೆ ಮಾಡಬೇಕು, ಹಾಗೂ ಕೋಟ್ಯಂತರ ಹಿಂದೂಗಳ ನಂಬಿಕೆಯ ತೇಜೋವಧೆಗೆ ಮುಂದಾಗಿರುವ ವಿಚಿತ್ರಕಾರಿ ಶಕ್ತಿಗಳ ಕುರಿತು ಉನ್ನತ ಮಟ್ಟದ ತನಿಖೆ ನಡೆಸಬೇಕು. ಈ ಮೂಲಕ ಧರ್ಮಸ್ಥಳ ಮಾತ್ರ ಅಲ್ಲದೆ, ಸನಾತನಿ ಹಿಂದೂಗಳ ಧರ್ಮದ ಆಶ್ರಯವನ್ನೇ ರಕ್ಷಿಸುವ ಕಾರ್ಯಕ್ಕೆ ಮುಂದಾಗಬೇಕು.

ನಾವು ಶ್ರೀ ಮಂಜುನಾಥ ಸ್ವಾಮಿಯ ಆಶೀರ್ವಾದದಲ್ಲಿ ಬೆಳೆದವರು. ಶ್ರದ್ಧೆಯ ಬೆಳಕಿನಲ್ಲಿ ಬದುಕನ್ನು ರೂಪಿಸಿಕೊಂಡವರು. ನಮ್ಮ ನಂಬಿಕೆಯ ಬುನಾದಿಯನ್ನು ಶಿಥಿಲಗೊಳಿಸಲು ಹೊರಟ ದುಷ್ಟ ಶಕ್ತಿಗಳಿಗೆ, ನಾವು ಶಾಂತವಾಗಿ ಕುರುಡಾಗಿ ನಿಲ್ಲದೆ, ನಾವು ಕಾನೂನಿನ ಮೂಲಕ, ಶ್ರದ್ಧೆಯ ಶಕ್ತಿಯಿಂದ, ಧೈರ್ಯದಿಂದ ನಿಲ್ಲಬೇಕಿದೆ.

ಧರ್ಮ ಮತ್ತು ನಂಬಿಕೆಗಳ ರಕ್ಷಣೆಯಲ್ಲಿ ಮೂಕತ್ವವಿಲ್ಲ. ಇದು ಧರ್ಮರಕ್ಷಣೆಗಾಗಿ ಒಂದಾಗುವ ಸಮಯ. ಭಕ್ತಿಯಿಂದ ರೂಪುಗೊಂಡ ಕ್ಷೇತ್ರಕ್ಕೆ ಧಕ್ಕೆಯಾದರೆ, ಅದು ಶ್ರದ್ಧಾ ಲೋಕಕ್ಕೆ ಹಾನಿಯಾದಂತೆ. ನಾವು ಈ ದಿಕ್ಕಿನಲ್ಲಿ ಎಚ್ಚರಿಕೆಯಿಂದ, ಜವಾಬ್ದಾರಿಯುತವಾಗಿ, ಧೈರ್ಯದಿಂದ ಮುಂದೆ ನಡೆಯೋಣ ದುಷ್ಟರ ವಿರುದ್ಧ ಧರ್ಮ ರಕ್ಷಣೆಯ ಪಾಂಚಜನ್ಯ ಮೊಳಗಿಸೋಣ ಎಂದು ಶ್ರೀನಿಧಿ ಹೆಗ್ಡೆ ಅವರು ತಮ್ಮ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Spread the love
Subscribe
Notify of

0 Comments
Inline Feedbacks
View all comments