ನವೀಕೃತ ಉಡುಪಿ ಸ್ವಾಗತ ಗೋಪುರದ ಲೋಕಾರ್ಪಣೆ

Spread the love

ನವೀಕೃತ ಉಡುಪಿ ಸ್ವಾಗತ ಗೋಪುರದ ಲೋಕಾರ್ಪಣೆ

ಉಡುಪಿ: ಉಡುಪಿಗೆ ಆಗಮಿಸುವ ಭಕ್ತರನ್ನು ಸ್ವಾಗತಿಸುವ ಅತ್ಯಾಕರ್ಷಕವಾದ ಕಿನ್ನಿಮುಲ್ಕಿಯ ಬಳಿ ಇರುವ ಸ್ವಾಗತಗೋಪುರವು ಇದೀಗ ರಜತಮಹೋತ್ಸವದ ಸಂಭ್ರಮದಲ್ಲಿದೆ. ಶ್ರೀಪುತ್ತಿಗೆ ಮಠಾಧೀಶರಾದ ಪರಮಪೂಜ್ಯ ಶ್ರೀ ಶ್ರೀಸುಗುಣೇಂದ್ರತೀರ್ಥಶ್ರೀಪಾದರು ತಮ್ಮ ದ್ವಿತೀಯ ಪರ್ಯಾಯದ ಸಮಯದಲ್ಲಿ ತಮ್ಮ ಪರಮಗುರುಗಳಾದ ಶತಾಯುಷಿ ಶ್ರೀ ಶ್ರೀ ಸುಧೀಂದ್ರತೀರ್ಥ ಶ್ರೀಪಾದರ ಸಂಸ್ಮರಣೆಯಾಗಿ ದಿನಾಂಕ 07.03.1993 ರಂದು ಈ ಸ್ವಾಗತಗೋಪುರವನ್ನು ಅಂದಿನ ಮುಖ್ಯಮಂತ್ರಿಗಳಾಗಿದ್ದ ವೀರಪ್ಪ ಮೋಯಿಲಿ ಇವರಿಂದ ಲೋಕಾರ್ಪಣೆಗೊಳಿಸಿದ್ದರು.

ಇದೀಗ ಚತುಷ್ಪಥ ಕಾರ್ಯದ ಹಿನ್ನಲೆಯಲ್ಲಿ ಮಲಿನವಾಗಿದ್ದ ಈ ಸ್ವಾಗತಗೋಪುರವನ್ನು ಉಡುಪಿಯ ಸಿಂಡಿಕೇಟ್ ಬ್ಯಾಂಕಿನ ಪ್ರಾಯೋಜಕತ್ವದಲ್ಲಿ ಪುನಃ ಶೃಂಗರಿಸಲಾಗಿದೆ. ಇದನ್ನು ಪರಮಪೂಜ್ಯ ಶ್ರೀ ಶ್ರೀ ಸುಗುಣೇಂದ್ರತೀರ್ಥಶ್ರೀಪಾದರು ಲೋಕಾರ್ಪಣೆಗೊಳಿಸಿ ಅನುಗ್ರಹ ಸಂದೇಶವನ್ನು ನೀಡಿದರು.

ಕಾರ್ಯಕ್ರಮದಲ್ಲಿ ನಗರಸಭೆಯ ಸದಸ್ಯರಾದ ಅಮೃತಾ ಕೃಷ್ಣಮೂರ್ತಿ, ಸಿಂಡಿಕೇಟ್ ಬ್ಯಾಂಕಿನ ಜಿ.ಎಮ್ ಆಗಿರುವ ಭಾಸ್ಕರ ಹಂದೆ, ಹಿರಿಯ ಇಂಜಿನಿಯರ್ ಆಗಿರುವ ರಮೇಶ್ ರಾಯರು, ಕನ್ನರ್ಪಾಡಿ ದೇವಸ್ಥಾನದ ಆಡಳಿತಾಧಿಕಾರಿ ಕೃಷ್ಣಮೂರ್ತಿ, ಸಂತೋಷ್ ಶೆಟ್ಟಿ, ದಿವಾನರಾದ ಮುರಳೀಧರಾಚಾರ್ಯ ಮತ್ತು ನಾಗರಾಜಾಚಾರ್ಯರು ಮೊದಲಾದವರು ಉಪಸ್ಥಿತರಿದ್ದರು. ಈ ಸಭಾ ಕಾರ್ಯಕ್ರಮದಲ್ಲಿ ವಿದ್ವಾನ್ ಬಿ.ಗೋಪಾಲಾಚಾರ್ಯರು ಸ್ವಾಗತಿಸಿ ಕಾರ್ಯಕ್ರಮವನ್ನು ನಿರೂಪಿಸಿದರು.


Spread the love