ಪೆರ್ಡೂರಿನ ಕಾಫಿ ತೋಟದಲ್ಲಿ ಮುಸ್ಲಿಂ ದನದ ವ್ಯಾಪಾರಿ ಶವವಾಗಿ ಪತ್ತೆ; ಕೊಲೆ ಶಂಕೆ

Spread the love

ಪೆರ್ಡೂರಿನ ಕಾಫಿ ತೋಟದಲ್ಲಿ ಮುಸ್ಲಿಂ ದನದ ವ್ಯಾಪಾರಿ ಶವವಾಗಿ ಪತ್ತೆ; ಕೊಲೆ ಶಂಕೆ

ಉಡುಪಿ: ಮುಸ್ಲಿಂ ದನದ ವ್ಯಾಪಾರಿಯೊಬ್ಬ ಕಾಫಿ ತೋಟದಲ್ಲಿ ಶವವಾಗಿ ಪತ್ತೆಯಾಗಿದ್ದು, ದನ ಸಾಗಾಟದ ವೇಳೆ ಹಿಂದೂ ಸಂಘಟನೆ ಕಾರ್ಯಕರ್ತರು ಪೊಲೀಸರ ಜೊತೆಗೂಡಿ ಕೊಲೆ ಮಾಡಿದ್ದಾರೆ ಎನ್ನುವ ಶಂಕೆ ಮೃತರ ಕುಟುಂಬದಿಂದ ವ್ಯಕ್ತವಾಗಿದೆ.

ಉಡುಪಿ ಜಿಲ್ಲೆಯ ಪೆರ್ಡೂರಿನ ಕಾಫಿ ತೋಟದಲ್ಲಿ ಈ ಘಟನೆ ನಡೆದಿದೆ. ಮೃತ ಪಟ್ಟವರನ್ನು ದಕ್ಷಿಣ ಕನ್ನಡ ಜಿಲ್ಲೆಯ ಜೋಕಟ್ಟೆ ನಿವಾಸಿ ಹುಸೇನಬ್ಬ (62) ಎಂದು ಗುರುತಿಸಲಾಗಿದೆ. ಇಂದು ಮುಂಜಾನೆ ಸುಮಾರು 3 ರಿಂದ 4 ಗಂಟೆ ಸುಮಾರಿಗೆ ದನ ಸಾಗಾಟ ವೇಳೆಯಲ್ಲಿ ಪೋಲೀಸರು ವಾಹನ ಅಡ್ಡಗಟ್ಟಿದ ಸಂದರ್ಭ ತಪ್ಪಿಸಿಕೊಂಡಿದ್ದ ಹುಸೇನಬ್ಬ ಇಂದು ಬೆಳಿಗ್ಗೆ 9 ಗಂಟೆ ವೇಳೆ ಶವವಾಗಿ ಪತ್ತೆಯಾಗಿದ್ದರು.

ದಕ್ಷಿಣ ಕನ್ನಡ ಜಿಲ್ಲೆ ಮೂಲದ ಜೋಕಟ್ಟೆ ನಿವಾಸಿಯಾಗಿರುವ ಹುಸೇನಬ್ಬ ಕಳೆದ 35 ವರ್ಷಗಳಿಂದ ಹಸುವಿನ ವ್ಯಾಪಾರ ಮಾಡುತ್ತಿದ್ದರು. ಕಳೆದ ರಾತ್ರಿ ಉಡುಪಿಯ ಪೆರ್ಡೂರು ಸಮೀಪ ಬರುತ್ತಿರುವಾಗ ಪೊಲೀಸರು ವಾಹನವನ್ನು ಅಡ್ಡಗಟ್ಟಿದ್ದಾರೆ. ಹಸು ಸಾಗಾಟದ ವಾಹನದಲ್ಲಿದ್ದ ನಾಲ್ಕೈದು ಮಂದಿ ದಿಕ್ಕಾಪಾಲಾಗಿ ಓಡಿದ್ದಾರೆ. ಪೊಲೀಸರು ವಾಹನವನ್ನು ಕಳೆದ ರಾತ್ರಿಯೇ ವಶಪಡಿಸಿಕೊಂಡಿದ್ದಾರೆ. ರಾತ್ರಿ ತಪ್ಪಿಸಿಕೊಂಡು ಓಡಿ ಹೋಗಿದ್ದ ಹುಸೇನ್​​ ಮೃತದೇಹ ಬೆಳಗ್ಗೆ ಕಾಫಿ ತೋಟದಲ್ಲಿ ಪತ್ತೆಯಾಗಿದೆ. ಹಿರಿಯಡ್ಕ ಠಾಣೆಯಲ್ಲಿ ಅಸಹಜ ಸಾವಿನ ಪ್ರಕರಣ ದಾಖಲಾಗಿದೆ.

ಹುಸೇನಬ್ಬನ ಮನೆಯವರು ಸಾವಿನ ಬಗ್ಗೆ ಸಂಶಯ ವ್ಯಕ್ತಪಡಿಸಿದ್ದು, ದುಷ್ಕರ್ಮಿಗಳು ಕೊಲೆ ಮಾಡಿರಬಹುದು ಎಂದು ಗಂಭೀರ ಆರೋಪ ಮಾಡಿದ್ದಾರೆ. ಕಳೆದ ರಾತ್ರಿ ಪೊಲೀಸರ ಜೊತೆಗೆ ಹಿಂದೂ ಸಂಘಟನೆಗಳ ಕಾರ್ಯಕರ್ತರಿದ್ದರೆಂಬ ಸಂಶಯವನ್ನು ವ್ಯಕ್ತಗೊಳಿಸಿದ್ದಾರೆ. ಹುಸೇನಬ್ಬ ಮೃತದೇಹವನ್ನು ಮಣಿಪಾಲ ಶವಾಗಾರಕ್ಕೆ ರವಾನಿಸಲಾಗಿದೆ. ಹೃದಯಾಘಾತದಿಂದ ಸತ್ತಿರಬಹುದೆಂಬ ಶಂಕೆಯೂ ಇದೆ. ಮೃತರು ಹೃದಯದ ಸಮಸ್ಯೆ ಯಿಂದ ಬಳಲುತ್ತಿದ್ದರು ಎನ್ನಲಾಗಿದೆ. ಶವಪರೀಕ್ಷಾ ವರದಿ ಬಂದ ನಂತರ ಅನುಮಾನಾಸ್ಪದ ಸಾವಿಗೆ ಸರಿಯಾದ ಕಾರಣ ತಿಳಿಯಬಹುದು. ದನ ಸಾಗಾಟಕ್ಕೆ ಸಂಬಂಧ ಪಟ್ಟಂತೆ ಈ ಘಟನೆ ನಡೆದಿದ್ದು ಹುಸೇನಬ್ಬ ಬಲಿಯಾಗಿದ್ದಾರೆ. ಆದರೆ ಸಹಜ ಸಾವೇ ಅಥವಾ ಕೊಲೆಯೇ ಎಂಬುದು ಇನ್ನಷ್ಟೇ ತಿಳಿದು ಬರಬೇಕಿದೆ.


Spread the love