ಪುತ್ತೂರು: ಹಳ್ಳಿ ಹೋಟೆಲ್‌ನಲ್ಲಿ ಗಂಜಿ ಉಂಡರು ಸಚಿವ ಖಾದರ್ !

Spread the love

ಪುತ್ತೂರು: ಅಪಘಾತದಲ್ಲಿ ಗಾಯಗೊಂಡವರನ್ನು ತನ್ನ ಕಾರಿನಲ್ಲೇ ಆಸ್ಪತ್ರೆಗೆ ಸಾಗಿಸುವ ಮೂಲಕ ಸುದ್ದಿಯಾಗಿದ್ದ ರಾಜ್ಯ ಆರೋಗ್ಯ ಸಚಿವ ಯು.ಟಿ. ಖಾದರ್ ಶುಕ್ರವಾರ ಪುತ್ತೂರಿನ ಆರ್ಯಾಪು ಗ್ರಾಮದ ಸಂಪ್ಯದ ತಗಡು ಶೀಟು ಮತ್ತು ಟಾರ್ಪಾಲ್ ಹೊದಿಸಿದ ಹಳ್ಳಿ ಹೋಟೆಲ್‌ನಲ್ಲಿ ಗಂಜಿ ಊಟ ಮಾಡಿ ಸರಳ ಜೀವನಕ್ಕೆ ಸಾಕ್ಷಿಯಾದರು !

ಮೈಸೂರಿಗೆ ಪಯಣ ಬೆಳೆಸಿದ್ದ ಸಚಿವರು ಶುಕ್ರವಾರ ಮಧ್ಯಾಹ್ನ ಸಂಪ್ಯಕ್ಕೆ ತಲುಪಿದ್ದರು. ಸಂಪ್ಯ ಮಸೀದಿಯಲ್ಲೇ ಶುಕ್ರವಾರದ ನಮಾಜು ಮುಗಿಸಿದ ಸಚಿವರು ಅಲ್ಲೇ ಸಮೀಪದಲ್ಲಿದ್ದ ಹಕೀಂ ಎಂಬವರ ಸಣ್ಣ ಹೋಟೆಲ್‌ಗೆ ತೆರಳಿ ಊಟ ಮಾಡಿದರು. ಜತೆಯಲ್ಲಿ ಅವರ ಆಪ್ತರೂ ಹಳ್ಳಿ ಉಟದ ಸವಿ ಉಂಡರು.

khadar khadar1 khadar2

ಐಷಾರಾಮಿ ಹೋಟೆಲ್‌ಗಳಲ್ಲಿ ಆಹಾರ ಸೇವಿಸುವುದನ್ನು ರೂಢಿಸಿಕೊಳ್ಳುವ ಮಂತ್ರಿಗಳು ಸಾಧಾರಣ ವ್ಯಕ್ತಿಯೊಬ್ಬರು ವ್ಯಾಪಾರ ಮಾಡುತ್ತಿರುವ ಸಣ್ಣ ಕ್ಯಾಂಟೀನ್‌ನಲ್ಲಿ ಊಟ ಮಾಡಿದ್ದು ಸ್ಥಳೀಯರಿಗೆ ಅಚ್ಚರಿಯಾಗಿತ್ತು.

ಸಚಿವರ ಸರಳತೆ ಸಾರ್ವಜನಿಕರ ಮೆಚ್ಚುಗೆಗೆ ಕಾರಣವಾಯಿತು. ಈ ಕುರಿತು ಸಚಿವರನ್ನು ಮಾತನಾಡಿಸಿದಾಗ, ನನಗೆ ಹಸಿವಾಗಿತ್ತು. ಅದಕ್ಕೆ ಇಲ್ಲಿಗೆ ಬಂದೆ. ಹಳ್ಳಿ ಹೋಟೆಲ್ ಊಟ ಚೆನ್ನಾಗಿರುತ್ತದೆ ಮತ್ತು ಹಳ್ಳಿ ಜನತೆ ಅನ್ನದಲ್ಲಿ ಮೋಸ ಮಾಡುವುದಿಲ್ಲ ಎಂದು ಹೇಳಿದರು.


Spread the love