ಪೇಜಾವರ ಶ್ರೀಗಳ ಅಪಮಾನದ ಹಿಂದೆ ಕಾಂಗ್ರೆಸ್ ಕೈವಾಡ: ಯಶ್ ಪಾಲ್ ಸುವರ್ಣ

Spread the love

ಪೇಜಾವರ ಶ್ರೀಗಳ ಅಪಮಾನದ ಹಿಂದೆ ಕಾಂಗ್ರೆಸ್ ಕೈವಾಡ: ಯಶ್ ಪಾಲ್ ಸುವರ್ಣ

ಉಡುಪಿ: ಪೇಜಾವರ ಶ್ರೀ ದೇಶ ಬಿಟ್ಟು ತೊಲಗಲಿ ಎಂದು ಸಾಹಿತ್ಯ ಸಮ್ಮೆಳನದಲ್ಲಿ ಗದ್ದಲವೆಬ್ಬಿಸಿದ ಘಟನೆಯ ಹಿಂದೆ ರಾಜ್ಯ ಸರಕಾರ ಮತ್ತು ಬುದ್ದಿಜೀವಿಗಳ ಕೈವಾಡವಿದೆ. ಧರ್ಮ ಸಂಸತ್ ಕಾರ್ಯಕ್ರಮಕ್ಕೆ ದೇಶಾದ್ಯಂತ ಸಿಕ್ಕಿರುವ ಅಭೂತಪೂರ್ವ ಜನಬೆಂಬಲವನ್ನು ಅರಗಿಸಿಕೊಳ್ಳಲಾಗದೆ ಕಾಂಗ್ರೇಸಿಗರು ಇಂಥ ವಾಮ ಮಾರ್ಗ ಅನುಸರಿಸುತ್ತಿದ್ದಾರೆ. ರಾಜಕೀಯ ಉದ್ದೇಶಗಳಿಗಾಗಿ ವಿನಾ ಕಾರಣ ಪೆಜಾವರ ಶ್ರೀಗಳನ್ನು ಅಪಮಾನಿಸುವ ಕಾರ್ಯ ನಡೆದರೆ ಮುಂದೆ ಎದುರಾಗ ಬಹುದಾದ ಅನಾಹುತಗಳಿಗೆ ರಾಜ್ಯ ಸರಕಾರವೇ ನೇರ ಹೊಣೆಯಾಗಲಿದೆ ಎಂದು ಬಿಜೆಪಿ ಪ್ರಧಾನ ಕಾರ್ಯದರ್ಶಿ ಯಶ್ ಪಾಲ್ ಸುವರ್ಣ ಅವರು ಎಚ್ಚರಿಸಿದ್ದಾರೆ.

ಶ್ರೀಗಳು ಅಲ್ಪ ಸಂಖ್ಯಾತ ಮತ್ತು ಬಹು ಸಂಖ್ಯಾತರ ನಡುವೆ ಸರಕಾರಗಳು ನಡೆಸುತ್ತಾ ಬಂದಿರುವ ತಾರತಮ್ಯಗಳನ್ನು ಖಂಡಿಸಿದ್ದಾರೆ ಹೊರತು ಅವರು ಎಲ್ಲಿಯೂ ದಲಿತರ ಬಗ್ಗೆ ಅಂಬೇಡ್ಕರ್ ಬಗ್ಗೆ ಮಾತನಾಡಿಲ್ಲ. 80ರ ದಶಕದಲ್ಲಿ ಸಾಕಷ್ಟು ವಿರೋಧವನ್ನು ಎದುರಿಸಿ ದಲಿತರ ಕೇರಿಗೆ ಪಾದಯಾತ್ರೆ ನಡೆಸಿ ಅಸ್ಪೃಶ್ಯತೆ ವಿರುದ್ಧ ಜಾಗೃತಿ ಮೂಡಿಸಿದವರು ಪೇಜಾವರಶ್ರೀಗಳು. ದಲಿತರ ಬಗ್ಗೆ ಶ್ರೀಗಳಿಗಿರುವಷ್ಟು ಕಾಳಜಿ ಈ ಬುದ್ದಿಜೀವಿಗಳಿಗೆ ಇರುತ್ತಿದ್ದರೆ ಸಮಾಜದ ಚಿತ್ರಣ ಸಂಪೂರ್ಣ ಬದಲಾಗುತ್ತಿತ್ತು. ಆಯಕಟ್ಟಿನ ಸ್ಥಳಗಳಲ್ಲಿ ಕುಳಿತುಕೊಂಡು ಜಾತಿ ಜಾತಿಗಳ ನಡುವೆ ವಿಷಬೀಜವನ್ನು ಬಿತ್ತಿ ಹಿಂದೂ ಸಮಾಜವನ್ನು ಒಡೆಯುವ ಕಾರ್ಯವನ್ನು ತಥಾಕಥಿತ ಪ್ರಗತಿಪರರು ಮಾಡುತ್ತಿದ್ದಾರೆ. ಇವರಿಗೆ ಕಾಂಗ್ರೆಸ್ ಸರಕಾರದ ಕೃಪಾ ಕಟಾಕ್ಷವಿದೆ.

ಸಾಹಿತ್ಯ ಸಮ್ಮೇಳನ ಕಾಂಗ್ರೆಸ್ ಸಮ್ಮೇಳನವಾಗಿ ಬದಲಾಗಿದೆ. ಸಮ್ಮೇಳನಾದ್ಯಕ್ಷರಾದ ಪ್ರೊ ಚಂದ್ರ ಶೇಖರ ಪಾಟೀಲ್ ಅವರು ಕಾಂಗ್ರೆಸ್ ಬೂತ್ ಏಜೆಂಟ್ ರೀತಿ ವರ್ತಿಸುತ್ತಿದ್ದಾರೆ. ಇವರ ಕುಮ್ಮಕ್ಕಿನಿಂದಾಗಿ ಅಲ್ಲಲ್ಲಿ ಪ್ರತಿಭಟನೆಗಳು ನಡೆಯುತ್ತಿವೆ. ಶ್ರೀಗಳ ಭಾವಚಿತ್ರವನ್ನು ಕಾಲಡಿಗೆ ಹಾಕಿ ತುಳಿದು ಅಪಮಾನಿಸಲಾಗುತ್ತಿದೆ. ಕನಿಷ್ಟ ಶ್ರೀಗಳ ಹಿರಿತನಕ್ಕಾದರೂ ಗೌರವ ನೀಡುವ ಸಂಸ್ಕಾರವನ್ನು ಈ ಪ್ರಗತಿಪರರು ಬೆಳೆಸಿಕೊಳ್ಳಬೇಕು. ತಮ್ಮ ತೇವಲು ತೀರಿಸಿಕೊಳ್ಳಲು ಪೇಜಾವರ ಶ್ರೀಗಳ ಹೆಸರನ್ನು ಬಳಸಲು ಯತ್ನಿಸಿದರೆ ಉಡುಪಿಯ ಜನತೆ ಇನ್ನು ಮುಂದೆ ಸಹಿಸಿಕೊಳ್ಳುವುದಿಲ್ಲ. ರಾಜ್ಯ ಸರಕಾರದ ಹಿಂದೂ ವಿರೋಧಿ ಧೋರಣೆಗೆ ಜನರು ಸದ್ಯದಲ್ಲೇ ಉತ್ತರಿಸಲಿದ್ದು ಆ ಬಳಿಕ ಕಾಂಗ್ರೆಸ್ ಗಂಜಿಕೇಂದ್ರದ ಗಿರಾಕಿಗಳಾಗಿರುವ ಬುದ್ದಿ ಜೀವಿಗಳಿಗೆ ದೇಶ ಬಿಟ್ಟು ತೊಲಗುವುದು ಅನಿವಾರ್ಯವಾಗಲಿದೆ. ಪೇಜಾವರ ಶ್ರೀಗಳನ್ನು ದೇಶ ಬಿಟ್ಟು ತೊಲಗುವಂತೆ ಆಗ್ರಹಿಸುವವರು ಮೊದಲು ತಮ್ಮ ಅಸ್ತಿತ್ವದ ಬಗ್ಗೆ ಆಲೋಚಿಸಲಿ ಎಂದು ಅವರು   ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Spread the love