ಪ್ರಧಾನಿ ನರೇಂದ್ರ ಮೋದಿ ಮಂಗಳೂರು ಭೇಟಿ ಹಿನ್ನೆಲೆ – ಮದ್ಯ ಮಾರಾಟ ನಿಷೇಧ

ಪ್ರಧಾನಿ ನರೇಂದ್ರ ಮೋದಿ ಮಂಗಳೂರು ಭೇಟಿ ಹಿನ್ನೆಲೆ – ಮದ್ಯ ಮಾರಾಟ ನಿಷೇಧ

ಮಂಗಳೂರು : ಪ್ರಧಾನ ಮಂತ್ರಿ ಭೇಟಿ ಹಿನ್ನೆಲೆಯಲ್ಲಿ ಶನಿವಾರ ಬೆಳಿಗ್ಗೆ 6 ಗಂಟೆಯಿಂದ ಮಧ್ಯರಾತ್ರಿ 12 ಗಂಟೆಯವರೆಗೆ ಮಂಗಳೂರು, ಮೂಡುಬಿದಿರೆ ಹಾಗೂ ಬಂಟ್ವಾಳ ತಾಲ್ಲೂಕಿನಾದ್ಯಂತ ಮದ್ಯ ಮಾರಾಟ ನಿಷೇಧಿಸಲಾಗಿದೆ.

ಈ ಅವಧಿಯಲ್ಲಿ ಮದ್ಯ ಮಾರಾಟ ಮಳಿಗೆ, ಬಾರ್ ಆಂಡ್ ರೆಸ್ಟೋರೆಂಟ್, ಸೇರಿದಂತೆ ವಿಧದ ಮದ್ಯ ಮಾರಾಟದ ಪರವಾನಗಿ ಇರುವ ಅಂಗಡಿಗಳು ಹಾಗೂ ಮಾರಾಟ ಕೇಂದ್ರಗಳನ್ನು ಮುಚ್ಚುವಂತೆ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಆದೇಶಿಸಿದ್ದಾರೆ.

ಶನಿವಾರ ಬೆಳಿಗ್ಗೆ 8 ಗಂಟೆಯಿಂದ ಪ್ರಧಾನಿ ನರೇಂದ್ರ ಮೋದಿ ನಿರ್ಗಮಿಸುವವರೆಗೆ ಬಜ್ಪೆ ವಿಮಾನ ನಿಲ್ದಾಣದಿಂದ ನಗರದ ನೆಹರೂ ಮೈದಾನದವರೆಗೆ ರಸ್ತೆಯ ಎರಡೂ ಕಡೆಗಳಲ್ಲಿ ವಾಹನಗಳ ನಿಲುಗಡೆಯನ್ನು ನಿಷೇಧಿಸಿ ನಗರ ಪೊಲೀಸ್ ಆಯುಕ್ತರು ಆದೇಶ ಹೊರಡಿಸಿದ್ದಾರೆ.

ಲೋಕಸಭಾ ಚುನಾವಣೆಯ ಪ್ರಚಾರದ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ಶನಿವಾರ ನಗರಕ್ಕೆ ಬರಲಿದ್ದು, ಇಲ್ಲಿನ ನೆಹರೂ ಮೈದಾನದಲ್ಲಿ ಮಧ್ಯಾಹ್ನ 3.30ಕ್ಕೆ ಪ್ರಚಾರ ಭಾಷಣ ಮಾಡಲಿದ್ದಾರೆ. ನೆಹರೂ ಮೈದಾನದಲ್ಲಿ ಸಕಲ ಸಿದ್ಧತೆಗಳನ್ನು ಮಾಡಲಾಗುತ್ತಿದ್ದು, ವ್ಯಾಪಕ ತಪಾಸಣೆ ನಡೆಸಲಾಗಿದೆ.

ನಗರದಾದ್ಯಂತ ಬಿಗಿ ಬಂದೋಬಸ್ತ್ ಮಾಡಲಾಗಿದ್ದು, ವಾಹನಗಳ ಪಾರ್ಕಿಂಗ್ ಮತ್ತು ಸಂಚಾರ ವ್ಯವಸ್ಥೆಯಲ್ಲಿ ಬದಲಾವಣೆ ಮಾಡಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ತಿಳಿಸಿದ್ದಾರೆ.

ಐವರು ಎಸ್ಪಿ, ಡಿಸಿಪಿ, 10 ಮಂದಿ ಡಿವೈಎಸ್ಪಿ, ಎಸಿಪಿ, 36 ಪೊಲೀಸ್ ಇನ್ಸ್ಪೆಕ್ಟರ್, 67 ಸಬ್ ಇನ್ಸ್ಪೆಕ್ಟರ್, 147 ಎಎಸ್ಐ, 1,207 ಹೆಡ್ ಕಾನ್ಸ್ಟೆಬಲ್, ಕಾನ್ಸ್ಟೆಬಲ್ ಸೇರಿದಂತೆ ಒಟ್ಟು 1,472 ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿ, 92 ಗೃಹರಕ್ಷಕರನ್ನು ಬಂದೋಬಸ್ತ್ಗಾಗಿ ನಿಯೋಜಿಸಲಾಗಿದೆ.

5 ಕೆಎಸ್ಆರ್ಪಿ ತುಕಡಿ, 19 ಸಿಎಆರ್ ತುಕಡಿ ಹಾಗೂ 2 ಸಿಆರ್ಪಿಎಫ್ ತುಕಡಿಗಳ ಅಧಿಕಾರಿ ಮತ್ತು ಸಿಬ್ಬಂದಿ ಕರ್ತವ್ಯ ನಿರ್ವಹಿಸಲಿದ್ದಾರೆ. ಕಾರ್ಯಕ್ರಮ ನಡೆಯುವ ಸ್ಥಳ, ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಹಾಗೂ ಪ್ರಧಾನಿ ಸಂಚರಿಸುವ ಸ್ಥಳಗಳ ತಪಾಸಣೆಗಾಗಿ ವಿಶೇಷ ತಂಡ ರಚಿಸಲಾಗಿದೆ ಎಂದು ಹೇಳಿದ್ದಾರೆ.

ಕಾರ್ಯಕ್ರಮ ನಡೆಯುವ ನೆಹರೂ ಮೈದಾನದಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಮುಂಜಾಗ್ರತಾ ಕ್ರಮವಾಗಿ ನಗರದ ಹೋಟೆಲ್, ಲಾಡ್ಜ್ಗಳಲ್ಲಿ ತಪಾಸಣೆ ನಡೆಸಿ, ಸಂಶಯಾಸ್ಪದ ವ್ಯಕ್ತಿಗಳನ್ನು ವಿಚಾರಣೆಗೆ ಒಳಪಡಿಸಲಾಗುತ್ತಿದೆ ಎಂದು ಮಾಹಿತಿ ನೀಡಿದ್ದಾರೆ.