ಪುತ್ತೂರು: ಕಾರಿಗೆ ಖಾಸಗಿ ಬಸ್ಸು ಡಿಕ್ಕಿ – ಯುವಕ ಬಲಿ

ಪುತ್ತೂರು: ಕಾರಿಗೆ ಖಾಸಗಿ ಬಸ್ಸು ಡಿಕ್ಕಿ – ಯುವಕ ಬಲಿ

ಪುತ್ತೂರು: ಕೆಎಸ್ಸಾರ್ಟಿಸಿ ಬಸ್ಸೊಂದನ್ನು ಓವರ್ಟೇಕ್ ಮಾಡುವ ಭರದಲ್ಲಿ ಖಾಸಗಿ ಬಸ್ಸೊಂದು ಕಾರಿಗೆ ಡಿಕ್ಕಿ ಹೊಡೆದು, ಕಾರು ಸವಾರ ಮೃತಪಟ್ಟ ಘಟನೆ ಮಾಣಿ ಮೈಸೂರು ರಸ್ತೆಯಲ್ಲಿನ ಪುತ್ತೂರು ತಾಲೂಕಿನ ಕಬಕ ಗ್ರಾಮದ ಪೋಳ್ಯ ಎಂಬಲ್ಲಿ ಸೋಮವಾರ ಸಂಜೆ ನಡೆದಿದೆ.

ಪುತ್ತೂರು ತಾಲೂಕಿನ ಬಡಗನ್ನೂರು ಗ್ರಾಮದ ಮುಂಡೋಳೆ ನಿವಾಸಿ ಕುಂಞಿ ಮಾಹಿಮ್ ಎಂಬವರ ಪುತ್ರ ಅಬ್ದುಲ್ ಹಕೀಂ(24) ಮೃತಪಟ್ಟ ಕಾರು ಚಾಲಕ.

ಅಬ್ದುಲ್ ಹಕೀಂ ಅವರು ತನ್ನ ಮಾರುತಿ ಝೆನ್ ಕಾರಿನಲ್ಲಿ ಮಂಗಳೂರಿನಿಂದ ಪುತ್ತೂರಿಗೆ ಆಗಮಿಸುತ್ತಿದ್ದು, ಈ ಸಂದರ್ಭದಲ್ಲಿ ಪೋಳ್ಯ ತಿರುವಿನಲ್ಲಿ ಕೆಎಸ್ಸಾರ್ಟಿಸಿ ಬಸ್ಸನ್ನು ಹಿಂದಿಕ್ಕುವ ಭರದಲ್ಲಿ ಧರಿತ್ರಿ ಎಂಬ ಖಾಸಗಿ ಬಸ್ಸು ಕಾರಿಗೆ ಡಿಕ್ಕಿ ಹೊಡೆದಿತ್ತು. ಘಟನೆಯಿಂದ ಕಾರು ಚಲಾಯಿಸುತ್ತಿದ್ದ ಅಬ್ದುಲ್ ಹಕೀಂ ಅವರಿಗೆ ಗಂಭೀರ ಗಾಯವಾಗಿತ್ತು. ತಕ್ಷಣವೇ ಅವರನ್ನು ಪುತ್ತೂರಿನ ಖಾಸಗಿ ಆಸ್ಪತ್ರೆಗೆ ಸಾಗಿಸಲಾಗಿತ್ತು. ಆದರೆ ಆಸ್ಪತ್ರೆಗೆ ತರುವಷ್ಟರಲ್ಲಿ ಅವರು ಮೃತಪಟ್ಟಿದ್ದರು ಎನ್ನಲಾಗಿದೆ.

ಮೃತರು ತಂದೆ, ತಾಯಿ ಮೂವರು ಸಹೋದರರು ಹಾಗೂ ನಾಲ್ವರು ಸಹೋದರಿಯರನ್ನು ಅಗಲಿದ್ದಾರೆ. ಪುತ್ತೂರು ಸಂಚಾರಿ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.