ಪೋಲಿಸ್,ಪತ್ರಕರ್ತರ ಜಂಟಿ ಸಹಯೋಗದಲ್ಲಿ ಎರಡು ತಿಂಗಳ ಮಾದಕ ವ್ಯಸನದ ವಿರುದ್ದ ಮಾಸಚಾರಣೆ ಕಾರ್ಯಕ್ರಮ

Spread the love

ಪೋಲಿಸ್,ಪತ್ರಕರ್ತರ ಜಂಟಿ ಸಹಯೋಗದಲ್ಲಿ ಎರಡು ತಿಂಗಳ ಮಾದಕ ವ್ಯಸನದ ವಿರುದ್ದ ಮಾಸಚಾರಣೆ ಕಾರ್ಯಕ್ರಮ

ಉಡುಪಿ: ಉಡುಪಿ ಜಿಲ್ಲಾ ಪೋಲಿಸ್, ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಮತ್ತು ಉಡುಪಿ ಪ್ರೆಸ್ ಕ್ಲಬ್ ಜಂಟಿ ಸಹಯೋಗದಲ್ಲಿ ವಿದ್ಯಾರ್ಥಿಗಳಲ್ಲಿ ಮಾದಕ ವ್ಯಸನದ ವಿರುದ್ದ ಮಾಸಚಾರಣೆಯನ್ನು ಮಾಡುವುದರ ಮೂಲಕ ಬೃಹತ್ ಮಟ್ಟದಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸಿಲಾಗಿದೆ.

ರಾಜ್ಯದಾದ್ಯಂತ ಯುವ ಪೀಳಿಗೆ ಮಾದಕ ವ್ಯಸನಕ್ಕೆ ಬಲಿಯಾಗುತ್ತಿರುವ ಕಳವಳ ಒಂದೆಡೆಯಾದರೆ ವಿದ್ಯಾರ್ಥಿ ಸಮುದಾಯ ವ್ಯಸನಕ್ಕೆ ಬಲಿಯಾಗದಂತೆ ಹಲವಾರು ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದ್ದು, ಮಾದಕ ವ್ಯಸನದ ಕುರಿತು ಜಾಗೃತಿ ಮೂಡಿಸುವಲ್ಲಿ ಮಾಧ್ಯಮ ಮತ್ತು ಪೋಲಿಸ್ ಇಲಾಖೆಯ ಜವಾಬ್ದಾರಿಯ ಕುರಿತು ಖ್ಯಾತ ಮನೋರೋಗ ತಜ್ಞ ಡಾ| ಪಿ.ವಿ.ಭಂಡಾರಿ ಅವರೊಂದಿಗೆ ಸಂವಾದ ಕಾರ್ಯಕ್ರಮದೊಂದಿಗೆ ಎರಡು ತಿಂಗಳುಗಳ ಜಾಗೃತಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುತ್ತದೆ.

ಉಡುಪಿ ಜಿಲ್ಲಾ ವ್ಯಾಪ್ತಿಯಲ್ಲಿ ಸುಮಾರು 11 ವಿವಿಧ ರೀತಿಯ ಕಾರ್ಯಕ್ರಮಗಳನ್ನು ಆಯೋಜಿಸಿಲಾಗಿದ್ದು ಈ ಮೂಲಕ ವಿದ್ಯಾರ್ಥಿ ಸಮುದಾಯವನ್ನು ಸಂಪೂರ್ಣವಾಗಿ ತೊಡಗಿಸಿಕೊಂಡು ಜಾಗೃತಿ ಮೂಡಿಸುವುದು ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿದೆ.

ಜಾಗೃತಿ ಕಾರ್ಯಕ್ರಮದ ಪ್ರಯುಕ್ತ ವಿದ್ಯಾರ್ಥಿಗಳ ವಾಕಾಥಾನ್, ಮ್ಯಾರಾಥನ್, ಸೈಕ್ಲಾಥಾನ್ ಆಯೋಜನೆ, ಮಲ್ಪೆ ಕಡಲ ತೀರದಲ್ಲಿ ಕಾರ್ಟೂನ್ ಹಬ್ಬ, ಮರಳು ಶಿಲ್ಪ ರಚನೆ, ಮಾದಕ ವ್ಯಸನದಿಂದ ಮುಕ್ತರಾದವರೊಂದಿಗೆ ಸಂವಾದ ಆಯೋಜನೆ, ವಿದ್ಯಾರ್ಥಿಗಳಿಗೆ ಮಾದಕ ವ್ಯಸನದ ದುಷ್ಪರಿಣಾಮ ಮತ್ತು ಕುಟುಂಬದವರು ಅನುಭವಿಸುವ ನೋವಿನ ಕುರಿತು ಮಾಹಿತಿ ನೀಡುವ ಚಿತ್ರ ಪ್ರದರ್ಶನ, ಮಾಲ್, ಸಿನೆಮಾ ಚಿತ್ರಮಂದಿರ, ಮಲ್ಟಿಪ್ಲೆಕ್ಸ್‍ಗಳಲ್ಲಿ ಮಾದಕ ವ್ಯಸನ ವಿರೋಧಿ ಜಾಗೃತಿ ಸಹಿ ಸಂಗ್ರಹ ಅಭಿಯಾನ, ವಿದ್ಯಾರ್ಥಿಗಳಿಗೆ ಮಾದಕ ವ್ಯಸನದ ದುಷ್ಪರಿಣಾಮದ ಕುರಿತು ಕಿರುಚಿತ್ರ ರಚನೆ ಸ್ಪರ್ಧೆ, ಕೃಷ್ಣಾ ಜನ್ಮಾಷ್ಟಮಿ ಪ್ರಯುಕ್ತ ವ್ಯಸನದ ಪರಿಣಾಮವನ್ನು ಬಿಂಬಿಸುವ ವಿಶೇಷ ವೇಷ, ಪತ್ರಿಕೋದ್ಯಮ ವಿದ್ಯಾರ್ಥಿಗಳಿಗೆ ಮಾದಕ ವ್ಯಸನ ಕುರಿತು ವಿವಿಧ ಲೇಖನಗಳನ್ನೊಳಗೊಂಡ ಪತ್ರಿಕೆ ರಚನೆ ಸ್ಪರ್ಧೆ ಹಾಗೂ ಇತರ ಹಲವಾರು ಜನಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಈ ಮೂಲಕ ವಿದ್ಯಾರ್ಥಿಗಳಿಗೆ ಗರಿಷ್ಟ ಮಟ್ಟದಲ್ಲಿ ಜಾಗೃತಿ ಮೂಡಿಸುವ ಉದ್ದೇಶ ಕಾರ್ಯಕ್ರಮದ್ದಾಗಿದೆ ಎಂದು ಸಂಘಟಕರು ಪ್ರಕಟಣೆಯಲ್ಲಿ ತಿಳಿಸದ್ದಾರೆ.

ಅಗಸ್ಟ್ 11 ಶನಿವಾರದಂದು ಕಾರ್ಯಕ್ರಮಕ್ಕೆ ಚಾಲನೆ
ಮಾದಕ ವ್ಯಸನದ ಕುರಿತು ಜಾಗೃತಿ ಮೂಡಿಸುವಲ್ಲಿ ಮಾಧ್ಯಮ ಮತ್ತು ಪೋಲಿಸ್ ಇಲಾಖೆಯ ಜವಾಬ್ದಾರಿಯ ಕುರಿತು ಖ್ಯಾತ ಮನೋರೋಗ ತಜ್ಞ ಡಾ| ಪಿ.ವಿ.ಭಂಡಾರಿ ಅವರೊಂದಿಗೆ ಸಂವಾದ ಕಾರ್ಯಕ್ರಮದೊಂದಿಗೆ ಎರಡು ತಿಂಗಳುಗಳ ಜಾಗೃತಿ ಕಾರ್ಯಕ್ರಮಕ್ಕೆ ಚಾಲನೆಯನ್ನು ಉಡುಪಿ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಯವರ ಕಚೇರಿಯಲ್ಲಿ ಅಗಸ್ಟ್ 11 ರಂದು ಶನಿವಾರ ಬೆಳಿಗ್ಗೆ 9ಗಂಟೆಗೆ ನೀಡಲಾಗುವುದು.

ಇದೇ ಕಾರ್ಯಕ್ರಮದಲ್ಲಿ ಅರಿವು ಕಾರ್ಯಕ್ರಮವನ್ನು ಸಾಮಾಜಿಕ ಜಾಲತಾಣಗಳ ಮೂಲಕ ಪ್ರಚಾರಪಡಿಸುವ ನಿಟ್ಟಿನಲ್ಲಿ ಪ್ರತ್ಯೇಕ ಫೇಸ್ ಬುಕ್ ಪೇಜಿಗೆ ಚಾಲನೆ ನೀಡಲಾಗುವುದು. ಅಲ್ಲದೆ ವಿದ್ಯಾರ್ಥಿಗಳಿಗೆ ಮಾದಕ ವ್ಯಸನದ ದುಷ್ಪರಿಣಾಮ ಮತ್ತು ಕುಟುಂಬದವರು ಅನುಭವಿಸುವ ನೋವಿನ ಕುರಿತು ಮಾಹಿತಿ ನೀಡುವ ಚಿತ್ರ ಪ್ರದರ್ಶನಕ್ಕೆ ಮತ್ತು ವಿದ್ಯಾರ್ಥಿಗಳಿಗೆ ಮಾದಕ ವ್ಯಸನದ ದುಷ್ಪರಿಣಾಮದ ಕುರಿತು ಕಿರುಚಿತ್ರ ರಚನೆ ಸ್ಪರ್ಧೆಗೆ ಚಾಲನೆ ನೀಡಲಾಗುತ್ತದೆ.


Spread the love