ಪುತ್ರ ವಾತ್ಸಲ್ಯ! ಜಿಲ್ಲೆಗೆ ಕಾಲಿಡದ ಸಚಿವೆಯ ವಿರುದ್ದ ಭುಗಿಲೆದ್ದ ಕೈ ಕಾರ್ಯಕರ್ತರ ಆಕ್ರೋಶ

Spread the love

ಪುತ್ರ ವಾತ್ಸಲ್ಯ! ಜಿಲ್ಲೆಗೆ ಕಾಲಿಡದ ಸಚಿವೆಯ ವಿರುದ್ದ ಭುಗಿಲೆದ್ದ ಕೈ ಕಾರ್ಯಕರ್ತರ ಆಕ್ರೋಶ

ಹೊರ ಜಿಲ್ಲೆಯವರನ್ನು ಉಸ್ತುವಾರಿ ಸಚಿವರನ್ನಾಗಿ ಪಡೆಯುವುದರ ಮೂಲಕ ಮತ್ತೊಮ್ಮೆ ಉಡುಪಿ ಜಿಲ್ಲೆಯ ಜನತೆ ಅನಾಥ ಭಾವನೆ ಹೊಂದುವಂತಾಗಿದೆ. ಹುಮ್ಮಸಿನಿಂದ ಉಡುಪಿ ಜಿಲ್ಲೆಗೆ ಉಸ್ತುವಾರಿ ಸಚಿವರಾಗಿ ಬಂದ ರಾಜ್ಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು ತನ್ನ ಪುತ್ರ ವ್ಯಾಮೋಹದಿಂದ ಲೋಕಸಭಾ ಚುನಾವಣೆಯಲ್ಲೂ ಒಂದು ದಿನವೂ ಕೂಡ ಜಿಲ್ಲೆಯತ್ತ ಮುಖ ಮಾಡದೆ ಇರುವುದು ಕಾರ್ಯಕರ್ತರ ಆಕ್ರೋಶಕ್ಕೆ ಕಾರಣವಾಗಿದ್ದು, ಶೋಭಾ ಕರಂದ್ಲಾಜೆ ಮತ್ತೆ ಲಕ್ಷ್ಮೀ ಹೆಬ್ಬಾಳ್ಕರ್ ಅವರನ್ನೂ ಕೂಡ ಬೆಳಗಾವಿಗೆ ಗೋ ಬ್ಯಾಕ್ ಎನಿಸುಕೊಳ್ಳುವಷ್ಟು ಆಕ್ರೋಶ ಹೊರ ಹಾಕಿರುವುದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ

ಉಡುಪಿ ಜಿಲ್ಲೆ ಹೆಚ್ಚಿನ ಸಲ ‘ಹೊರಗಡೆಯ’ ಉಸ್ತುವಾರಿ ಸಚಿವರನ್ನೇ ಕಂಡ ಜಿಲ್ಲೆ. ಈಗ ಇರುವ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಕೂಡ ಹೊರ ಜಿಲ್ಲೆಯವರೇ. ಪ್ರತೀ ಬಾರಿ ಹೊರ ಜಿಲ್ಲೆಯವರು ಇಲ್ಲಿ ಉಸ್ತುವಾರಿಯಾಗಲು ಕಾರಣ ,ಕರಾವಳಿ ಬಿಜೆಪಿಯ ಭದ್ರಕೋಟೆ! ಅಂದರೆ,ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ರಚನೆ ಆದಾಗಲೆಲ್ಲ ಇಲ್ಲಿ ಗೆದ್ದ ಶಾಸಕರು ಬಿಜೆಪಿಯವರೇ.ಹೀಗಾಗಿ ಅನಿವಾರ್ಯವಾಗಿ ಇಲ್ಲಿ ಹೊರ ಜಿಲ್ಲೆಯವರನ್ನು ಉಸ್ತುವಾರಿ ಮಾಡಬೇಕಾದ ಸಂಕಟ ಕಾಂಗ್ರೆಸ್ ಪಕ್ಷದ್ದು.

ಲಕ್ಷ್ಮೀ ಹೆಬ್ಬಾಳ್ಕರ್ ಉಡುಪಿ ಜಿಲ್ಲೆಗೆ ಉಸ್ತುವಾರಿ ಸಚಿವೆಯಾಗಿ ಆಯ್ಕೆ ಆಗುತ್ತಿದ್ದಂತೆ ಉಡುಪಿ ಜಿಲ್ಲೆಯ ಕಾಂಗ್ರೆಸ್ ಕಾರ್ಯಕರ್ತರಲ್ಲಿ ಒಂದು ಹುಮ್ಮಸ್ಸಿನ ವಾತಾವರಣ ಸೃಷ್ಟಿಯಾಗಿದ್ದು ನಿಜ.ಆದರೆ ಈ ಹುಮ್ಮಸ್ಸು ಬಹುಕಾಲ ಉಳಿಯಲಿಲ್ಲ.ಬೆಳಗಾವಿಯಲ್ಲಿರುವ ಸಚಿವೆ ಎರಡು ವಾರಕ್ಕೊಮ್ಮೆ ,ತಿಂಗಳಿಗೊಮ್ಮೆ ಉಡುಪಿಗೆ ‘ಪ್ರವಾಸ’ ಮಾಡುತ್ತಿದ್ದರು. ಆದರೆ ಲೋಕಸಭೆ ಚುನಾವಣೆ ಘೋಷಣೆಯಾದ ಬಳಿಕ ಹೆಬ್ಬಾಳ್ಕರ್ ಇಲ್ಲಿಗೆ ಒಮ್ಮೆಯೂ “ಪ್ರವಾಸ” ಮಾಡಿಲ್ಲ .ಕಾರಣ ,ಪುತ್ರನಿಗೆ ಲೋಕಸಭೆ ಟಿಕೆಟ್ ಸಿಕ್ಕಿದ್ದು. ಪುತ್ರ ಮೃಣಾಲ್ ಗೆ ಟಿಕೆಟ್ ಸಿಕ್ಕಿದ ಬಳಿಕ ಉಸ್ತುವಾರಿ ಸಚಿವೆ ಲಕ್ಷ್ಮೀ ಇತ್ತ ಪಕ್ಷದ ಕಾರ್ಯಕರ್ತರ ಕೈಗೂ ಸಿಕ್ಕಿಲ್ಲ ,ಜಿಲ್ಲೆಯ ಜನರ ಕೈಗೂ ಸಿಕ್ಕಿಲ್ಲ.

ಲೋಕಸಭೆ ಚುನಾವಣೆ ಸಂದರ್ಭ ಪುತ್ರನ ಪರ ಇಡೀ ಬೆಳಗಾವಿ ಕ್ಷೇತ್ರ ಸುತ್ತಿದ ಸಚಿವೆ ,ಇತ್ತಕಡೆ ಒಮ್ಮೆಯೂ ಬಂದಿಲ್ಲ. ಸರಿ , ಚುನಾವಣೆ ಮುಗಿದ ಮೇಲೂ ಫಲಿತಾಂಶಕ್ಕೆ ಒಂದು ತಿಂಗಳು ಕಾಲಾವಕಾಶ ಇತ್ತು.ಆ ಸಂದರ್ಭದಲ್ಲೂ ಸಚಿವೆ ಇತ್ತ ತಲೆ ಹಾಕಿಯೂ ಇಲ್ಲ. ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾದರೂ ಸಹ ಅದರ ಕುರಿತು ಕನಿಷ್ಠ ಒಂದು ಸಭೆ ನಡೆಸುವ ಗೋಜಿಗೂ ಕೂಡ ಸಚಿವೆ ಹೋಗದಿರುವುದು ಜಿಲ್ಲೆಯನ್ನು ಸಂಪೂರ್ಣ ನಿರ್ಲಕ್ಷ್ಯ ವಹಿಸಿದ್ದು ಜಿಲ್ಲಾ ಉಸ್ತುವಾರಿಯನ್ನು ಬದಲಿಸಬೇಕು ಎಂಬ ಆಕ್ರೋಶ ಹೊರ ಹಾಕುತ್ತಿದ್ದಾರೆ.

ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ ಜಯಪ್ರಕಾಶ್ ಹೆಗ್ಡೆ ಪರ ಮತ ಯಾಚಿಸಲೂ ಸಚಿವೆ ಬಂದಿಲ್ಲ.ಕಾರ್ಯಕರ್ತರನ್ನು ಭೇಟಿಯಾಗಿ ಹುರಿದುಂಬಿಸಲೂ ಬಂದಿಲ್ಲ.ಇದಕ್ಕೆಲ್ಲ ಕಾರಣ , ಸಚಿವೆಯ ಪುತ್ರ ವಾತ್ಸಲ್ಯ ಕಾರಣ ಎಂದು ಕೈ ಕಾರ್ಯಕರ್ತರು ಮಾತನಾಡತೊಡಗಿದ್ದಾರೆ.

ನಿನ್ನೆ ಬಂದ ಫಲಿತಾಂಶದಲ್ಲಿ ಸಚಿವೆಯ ಪುತ್ರ ಸೋಲನುಭವಿಸಿದ್ದಾರೆ.ಇನ್ನು ಮುಂದಾದರೂ ಅವರು ಜಿಲ್ಲೆಗೆ ಬಂದು ಜನರ ಅಹವಾಲು ಮತ್ತು ಪಕ್ಷದ ಕಾರ್ಯಕರ್ತರ ಮನವಿ ಕೇಳಿಸಿಕೊಳ್ಳುತ್ತಾರೋ ಕಾದು ನೋಡಬೇಕು.


Spread the love