ಪ್ರಶಸ್ತಿಗೆ ತಡೆ: ಬಿಜೆಪಿ ಯುವ ಮೋರ್ಚಾ ಜಿಲ್ಲಾಧ್ಯಕ್ಷರಿಂದ ಕಾಂಗ್ರೆಸ್ ಪಾಠ ಕಲಿಯಬೇಕಾಗಿಲ್ಲ – ಸೌರಭ್ ಬಲ್ಲಾಳ್
ಉಡುಪಿ: ಹಿಜಾಬ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸರಕಾರಿ ಕಾಲೇಜಿನ ಪ್ರಾಂಶುಪಾಲರ ಪ್ರಶಸ್ತಿ ತಡೆ ಹಿಡಿದಿರುವುದು ದ್ವೇಷ ರಾಜಕೀಯ ಎಂಬ ಹೇಳಿಕೆ ನೀಡಿರುವ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷರಿಂದ ಪಾಠ ಕಲಿಯಬೇಕಾಗಿಲ್ಲ ಎಂದು ಉಡುಪಿ ಜಿಲ್ಲಾ ಎನ್ ಎಸ್ ಯು ಐ ಅಧ್ಯಕ್ಷ ಸೌರಭ್ ಬಲ್ಲಾಳ್ ಹೇಳಿದ್ದಾರೆ.
ಹಿಜಾಬ್ ವಿಚಾರದಲ್ಲಿ ಹಿಂದಿನ ಬಿಜೆಪಿ ನೇತೃತ್ವದ ರಾಜ್ಯ ಸರಕಾರ ಅನಾವಶ್ಯಕವಾಗಿ ಶಿಕ್ಷಣ ಪಡೆಯುವ ಮುಗ್ದ ಮಕ್ಕಳಲ್ಲಿ ಕೋಮು ಭಾವನೆ ಮೂಡಿಸುವ ಕೆಲಸ ಮಾಡಿತ್ತು. ಈ ಮೂಲಕ ಶಿಕ್ಷಣ ಪಡೆಯುವ ಮಕ್ಕಳ ಭವಿಷ್ಯದೊಂದಿಗೆ ಆಟವಾಡುವ ಮೂಲಕ ಧರ್ಮ ದ್ವೇಷದ ರಾಜಕೀಯ ಮಾಡಿ ಈಗ ಕಾಂಗ್ರೆಸ್ ಪಕ್ಷವನ್ನು ದೂಷಣೆ ಮಾಡುವ ಕೆಲಸ ಮಾಡುತ್ತಿರುವುದು ನಾಚೀಕೆಗೇಡು.
ಹಿಜಾಬ್ ವಿಚಾರದಲ್ಲಿ ಕುಂದಾಪುರ ಸರಕಾರಿ ಪದವಿ ಕಾಲೇಜಿನ ಪ್ರಾಂಶುಪಾಲರಾದ ಬಿ.ಜಿ ರಾಮಕೃಷ್ಣ ಅವರು ಶಿಕ್ಷಣ ಕಲಿಯಲು ಬಂದ ವಿದ್ಯಾರ್ಥಿಗಳನ್ನು ಕಾಲೇಜಿನ ಕ್ಯಾಂಪಸ್ ಒಳಗಡೆ ಕಾಲಿಡದಂತೆ ಗೇಟ್ ಮುಚ್ಚಿರುವುದು ಆಘಾತಕಾರಿ ಸಂಗತಿಯಾಗಿತ್ತು. ಅಧಿಕಾರಿಗಳ ಕಣ್ತಪ್ಪಿನಿಂದ ಅದೇ ಪ್ರಾಂಶುಪಾಲರಿಗೆ ಉತ್ತಮ ಪ್ರಾಂಶುಪಾಲ ಪ್ರಶಸ್ತಿಗೆ ಆಯ್ಕೆಯಾಗಿದ್ದು ಸಮಾಜಕ್ಕೆ ತಪ್ಪು ಸಂದೇಶ ಹೋಗಬಾರದು ಎನ್ನುವ ನಿಟ್ಟಿನಲ್ಲಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮವನ್ನು ಮುಂದೂಡಲಾಗಿದೆ. ರಾಷ್ಟ್ರ ಕವಿ ಕುವೆಂಪು ಅವರ ಪ್ರಕಾರ ಮಕ್ಕಳು ಅಂದ್ರೆ ವಿಶ್ವ ಮಾನವರು. ಆದ್ರೆ ಬಿಜೆಪಿಯವರು ಮಕ್ಕಳನ್ನು ಅಲ್ಪ ಮಾನವರನ್ನಾಗಿ ಮಾಡುವ ಕೆಲಸ ಮಾಡಿದ್ದರು.
ಶಿಕ್ಷಣ ಕಾಶಿ ಎಂದು ಕರೆಯಲ್ಪಡುವ ಉಡುಪಿ ಜಿಲ್ಲೆಯಲ್ಲಿ ಬಿಜೆಪಿ ಅವಧಿಯಲ್ಲಿ ಎಸ್ ಎಸ್ ಎಲ್ ಸಿ ಹಾಗೂ ಪಿಯು ಪರೀಕ್ಷೆಯ ಫಲಿತಾಂಶದಲ್ಲಿ ಹಿನ್ನಡೆ ಕಾಣಲು ಇದೇ ಹಿಜಾಬ್ ವಿವಾದ ಕಾರಣವಾಗಿತ್ತು ಆದರೆ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದ ಬಳಿಕ ಶಾಲಾ ಕಾಲೇಜುಗಳಲ್ಲಿ ಧರ್ಮ ರಾಜಕೀಯವನ್ನು ಮಾಡಲು ಅವಕಾಶ ನೀಡದೆ ಶಿಕ್ಷಣಕ್ಕೆ ಒತ್ತು ನೀಡಿದ ಪರಿಣಾಮ ಪ್ರಥಮ ಸ್ಥಾನವನ್ನು ಕಾಣಲು ಸಾಧ್ಯವಾಗಿದೆ. ಇದನ್ನು ಯುವ ಬಿಜೆಪಿ ಅಧ್ಯಕ್ಷರು ಮೊದಲು ತಿಳಿದುಕೊಂಡು ಬಳಿಕ ದ್ವೇಷ ರಾಜಕಾರಣದ ಕುರಿತು ಮಾತನಾಡಲಿ. ಕಾಂಗ್ರೆಸ್ ಸದಾ ಸರ್ವ ಜನಾಂಗದ ಶಾಂತಿಯ ತೋಟವನ್ನು ಕಾಣಲು ಪ್ರಯತ್ನಿಸುತ್ತದೆ ಹೊರತು ದ್ವೇಷದ ರಾಜಕೀಯ ಮಾಡುವುದು ಬಿಜೆಪಿ ಪಕ್ಷ ಎನ್ನುವುದು ಜಗತ್ತಿಗೆ ತಿಳಿದ ವಿಚಾರವಾಗಿದೆ ಎಂದು ಸೌರಭ್ ಬಲ್ಲಾಳ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.













